
- ಪುನರಾವರ್ತನೆ ಆಲಾಪ ಇಲ್ಲದೆ ನಾಡಗೀತೆ ಗಾಯನ
- ಮೂಲ ಹಾಡಿಗೆ ಧಕ್ಕೆಯಾಗದಂತೆ ಕಾಲಮಿತಿ ನಿಗದಿ
ನಾಡಗೀತೆ ಹಾಡಲು ಕಾಲಮಿತಿ ನಿಗದಿ ಮಾಡುವ ಮೂಲಕ ದಶಕಗಳ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಇಂಧನ ಸಚಿವ ವಿ ಸುನಿಲ್ ಕುಮಾರ್ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ “ಜಯ ಭಾರತ ಜನನಿಯ ತನುಜಾತೆʼ ಗೀತೆಯನ್ನು ನಾಡಗೀತೆಯಾಗಿ ಅಂಗೀಕೃತಗೊಂಡ ರೂಪದಲ್ಲೇ ಹಾಡಲಾಗುತ್ತದೆ ಎಂದು ತಿಳಿಸಿದರು.
ದಿ. ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಸರಕಾರ ಸಮ್ಮತಿಸಿದೆ.
2 ನಿಮಿಷ 30 ಸೆಕೆಂಡ್ಗಳಲ್ಲಿ ನಾಡಗೀತೆಯನ್ನು ಹಾಡಬಹುದು ಎಂದು ತಜ್ಞರು ನೀಡಿದ್ದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ವರದಿ ಶಿಫಾರಸ್ಸಿನಂತೆ ಸಮಯ ನಿಗದಿ ಮಾಡಲಾಗಿದ್ದು, ನಾಡಗೀತೆ ಗಾಯನದ ವೇಳೆ ಯಾವುದೇ ಆಲಾಪ ಮತ್ತು ಪುನರಾವರ್ತನೆ ಇರುವುದಿಲ್ಲ.
ತಿಂಗಳ ಹಿಂದಷ್ಟೇ ಸಾಹಿತ್ಯ ಪರಿಷತ್ನ ನವೀಕೃತ ಕಲಾಮಂದಿರ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಕಮಲಾ ಹಂಪನಾ ಅವರು ಮುಖ್ಯಮಂತ್ರಿಗಳಿಗೆ ರಾಷ್ಟ್ರಗೀತೆಯಂತೆ ನಾಡಗೀತೆ ಗಾಯನಕ್ಕೂ ಕಾಲ ಮಿತಿ ನಿಗದಿ ಮಾಡಿ ಎಂದು ಮನವಿ ಮಾಡಿದ್ದರು.
ನಾಡಗೀತೆ ಹಿನ್ನೆಲೆ-ಬೇಡಿಕೆ
ಕುವೆಂಪು ವಿರಚಿತ ʻಜಯಭಾರತ ಜನನಿಯ ತನುಜಾತೆ’ ಕವಿತೆಯನ್ನು 1971 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ತನ್ನ ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಡಿಸುವ ಮೂಲಕ ಪ್ರಸ್ತುತ ಗೀತೆಯನ್ನು ನಾಡಗೀತೆ ಎಂದು ಘೋಷಣೆ ಮಾಡಿತ್ತು. ಮುಂದೆ ಕರ್ನಾಟಕ ಸರಕಾರ (ಕುವೆಂಪು ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ) 2004 ರ ಜನವರಿ 6 ರಂದು ಈ ಹಾಡನ್ನು ಅಧಿಕೃತ ನಾಡಗೀತೆಯೆಂದು ಘೋಷಣೆ ಮಾಡಿತ್ತು.
ಈ ಸುದ್ದಿ ಓದಿದ್ದೀರಾ? : ರಾಷ್ಟ್ರಗೀತೆಯಂತೆ ನಾಡಗೀತೆಗೂ ಒಂದು ನಿಮಿಷದ ಕಾಲಾವಧಿ ರೂಪಿಸಿ: ನಾಡೋಜ ಡಾ. ಕಮಲಾ ಹಂಪನಾ
ನಾಡಗೀತೆಯನ್ನು ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ಕುರಿತು ಇದುವರೆಗೂ ಕ್ರಮವಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಶ್ರೀ ವಸಂತ ಕನಕಾಪುರ, ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಡಾ.ಎಚ್.ಆರ್.ಲೀಲಾವತಿ ಅವರ ನೇತೃತ್ವದಲ್ಲಿ ನಾಲ್ಕು ಸಮಿತಿಗಳನ್ನು ಕಾಲಕಾಲಕ್ಕೆ ನೇಮಿಸಿ ವರದಿ ಪಡೆದಿದ್ದರೂ ಧಾಟಿಯನ್ನು ಅಂತಿಮ ಗೊಳಿಸಿರಲಿಲ್ಲ.
2022ರಲ್ಲಿ ಲೀಲಾವತಿ ವರದಿ ಪುರಸ್ಕರಿಸಿದ ಬೊಮ್ಮಾಯಿ ಸರ್ಕಾರ ನಾಡಗೀತೆ ಹಾಡುವ ಧಾಟಿ ನಿಗದಿ ಮಾಡಿತು.