ಕುಂಟು ನೆಪ ಮುಂದಿಟ್ಟು ಪಕ್ಷ ತ್ಯಜಿಸಿದ ಗುಲಾಂ ನಬಿ ಆಜಾದ್ ನಿರ್ಧಾರ ಖಂಡನೀಯ: ವಿಪಕ್ಷ ನಾಯಕ ಸಿದ್ದರಾಮಯ್ಯ

  • ರಾಹುಲ್ ಗಾಂಧಿ ಮೇಲೆ ಆಧಾರರಹಿತ ಆರೋಪ ಮಾಡಿರುವುದು ಖಂಡನಾರ್ಹ
  • ಗುಲಾಂ ನಬಿ ಆಜಾದ್ ರಾಜೀನಾಮೆ ಪತ್ರದಲ್ಲಿ ಎದುರಾಳಿಯನ್ನು ಖುಷಿಪಡಿಸುವ ದುರುದ್ದೇಶವಿದೆ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ವಿಷಾದನೀಯ ಬೆಳವಣಿಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಪತ್ರಿಕಾ‌ ಪ್ರಕಟಣೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ರಾಜೀನಾಮೆ ವಿಚಾರವನ್ನು ಖಂಡಿಸಿದ್ದಾರೆ.

"ಇತ್ತೀಚಿನ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಕಾಂಗ್ರೆಸ್ ಪಕ್ಷ ಕಷ್ಟದ ದಿನಗಳಲ್ಲಿದೆ. ಇದಕ್ಕಿಂತಲೂ ಮುಖ್ಯವಾಗಿ ಸರ್ವಾಧಿಕಾರಿ ಪ್ರಭುತ್ವದಿಂದಾಗಿ ದೇಶ ಕಷ್ಟದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರದಲ್ಲಿದೆ. ಸಂವಿಧಾನದ ಒಂದೊಂದು ಸ್ಥಂಭಗಳೇ ನಮ್ಮ ಕಣ್ಣೆದುರಿಗೆ ಉರುಳಿ ಬೀಳುತ್ತಿವೆ. ದೇಶದಾದ್ಯಂತ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಹಲ್ಲೆ-ದೌರ್ಜನ್ಯಗಳು ನಡೆಯುತ್ತಿವೆ. ಈ ಸಮುದಾಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ" ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.  

"ಪಕ್ಷದ ಒಳ್ಳೆಯ ದಿನಗಳಲ್ಲಿ ಅದರ ಜೊತೆ ಗುರುತಿಸಿಕೊಂಡು ಎಲ್ಲ ಅವಕಾಶಗಳನ್ನು ಪಡೆದ ಯಾವನೇ ವ್ಯಕ್ತಿ ಪಕ್ಷದ ಕಷ್ಟದ ಕಾಲದಲ್ಲಿ ಅದರ ಜೊತೆಗೆ ನಿಲ್ಲಬೇಕಾಗಿರುವುದು ಕರ್ತವ್ಯವಾಗಿದೆ. ಆದರೆ, ಆಜಾದ್ ಅವರು ಪಕ್ಷದ ಕಷ್ಟದ ಕಾಲದಲ್ಲಿಯೇ ಕುಂಟುನೆಪಗಳನ್ನು ಮುಂದಿಟ್ಟು ಪಕ್ಷವನ್ನು ತ್ಯಜಿಸಿ ಹೋಗಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗುಲಾಂ ನಬಿ ಆಜಾದ್ ಪಕ್ಷದ ಉಪಕಾರ ಮರೆತಿರುವುದು ಖಂಡನೀಯ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ 

"ಕಾಂಗ್ರೆಸ್ ಪಕ್ಷವನ್ನು ತೊರೆದು ಅವರ ಪಾಡಿಗೆ ಅವರು ಹೋಗಿ ಬಿಟ್ಟಿದ್ದರೆ ಅವರಿಗೆ ಶುಭ ಕೋರಿ ಬೀಳ್ಕೊಡಬಹುದಿತ್ತೇನೋ? ಆದರೆ, ಅವರು ತಮ್ಮ ನಿರ್ಗಮನದ ಜೊತೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ವಿರುದ್ದ  ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ. ಇದನ್ನು ಕಾಂಗ್ರೆಸ್  ಪಕ್ಷದಲ್ಲಿರುವ ಯಾರೂ ಒಪ್ಪಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ತಾವು ಸಚಿವರಾಗದೆ, ಹಿರಿಯರಾದ ಗುಲಾಂ ನಬಿ ಆಜಾದ್ ಅವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರು. ಈಗ ಇದೇ ಆಜಾದ್ ಅವರು ರಾಹುಲ್ ಗಾಂಧಿಯವರ ಮೇಲೆ ವೈಯಕ್ತಿಕ ಮಟ್ಟದ ದಾಳಿಗಿಳಿದಿರುವುದು ಖಂಡನೀಯ" ಎಂದು ಸಿದ್ದರಾಮಯ್ಯ ಹೇಳಿದರು.

"ಗೆಲುವಿಗೆ  ಹಲವಾರು ತಂದೆಗಳಿರುತ್ತಾರೆ. ಸೋಲು ಅನಾಥ. ಕಾಂಗ್ರೆಸ್ ಪಕ್ಷ ಗೆಲುವಿನ ಹಾದಿಯಲ್ಲಿರುವಾಗ ಸರ್ಕಾರ ಮತ್ತು ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿದ್ದ ಗುಲಾಂ ನಬಿ ಆಜಾದ್ ಅವರು ಈಗ ಪಕ್ಷ ಕಷ್ಟದಲ್ಲಿರುವಾಗ ಅದರ ದೂಷಣೆಗೆ ಇಳಿದಿರುವುದು ಅವರ ವಯಸ್ಸು ಮತ್ತು ಅನುಭವಕ್ಕೆ ತಕ್ಕುದಾದುದಲ್ಲ. ಬದಲಾಗಿರುವ ಕಾಲ ಮತ್ತು ತಲೆಮಾರಿಗೆ ಪ್ರಸ್ತುತವಾಗುವ ರೀತಿಯಲ್ಲಿ ಪಕ್ಷವನ್ನು ಕಟ್ಟುವ ಪ್ರಯತ್ನವನ್ನು ರಾಹುಲ್ ಮಾಡುತ್ತಾ ಬಂದಿದ್ದಾರೆ. ಪಕ್ಷಕ್ಕೆ ಹೊಸರಕ್ತ ತುಂಬುವ ಪ್ರಯತ್ನದಲ್ಲಿ ಹಳೆಯ ತಲೆಗಳನ್ನು ಬದಲಾವಣೆ ಮಾಡುವುದು ಅನಿವಾರ್ಯವಾಗಿತ್ತು. ಈ ಬದಲಾವಣೆ ಕೂಡಾ ಅವರ ವೈಯಕ್ತಿಕ ನಿರ್ಧಾರವಾಗದೆ ಪಕ್ಷದ ಒಟ್ಟು ನಿರ್ಧಾರವಾಗಿತ್ತು ಎನ್ನುವುದನ್ನು ಪಕ್ಷದೊಳಗಿನ ನಾಯಕರೆಲ್ಲರೂ ಬಲ್ಲರು" ಎಂದು ಹೇಳಿದ್ದಾರೆ.

"ಗುಲಾಂ ನಬಿ ಆಜಾದ್ ಅವರು ರಾಜೀನಾಮೆ ನೀಡಿರುವ ಹೊತ್ತು ಮತ್ತು ಅವರ ರಾಜೀನಾಮೆ ಪತ್ರದ ಒಕ್ಕಣೆಯನ್ನು ನೋಡಿದರೆ ತಮಗೆ ಆಗಿರುವ ನೋವನ್ನು ವ್ಯಕ್ತಪಡಿಸುವ ಸದುದ್ದೇಶಕ್ಕಿಂತಲೂ, ನಮ್ಮ ಪ್ರಮುಖ ಎದುರಾಳಿ ಪಕ್ಷವನ್ನು ಖುಷಿಪಡಿಸುವ ದುರುದ್ದೇಶ ಇದ್ದಂತೆ ಕಾಣುತ್ತಿದೆ" ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಗುಲಾಂ ನಬಿ ಆಜಾದ್‌ ಕಾಂಗ್ರೆಸ್ ತೊರೆದಿರುವುದಕ್ಕೆ ವಿಷಾದವಿದೆ: ಮಲ್ಲಿಕಾರ್ಜುನ ಖರ್ಗೆ

"ಕೋಟ್ಯಂತರ ಕಾರ್ಯಕರ್ತರ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಒಬ್ಬ ನಾಯಕನ ನಿರ್ಗಮನ ಯಾವ ಪರಿಣಾಮವನ್ನೂ ಬೀರದು. ಆಡಳಿತ ಪಕ್ಷ ಸರ್ವಾಧಿಕಾರಿಯ ರೂಪ ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೆಡವಿ ಹಾಕಲು ಹೊರಟಿರುವ ಈ ದುರೀತ ಕಾಲದಲ್ಲಿ ದೇಶವನ್ನು ಉಳಿಸುವ ದೊಡ್ಡ ಜವಾಬ್ದಾರಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಮೇಲಿದೆ. ಒಬ್ಬ ವ್ಯಕ್ತಿಯ ನಿರ್ಗಮನದಿಂದ ವಿಚಲಿತರಾಗದೆ ದೇಶ ಉಳಿಸುವ ಕರ್ತವ್ಯವನ್ನು ನಾವೆಲ್ಲರೂ ಜವಾಬ್ದಾರಿಯಿಂದ, ಸಂಘಟಿತರಾಗಿ ನಿಭಾಯಿಸಲು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಕಟಿಬದ್ಧರಾಗಬೇಕು" ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್