ಕಬ್ಬಿಗೆ ಬೆಲೆ ನಿಗದಿ | ಸಮಿತಿ ರಚನೆ ಮಾಡಿದ ಸರ್ಕಾರ; ವಾರದೊಳಗೆ ವರದಿ ಸಲ್ಲಿಸಲು ಸೂಚನೆ

shankar patil munena koppa kabbu meeting
  • ಒಂದು ವಾರದ ಗಡುವಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿರುವ ಬೆಲೆ ನಿಗದಿ ಸಮಿತಿ
  • ದರ ನಿಗದಿ ವಿಚಾರದಲ್ಲಿ ಸರ್ಕಾರ ರೈತರ ಪರವಾಗಿಯೇ ನಿರ್ಣಯ ಕೈಗೊಳ್ಳುತ್ತದೆ 

ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿನ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಮಿತಿಯೊಂದನ್ನು ಸರ್ಕಾರ ರಚನೆ ಮಾಡಿದೆ. ಈ ಸಮಿತಿ ವಾರದೊಳಗೆ ವೈಜ್ಞಾನಿಕ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಕಬ್ಬು ಬೆಳೆ ಬೆಲೆ ನಿಗದಿ ಸಂಬಂಧ ವಿಕಾಸಸೌಧದಲ್ಲಿ ಇಂದು ( ನ.10) ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ, ಸಕ್ಕರೆ ನಿಯಂತ್ರಣ ಮಂಡಳಿ, ರೈತ ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ(ಸರ್ಕಾರಿ ಹಾಗೂ ಖಾಸಗಿ) ಸಭೆ ನಡೆಸಿದರು.

ಸಭೆಯಲ್ಲಿ ಕಬ್ಬು ಬೆಳೆಗಾರರ ರೇಟ್ ಚಾರ್ಜ್, ಕಬ್ಬು ಕಟಾವು ದರ ಹೆಚ್ಚಳ, ಎಫ್‌ಆರ್‌ಪಿ ಹೆಚ್ಚಿಸುವ ವಿಚಾರ ಸೇರಿದಂತೆ ಕಬ್ಬು ಬೆಳೆ ಬಗೆಗಿನ ಇತರೆ ವಿಚಾರಗಳ ಕುರಿತು ಚರ್ಚಿಸಲಾಯಿತು. ಅಂತಿಮವಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಮಿತಿಯೊಂದನ್ನು ರಚಿಸಲು ಸಭೆ ನಿರ್ಧರಿಸಿತು. ಹಾಗೆಯೇ ಈ ಸಮಿತಿ ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಿ ಇರುವುದಾಗಿ ಕಬ್ಬು ಬೆಳೆಗಾರರು ಒಪ್ಪಿಕೊಂಡರು.

ಇದಾದ ಬಳಿಕ ಸಭೆ ನಡೆದ ಜಾಗದಲ್ಲೆ ಸಮಾವೇಶಗೊಂಡ ಸಮಿತಿ, ಸಕ್ಕರೆ ಹಾಗೂ ಸಕ್ಕರೆ ಸಹ ಉತ್ಪನ್ನಗಳ ದರವನ್ನು ಹೆಚ್ಚಿಸಿ, ರೈತರು ಲಾಭವನ್ನು ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ ಈ ಸಂಬಂಧ ವೈಜ್ಞಾನಿಕ ಅಧ್ಯಯನ ನಡೆಸಿ ಒಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ನಿರ್ಧರಿಸಿದೆ.

AV Eye Hospital ad

ಹೀಗೆ ಕಬ್ಬಿನ ಬೆಲೆ ನಿಗದಿ ವಿಚಾರದ ಜವಾ‍ಬ್ದಾರಿಯನ್ನು ಸರ್ಕಾರದ ಹೆಗಲಿಗೇರಿಸಿರುವ ಸಭೆಯ ಪ್ರತಿನಿಧಿಗಳು, ಸರ್ಕಾರ ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಕಾದುನೋಡಲು ನಿರ್ಧರಿಸಿದೆ.

ಇತ್ತ ಸರ್ಕಾರದ ಪರ ಸಭೆಗೆ ಭರವಸೆ ನೀಡಿದ ಸಕ್ಕರೆ ಸಚಿವರು, ಈಗ ರೈತರು ಕೇಳುತ್ತಿರುವಂತೆ ಎಫ್‌ಆರ್‌ಪಿ ದರಕ್ಕಿಂತಲೂ ಹೆಚ್ಚು ಮೊತ್ತವನ್ನು ಕೊಡಿಸಲು ಸರ್ಕಾರ ಶ್ರಮಿಸುತ್ತಿದೆ. ಕಾರ್ಖಾನೆ ಮಾಲೀಕರಿಗೂ ತೊಂದರೆಯಾಗದ ರೀತಿಯಲ್ಲಿ ರೈತರಿಗೂ ಹಿತ ಎನಿಸುವಂತೆ ಒಂದು ನಿರ್ಣಯವನ್ನು ಕೈಗೊಳ್ಳಲಾಗುವುದು. ರೈತರು ಸಹಕರಿಸಬೇಕು. ಸರ್ಕಾರ ರೈತರ ಪರವಾಗಿದೆ. ರೈತರ ಪರವಾಗಿಯೇ ನಿರ್ಣಯ ಕೈಗೊಳ್ಳಲಾಗುವುದು ಎಂದರು.

 ಈ ಸುದ್ದಿ ಓದಿದ್ದೀರಾ? : ಕಬ್ಬು ಬೆಳೆಗೆ ಎಫ್‌ಆರ್‌ಪಿ ನಿಗದಿ ವಿಚಾರ | ರಾಜ್ಯದ ಹಲವೆಡೆ ಪ್ರತಿಭಟನೆ; ಸರ್ಕಾರದ ವಿರುದ್ಧ ರೈತರು ಕೆಂಡಾಮಂಡಲ

ಸಕ್ಕರೆ ಸಚಿವರು ರಚಿಸಿರುವ ಸಮಿತಿ ಸದಸ್ಯರ ವಿವರ ಹೀಗಿದೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕ ಮಂಡಳಿಯ ಆಯುಕ್ತ ಶಿವಾನಂದ ಹೆಚ್ ಕಲಕೇರಿ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸಕ್ಕರೆ ಕಾರ್ಖಾನೆ ಸಲಹೆಗಾರರಾದ ಬೆಳಗಾವಿಯ ಎಸ್. ನಿಜಲಿಂಗಪ್ಪ, ತಜ್ಞರಾದ ಡಾ.ಎಂ ಬಿ ಲೋಂಡ, ಮತ್ತು ಡಾ. ಆರ್ ಬಿ ಖಾಂಡಗಾವ, ಹಾಗೂ ಬೆಳಗಾವಿ ರೇಣುಕಾ ಶುಗರ್ ಮಿಲ್‌ನ ಉಪಾಧ್ಯಕ್ಷ ಡಾ. ಗೋವಿಂದ ಮಿಸಾಲೆ, ಪ್ರವೀಣ್ ಘಾಳಿ ಸದಸ್ಯರುಗಳಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app