ಮಳೆಹಾನಿ ಪ್ಯಾಕೇಜ್ ಘೋಷಿಸಿದ ಸರ್ಕಾರ | 24 ಗಂಟೆಯೊಳಗೆ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

R Ashok
  • ಅತಿವೃಷ್ಟಿ, ಪ್ರವಾಹ ಪೀಡಿತರ ನೆರವಿಗೆ ನಿಂತ ಸರ್ಕಾರ 
  • ಪರಿಹಾರ ಪ್ಯಾಕೇಜ್ ಘೋಷಿಸಿದ ಕಂದಾಯ ಸಚಿವ ಅಶೋಕ್

ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಪರಿಹಾರ ಘೋಷಣೆ ಮಾಡಲಾಗಿದ್ದು, ಮನೆ ಹಾನಿಗೆ ₹5 ಲಕ್ಷ ಮತ್ತು ಬೆಳೆ ಹಾನಿಗೆ ₹13 ಸಾವಿರ ನೆರವು ನೀಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮನೆ ಹಾನಿ, ಬೆಳೆ ಹಾನಿ, ಮತ್ತು ಪ್ರವಾಹ ಸಂತ್ರಸ್ತರಿಗೂ ಪರಿಹಾರ ಘೋಷಣೆ ಮಾಡಿದರು.

“ರಾಜ್ಯದಲ್ಲಿ ಇದುವರೆಗೆ ಮಳೆಯಿಂದಾಗಿ 73 ಮಂದಿ ಸಾವನ್ನಪ್ಪಿದ್ದಾರೆ. 14 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, 8197 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿಲಾಗಿದೆ” ಎಂದು ಅವರು ತಿಳಿಸಿದರು.  

“ಒಟ್ಟಾರೆ 666ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಹಲವರು ಮನೆಮಠ ಕಳೆದುಕೊಂಡಿದ್ದಾರೆ. ಸರ್ಕಾರ ಸಮಸ್ಯೆ ಪರಿಹಾರದತ್ತ ಗಮನ ಹರಿಸಿದೆ. ಈ ಸಲುವಾಗಿ ಪರಿಹಾರ ಹಣ ಬಿಡುಗಡೆ ಮಾಡುತ್ತಿದೆ” ಎಂದು ಅವರು ಹೇಳಿದರು. 

“ಮಳೆಯಿಂದ ಮೃತರಾದವರಿಗೆ 24 ಗಂಟೆಯೊಳಗೆ ಸಿಗುವಂತೆ ₹5 ಲಕ್ಷ ಪರಿಹಾರಧನ ಘೋಷಣೆ ಮಾಡಲಾಗಿದೆ. ಸಂಪೂರ್ಣ ಮನೆ ಕಳೆದು ಕೊಂಡವರಿಗೂ ₹5 ಲಕ್ಷ ನೀಡಲಾಗುತ್ತಿದೆ. ಬೆಳೆ ಹಾನಿಗೂ ಸ್ಥಿತಿಗತಿ ನೋಡಿ ಪರಿಹಾರ ನೀಡಲಾಗುವುದು” ಎಂದು ಅವರು ಹೇಳಿದರು. 

“ಪ್ರವಾಹ ಸಂತ್ರಸ್ತರಿಗೆ ತುರ್ತು ₹10 ಸಾವಿರ ಸಹಾಯಧನ ನೀಡುತ್ತಿದ್ದೇವೆ. ಇದರ ಜೊತೆಗೆ ಕಾಳಜಿ ಕೇಂದ್ರ ಸ್ಥಾಪಿಸಿ ಅವರ ಆರೈಕೆ ಮಾಡಲಾಗುತ್ತಿದೆ. ಮರಳಿ ಮನೆಗೆ ತೆರಳುವ ವೇಳೆ 20 ದಿನಗಳಿಗಾಗುವ ಪರಿಹಾರ ಕಿಟ್ ಅನ್ನು ಮಳೆ ಸಂತ್ರಸ್ತರಿಗೆ ವಿತರಿಸಲಾಗುತ್ತದೆ” ಎಂದು ಅಶೋಕ್ ತಿಳಿಸಿದರು.

“ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದ್ದು, 14 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಪ್ರವಾಹದಿಂದ 161 ಗ್ರಾಮಗಳಲ್ಲಿ ಹಾನಿ ಉಂಟಾಗಿದೆ. 73 ಜನ ಸಾವನ್ನಪ್ಪಿದ್ದು, ಸಿಡಿಲು ಬಡಿದು 15 ಮಂದಿ, ಮರಬಿದ್ದು 5 ಮಂದಿ, ಮನೆ ಕುಸಿತದಿಂದ 16, ಪ್ರವಾಹಕ್ಕೆ ಸಿಲುಕಿ 24 ಮಂದಿ ಸಾವನ್ನಪ್ಪಿದ್ದಾರೆ. ಭೂ ಕುಸಿತ ಮತ್ತು ವಿದ್ಯುತ್ ಶಾಕ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ?: ತ್ರಿವರ್ಣ ಧ್ವಜ ವಿರೋಧಿಸಿದ್ದ ಸಾವರ್ಕರ್ ಅವರನ್ನು ಆರ್‌ಎಸ್ಎಸ್‌ ಆರಾಧಿಸುತ್ತದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

“ಕಾಳಜಿ ಕೇಂದ್ರಗಳಲ್ಲಿ ಕೆಲ ಬದಲಾವಣೆ ತಂದಿದ್ದೇವೆ. ಪ್ರವಾಹ ತಗ್ಗಿದ ನಂತರ ಮನೆಗೆ ಮರಳುವವರಿಗೆ ‘ಕಾಳಜಿ ಕಿಟ್’ ನೀಡುತ್ತೇವೆ. 10 ರಿಂದ 15 ದಿನಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನು ನೀಡುತ್ತೇವೆ. 10 ಕೆ.ಜಿ‌. ಅಕ್ಕಿ, 1 ಕೆಜಿ ತೊಗರಿ, 1 ಲೀಟರ್ ಎಣ್ಣೆ, 100 ಗ್ರಾಂ. ಟೀ, ಅರಿಶಿನ ಪುಡಿ ನೀಡುತ್ತೇವೆ” ಎಂದು ಅಶೋಕ್ ಘೋಷಣೆ ಮಾಡಿದರು.

ಮಳೆಯಿಂದ 2,949 ಮನೆಗಳಿಗೆ ಹಾನಿ

ಮಳೆಯಿಂದ ಸುಮಾರು 2,949 ಮನೆಗಳು ಸಂಪೂರ್ಣ ಹಾಳಾಗಿವೆ. 17,750 ಮನೆಗಳು ಭಾಗಶಃ ಹಾನಿಯಾಗಿವೆ. 204 ದೊಡ್ಡ ಜಾನುವಾರುಗಳು ಸಾವನ್ನಪ್ಪಿವೆ. 305 ಸಣ್ಣ ಜಾನುವಾರುಗಳು ಸತ್ತಿವೆ. 1,36,087 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆ ಪೈಕಿ 1,29,087 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ 7,942 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. 11,768 ಕಿ.ಮೀ ರಸ್ತೆ ಹಾನಿಯಾಗಿದೆ. 1,152 ಸೇತುವೆ ಮತ್ತು ಕಿರುಸೇತುವೆಗಳಿಗೆ ಹಾನಿಯಾಗಿದೆ” ಎಂದು ಹೇಳಿದರು.

“ರಾಜ್ಯದಾದ್ಯಂತ 4,561 ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ. 122 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ. 2,249 ಅಂಗನವಾಡಿ ಕೇಂದ್ರ ಹಾನಿಗೊಂಡಿವೆ. 17,066 ವಿದ್ಯುತ್ ಕಂಬಗಳು ಧರೆಗುರುಳಿವೆ. 1,472 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಮೇಲಿನ ಎಲ್ಲ ಹಾನಿ ಕಳೆದ ಎರಡೂವರೆ ತಿಂಗಳಲ್ಲಿ ಸಂಭವಿಸಿದೆ” ಎಂದು ಅಶೋಕ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್