ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಖುದ್ದಾಗಿ ಗೌರವ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್

  • ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವುದು ಆದ್ಯ ಕರ್ತವ್ಯ
  • ಹೋರಾಟಗಾರರ ದೇಶಸೇವೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ

ಕ್ವಿಟ್ ಇಂಡಿಯಾ ಚಳುವಳಿ ವರ್ಷಾಚರಣೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸನ್ಮಾನಿಸಿದರು.

ರಾಜ್ಯಪಾಲ ಗೆಹ್ಲೋಟ್ ಅವರು ಮಂಗಳವಾರ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಅವರನ್ನು ಸನ್ಮಾನಿಸಿ, ಸಿಹಿ ತಿನ್ನಿಸುವ ಮೂಲಕ ಗೌರವ ಸಲ್ಲಿಸಿದರು. ಈ ವಿಶೇಷ ಕ್ಷಣಗಳಿಗೆ ಸಚಿವರುಗಳಾದ ಆರ್ ಅಶೋಕ್, ಅಶ್ವತ್ಥನಾರಾಯಣ್ ಸಾಕ್ಷಿಯಾದರು.

ಮಂಗಳವಾರ ಬೆಳಿಗ್ಗೆ ಜೆ ಪಿ ನಗರದ ನಾಲ್ಕನೇ ಹಂತದ ಆಶ್ರಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಆರ್ ನಾರಾಯಣಪ್ಪ ಅವರ ಮನೆಗೆ ತೆರಳಿದ ರಾಜ್ಯಪಾಲರು, ನಾರಾಯಣಪ್ಪ ಅವರಿಗೆ ಸನ್ಮಾನಿಸಿ, ಸಿಹಿ ತಿನ್ನಿಸಿದರು. ನಂತರ ಅವರಿಗೆ ಪ್ರಮಾಣ ಪತ್ರ ನೀಡಿ, ನಮನ ಸಲ್ಲಿಸಿದರು.

ನಂತರ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಶಂಕರನಾರಾಯಣ ರಾವ್ ಅವರ ಮನೆಗೆ ತೆರಳಿ ಅವರಿಗೂ ಸನ್ಮಾನ ನೆರವೇರಿಸಿದ ರಾಜ್ಯಪಾಲರು, ಅವರಿಗೆ ಸಿಹಿ ತಿನ್ನಿಸಿದರು. ನಂತರ ಅವರ ಕ್ಷೇಮ ಸಮಾಚಾರ ವಿಚಾರಿಸಿದ ಗೆಹ್ಲೋಟ್ ಅವರು, "ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ತಮಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ" ಎಂದರು.

ಈ ಸುದ್ದಿ ಓದಿದ್ದೀರಾ? : ನಕಲಿ ದೇಶಭಕ್ತರ ಬಾಯಿ ಮುಚ್ಚಿಸುವ ಕೆಲಸ ಮಾಡಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

ಕೊನೆಯದಾಗಿ ಮಲ್ಲೇಶ್ವಂರಂನ ನಾಗಭೂಷಣ್ ರಾವ್ ಅವರ ಮನೆಗೆ ತೆರಳಿದ ರಾಜ್ಯಪಾಲರು, ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿದರು. ಬಳಿಕ ಅವರೊಂದಿಗೆ ಕೆಲಕ್ಷಣ ಕಳೆದರು. ಈ ಮಾತುಕತೆ ವೇಳೆ ನಾಗಭೂಷಣ್ ಅವರು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾದ ಘಟನೆಗಳ ಬಗ್ಗೆ ವಿವರಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್