ಮಳೆಗಾಲ ಅಧಿವೇಶನ | ಇದೇನು ಸಂತೆಯೋ, ಜಾತ್ರೆಯೋ, ಹುಚ್ಚಾಸ್ಪತ್ರೆಯೋ? | ಶಾಸಕ, ಸಚಿವರ ವಿರುದ್ಧ ಗುಡುಗಿದ ಸ್ಪೀಕರ್ ಕಾಗೇರಿ

  • ಶಾಸಕರ ನಡೆಗೆ ಕಿಡಿ; ಸಚಿವರ ಕಿವಿ ಹಿಂಡಿದ ಸಭಾಧ್ಯಕ್ಷ ಕಾಗೇರಿ
  • 'ನಾಲ್ಕು ವರ್ಷವಾದರೂ ನನ್ನಿಂದಲೇ ಹೇಳಿಸಿಕೊಳ್ಳುತ್ತೀರಲ್ಲ' ಎಂದ ಸಭಾಧ್ಯಕ್ಷರು

ವಿಧಾನಸಭೆ ಮಳೆಗಾಲ ಅಧಿವೇಶನದ ಮೂರನೇ ದಿನದ ಕಲಾಪದಲ್ಲಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾಜ ಕಲ್ಯಾಣ ಸಚಿವರ ವಿರುದ್ಧ ಗರಂ ಆದ ಘಟನೆ ನಡೆಯಿತು. 

ಪ್ರಶ್ನೋತ್ತರ ಕಲಾಪದ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಲಾಖೆ ಕಾರ್ಯವೈಖರಿ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Eedina App

ಶಾಸಕರೊಬ್ಬರು ಸಮಾಜ ಕಲ್ಯಾಣ ಇಲಾಖೆಯ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರ ನೀಡುತ್ತಿದ್ದರು. ಆಗ ಅದೇ ಶಾಸಕರು, "ಇಲಾಖೆಯ ಯೋಜನೆ ಜಾರಿಯಾಗಿ ವರ್ಷವಾದರೂ ಬಿಲ್ ಬಿಡುಗಡೆಯಾಗಿಲ್ಲ, ಕೆಲ ಯೋಜನೆಗಳಿಗೆ ಅನುಮತಿ ಸಿಕ್ಕರೂ ಹಣವಿಲ್ಲದೆ ಕಾರ್ಯ ವಿಳಂಬವಾಗುತ್ತಿದೆ" ಎಂದು ದೂರಿದರು.

ಈ ವೇಳೆ ಸದಸ್ಯರ ಮಾತಿಗೆ ದನಿಗೂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, "ಸಚಿವರೇ, ಈ ವಿಚಾರದಲ್ಲಿ ನೀವು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ಹಲವು ಶಾಸಕರು ಈ ವಿಚಾರದಲ್ಲಿ  ಇಲಾಖೆಯನ್ನು ದೂರುತ್ತಿದ್ದಾರೆ. ಇಲಾಖೆ ಹಮ್ಮಿಕೊಂಡಿರುವ ಕೆಲಸಗಳನ್ನು ಸ್ವೀಡಪ್ ಮಾಡಬೇಕು, ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು. ಅನುದಾನದ ಕೊರತೆ ಇದ್ದರೆ ಪರಿಶೀಲಿಸಿ, ನೀವು ಸುಮ್ಮನಿದ್ದರೆ ಕಷ್ಟ. ಅಧಿಕಾರಿಗಳು ಏನು ಅಂತ ನಿಮಗೆ ಗೊತ್ತಿದ್ದೂ ಹೀಗೆ ಮಾಡಿದ್ರೆ ಹೇಗೆ? ಬೇಗ ಇವರ ಸಮಸ್ಯೆಗಳತ್ತ ಗಮನಹರಿಸಿ" ಎಂದು ಹೇಳಿದರು.

AV Eye Hospital ad

ಸ್ಪೀಕರ್ ಮಾತಿಗೆ ತಲೆಯಾಡಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಇಲಾಖೆ ಕೆಲಸಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ವಿಚಾರದಲ್ಲಿ ವಿಳಂಬವಾಗಿದೆ. ಆರ್ಥಿಕ ಇಲಾಖೆ ಒಪ್ಪಿಗೆಗೆ ಕಾಯುತ್ತಿದ್ದೇವೆ. ಹೀಗಾಗಿ ಶೇಕಡಾ 25% ಮಾತ್ರ ಅನುದಾನ ಬಿಡುಗಡೆಯಾಗಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ" ಎಂದು ಸದನಕ್ಕೆ ತಿಳಿಸಿದರು.

ಇದಾದ ಬಳಿಕ ಕೆಲವು ಶಾಸಕರ ಸದನದೊಳಗಿನ ನಡತೆ ಬಗ್ಗೆಯೂ ಸ್ಪೀಕರ್ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸದನಕ್ಕೆ ಅಗತ್ಯ ಮಾಹಿತಿ ಕೊಡುತ್ತಿದ ವೇಳೆ, ಸಚಿವ ಮುನಿರತ್ನ ಮತ್ತು ಶಾಸಕ ಎಸ್ ಆರ್ ವಿಶ್ವನಾಥ್, ಜೆಡಿಎಸ್‌ನ ಅನ್ನದಾನಿ ಸೇರಿದಂತೆ ಹಲವರು ಸದನದೊಳಗೆ ಗುಂಪುಗೂಡಿ ಮಾತನಾಡಲಾಂಭಿಸಿದ್ದರು.

ಈ ಸುದ್ದಿ ಓದಿದ್ದೀರಾ? : ರಾಜ್ಯಾದ್ಯಂತ ಎಲೆಕ್ಟ್ರಿಕಲ್ ಬಸ್ ಸೇವೆ ವಿಸ್ತರಣೆ ಮಾಡುತ್ತೇವೆ: ಸಾರಿಗೆ ಸಚಿವ ಶ್ರೀರಾಮುಲು

ಇದನ್ನು ಗಮನಿಸಿದ ಸ್ಪೀಕರ್ ಕಾಗೇರಿ, "ಸಂತೆಯೋ, ಜಾತ್ರೆಯೋ, ಹುಚ್ಚಾಸ್ಪತ್ರೆಯೋ? ಸರ್ಕಾರ ಉತ್ತರ ಕೊಡುವಾಗ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲವೇ? ಬಂದು ನಾಲ್ಕು ವರ್ಷವಾದರೂ ನನ್ನಿಂದ ಹೇಳಿಸಿಕೊಳ್ಳುತ್ತೀರಲ್ಲಾ" ಎಂದು ಏರು ದನಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು. ಸ್ಪೀಕರ್ ಅವರ ಮಾತಿನ ಚಾಟಿಯಿಂದ ಎಚ್ಚೆತ್ತುಕೊಂಡ ಶಾಸಕರು, ಬಳಿಕ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಟ್ಟರು. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app