‘ಬಸವ ಭೂಷಣ’ ಪ್ರಶಸ್ತಿ ಹಿಂದಿರುಗಿಸಿ ; ಬೊಮ್ಮಾಯಿಗೆ ನೈಜ ಹೋರಾಟಗಾರರ ವೇದಿಕೆ ಆಗ್ರಹ

basavaraj bommai
  • ಮಠದ ಸ್ವಾಮೀಜಿಯೊಬ್ಬರು ಪ್ರಶಸ್ತಿ ಕೊಟ್ಟಾಗ ನಿರಾಕರಿಸಬಹುದಿತ್ತು
  • ಪ್ರಶಸ್ತಿ ಹಿಂದಿರುಗಿಸಿ ನಾಡಿನ ಗೌರವ, ಘನತೆಯನ್ನು ಇನ್ನಷ್ಟು ಹೆಚ್ಚಿಸಿ

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ತಮಗೆ ನೀಡಿರುವ ‘ಬಸವ ಭೂಷಣ’ ಪ್ರಶಸ್ತಿಯನ್ನು ವಾಪಸು ಕೊಡಿ ಎಂದು ಆಗ್ರಹಿಸಿ ಕರ್ನಾಟಕ ನೈಜ ಹೋರಾಟಗಾರರ ವೇದಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.

“ಚಿತ್ರದುರ್ಗ ಮುರುಘಾ ಮಠದ ಅಂದಿನ ಸ್ವಾಮೀಜಿ ಶಿವಮೂರ್ತಿ ನೇತೃತ್ವದಲ್ಲಿ ಶರಣರ ಉತ್ಸವ ಮತ್ತು ಸಂಸ್ಕೃತಿ ಎಂಬ ಹೆಸರಿನೊಂದಿಗೆ ನಡೆದ ಸಮಾರಂಭದಲ್ಲಿ ತಮಗೆ 'ಬಸವ ಭೂಷಣ' ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ನಾವು ನೋಡಿದ್ದೇವೆ. ನಾಡಿನ ಪ್ರಜ್ಞಾವಂತ, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪ್ರಗತಿಪರ ಚಿಂತಕರಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರು ಒಂದು ಮಠದ ಸ್ವಾಮೀಜಿ ಕರೆದು ಪ್ರಶಸ್ತಿ ಕೊಟ್ಟಾಗ ಅದನ್ನು ಸ್ವೀಕರಿಸುವ ಬದಲು ನಿರಾಕರಿಸಬಹುದಿತ್ತು ಎಂದೆನಿಸಿದ್ದು ಸುಳ್ಳಲ್ಲ” ಎಂದು ಹೇಳಿದ್ದಾರೆ.

“ನೀವು ಒಂದು ಸಮುದಾಯದ ಮುಖ್ಯಮಂತ್ರಿ ಆಗಿರಲಿಲ್ಲ; ಸರ್ವ ಜನಾಂಗದ, ನಾಡಿನ ಕೋಟ್ಯಾಂತರ ಜನರ ಜನಪ್ರತಿನಿಧಿಯಾಗಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾವು, ಇಂತಹ ಪ್ರಶಸ್ತಿಗಳನ್ನು ಕೊಡುವ ಮಠಮಾನ್ಯಗಳು, ಸಂಘ-ಸಂಸ್ಥೆಗಳ ಹಿಂದೆ ಏನಾದರೂ ಒಂದು ಹುನ್ನಾರ, ಷಡ್ಯಂತ್ರ ಇರಬಹುದು ಎಂಬ ಸಾಮಾನ್ಯ ಜ್ಞಾನವಿರಬೇಕಾಗಿತ್ತು. ಗುಪ್ತಚರ ಇಲಾಖೆಯಿಂದ ವರದಿ ತರಿಸಿ ನೋಡಬಹುದಿತ್ತು. ವರದಿಯನ್ನು ಆಧರಿಸಿ ಪ್ರಶಸ್ತಿ ಸ್ವೀಕರಿಸುವ ಅಥವಾ ನಿರಾಕರಿಸುವ ಆಯ್ಕೆ ಮಾಡಿಕೊಳ್ಳಬಹುದಿತ್ತು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

“ನಾಡಿನ ಹೆಸರಾಂತ ಸಂತ, ಸರ್ವಸಂಗ ಪರಿತ್ಯಾಗಿ, ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿ ತಮಗೆ ಕೇಂದ್ರ ಸರ್ಕಾರ ನೀಡಲು ಬಂದ ಅತ್ಯುನ್ನತ ಪ್ರಶಸ್ತಿಯನ್ನು ಪ್ರೀತಿಪೂರ್ವಕವಾಗಿ ನಿರಾಕರಿಸಿದ್ದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೇವೆ” ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

AV Eye Hospital ad

“ತಾವು ರಾಜ್ಯದ ಗೃಹ ಸಚಿವರಾಗಿದ್ದಾಗ ರಾಜ್ಯದಲ್ಲಿ ತುಕುಡೆ-ತುಕುಡೆ ಗ್ಯಾಂಗ್ ಇದೆ ಎಂದು ಹೇಳಿರುವುದು ನೆನಪಿದೆ. ಆದರೆ, ತಾವು ಬಸವ ಭೂಷಣ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ತುಕುಡೆ ಗ್ಯಾಂಗ್‌ನಿಂದ ಅಥವಾ ಕಾವಿಯೊಳಗಿನ ಕಾಮಿ ಇಂದ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೋ, ಇಲ್ಲವೋ ಎಂಬ ಬಗ್ಗೆ ಗುಪ್ತಚರ ಇಲಾಖೆಯಿಂದ ವರದಿ ತರಿಸಬಹುದಿತ್ತು. ನಂತರ ಇದು ಯಾವ ಗ್ಯಾಂಗ್ ಎಂದು ಮಾಹಿತಿ ಪಡೆಯಬಹುದಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ” ಎಂದು ವ್ಯಂಗ್ಯ ಮಾಡಿದ್ದಾರೆ.

“ನಿಮ್ಮ ತಂದೆಯವರಾದ ಎಸ್ ಆರ್ ಬೊಮ್ಮಾಯಿ ಅವರ ಆಡಳಿತವನ್ನು ನಾವು ಹತ್ತಿರದಿಂದ ನೋಡಿ ಸಂತೋಷ ಪಟ್ಟಿದ್ದೇವೆ. ಆದರೆ, ತಾವು ಮಾಡುತ್ತಿರುವುದಾದರೂ ಏನು? ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶಕ್ಕೆ ನೀಡಿದ ಅತ್ಯುನ್ನತ ಸಂವಿಧಾನವನ್ನು ಬದಿಗಿರಿಸಿ; ನಮ್ಮ ಜಾತಿ, ನಮ್ಮ ಹಿಂದೂ, ಸನಾತನ ಧರ್ಮ, ಸಂಪ್ರದಾಯ, ಮಠ, ಸ್ವಾಮೀಜಿ ಎಂದು ಹಿಂಬಾಲಿಸುತ್ತಿದ್ದೀರಾ” ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ | ಅನಾವರಣಕ್ಕೆ ಸಿದ್ಧವಾಯ್ತು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’; ನಾಳೆ ಪ್ರಧಾನಿಯಿಂದ ಉದ್ಘಾಟನೆ

“ಕಾವಿಯೊಳಗಿದ್ದ ಕಾಮಿ ಸ್ವಾಮೀಜಿಯ ದುಷ್ಕೃತ್ಯದ ಕೈಯಿಂದ ‘ಬಸವ ಭೂಷಣ’ ಪ್ರಶಸ್ತಿ ಪಡೆದಿರುವುದು ಆಡಳಿತ ನಡೆಸುವ ವೈಖರಿಯ ವೈಫಲ್ಯದ ಜೊತೆಗೆ, ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯ. ಆದ್ದರಿಂದ, ದಯಮಾಡಿ ಈಗ ಶಿವಮೂರ್ತಿಯ ಮುಖದ ಮೇಲೆ ಬಸವ ಭೂಷಣ ಪ್ರಶಸ್ತಿಯನ್ನು ಎಸೆದು, ಈ ನಾಡಿನ ಗೌರವ ಮತ್ತು ಘನತೆ ಇನ್ನಷ್ಟು ಹೆಚ್ಚಿಸಬೇಕೆಂದು ನಾವು ನಿಮ್ಮಲ್ಲಿ ಪ್ರಜ್ಞಾಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ" ಎಂದು ಮನವಿ ಮಾಡಿದ್ದಾರೆ.

"ಇಂತಹ ಕುಕೃತ್ಯದ ಸ್ವಾಮೀಜಿಯ ಕೈಯಿಂದ ನಾಡಿನ ಉದ್ದಗಲಕ್ಕೂ ಪ್ರಶಸ್ತಿ ಪಡೆದವರು ಪ್ರಶಸ್ತಿಯನ್ನು ವಾಪಸ್ ಕೊಡಲು ತಾವು ಮಾದರಿಯಾಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ” ಎಂದು ಪ್ರಶಸ್ತಿ ಮರಳಿಸುವಂತೆ ಸಲಹೆ ಕೊಟ್ಟಿದ್ದಾರೆ.

“ಈ ಎಲ್ಲ ಹಿನ್ನೆಲೆಯಲ್ಲಿ, ರಾಜ್ಯದ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ತಂದಿರುವ ಕಪಟ, ಕಾವಿಯೊಳಗಿನ ಕಾಮಿ ಶಿವಮೂರ್ತಿಯಿಂದ ಪಡೆದ ಬಸವ ಭೂಷಣ ಪ್ರಶಸ್ತಿಯನ್ನು ಶಿವಮೂರ್ತಿಯ ಮುಖಕ್ಕೆ ಎಸೆದು ಬರಬೇಕೆಂಬುದು ನಮ್ಮೆಲ್ಲರ ಆಶಯ ಮತ್ತು ವಿನಯ ಪೂರ್ವಕ ಆಗ್ರಹವಾಗಿದೆ” ಎಂದು ಕರ್ನಾಟಕ ನೈಜ ಹೋರಾಟಗಾರರ ವೇದಿಕೆ ಪತ್ರದಲ್ಲಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app