
- ಸಂಪುಟ ಉಪಸಮಿತಿ ಶಿಫಾರಸಿನಂತೆ ಮೊಕದ್ದಮೆ ಹಿಂಪಡೆದ ಸರ್ಕಾರ
- ಪಿಯು, ಎಸ್ಎಸ್ಎಲ್ಸಿ ಪರಿಕ್ಷಾ ಮಂಡಳಿ ವಿಲೀನಕ್ಕೆ ಒಪ್ಪಿದ ಸಂಪುಟ
ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು, ಕನ್ನಡ ಹೋರಾಟಗಾರರು ಮತ್ತು ರೈತರ ಮೇಲಿನ ವಿವಿಧ ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ವಿಚಾರದಲ್ಲಿ ಸಚಿವ ಸಂಪುಟದ ಉಪಸಮಿತಿಯ ಶಿಫಾರಸು ಆಧರಿಸಿ 35 ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇವರೆಲ್ಲರ ವಿರುದ್ಧ ರಾಜ್ಯದ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆಯೂ ಇದೇ ಮಾದರಿಯಲ್ಲಿ ತಮ್ಮ ಪಕ್ಷ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿತ್ತು.
ಪರೀಕ್ಷಾ ಮಂಡಳಿ ವಿಲೀನಕ್ಕೆ ಸಂಪುಟ ಒಪ್ಪಿಗೆ
ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ವಿಲೀನ ವಿಚಾರದ ಬಗೆಗೂ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಎರಡೂ ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಪದವಿ ಪೂರ್ಣ ಶಿಕ್ಷಣ ಮಂಡಳಿ ಕೇವಲ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತಿದೆ. ಆದರೆ, ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ತನ್ನ ಪರೀಕ್ಷೆಯ ಜೊತೆಗೆ ಇತರೆ ಪರೀಕ್ಷೆಗಳನ್ನೂ ನಡೆಸುತ್ತಿದೆ. ಇದರಿಂದ ಆರ್ಥಿಕ ನಷ್ಟ ಮತ್ತು ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇದೆ. ಹೀಗಾಗಿ ಪರೀಕ್ಷಾ ಬೋರ್ಡ್ ವಿಲೀನಗೊಳಿಸಲು ನಿರ್ಧಾರ ಮಾಡಲಾಗಿದೆ.
ಇದರ ಜೊತೆಗೆ ಶಿಕ್ಷಕರ ಮ್ಯೂಚುಯಲ್ ವರ್ಗಾವಣೆಗೂ ಒಪ್ಪಿಗೆ ನೀಡಲಾಗಿದೆ. ಒಂದೇ ವಿಷಯದ ಇಬ್ಬರೂ ಶಿಕ್ಷಕರು ಒಪ್ಪಿಗೆ ಇದ್ದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡನೆಗೂ ಸಂಪುಟ ಒಪ್ಪಿಗೆ ನೀಡಿದೆ. ಶಿಕ್ಷಕರ ವರ್ಗಾವಣೆಯಲ್ಲಿ ಕೆಲ ಗೊಂದಲಗಳ ನಿವಾರಣೆ ಕುರಿತ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದ್ದು, ಮಂಗಳವಾರ ಸದನದಲ್ಲಿ ವಿಧೇಯಕ ಮಂಡನೆಯಾಗಲಿದೆ.
ಸಭಾಪತಿ ಚುನಾವಣೆ ವಿಚಾರದಲ್ಲೂ ಚರ್ಚೆ
ಗುರುವಾರದೊಳಗೆ ವಿಧಾನ ಪರಿಷತ್ ಸಭಾಪತಿ ನೇಮಕ ಮಾಡಲೇಬೇಕಾದ ಅನಿವಾರ್ತೆಯತೆ ಸರ್ಕಾರಕ್ಕೆ ಎದುರಾಗಿದೆ. ಹಾಲಿ ಸಭಾಪತಿಗಳ ಅವಧಿ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಅಂತಿಮ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಂಪುಟ ನಿರ್ಧರಿಸಿದೆ.
ಈ ಸುದ್ದಿ ಓದಿದ್ದೀರಾ? : ಕೊನೆಗೂ ಒಪ್ಪಿದ ಸರ್ಕಾರ: ಸರ್ಕಾರಿ ನೌಕರರಾಗಲಿರುವ 11,133 ಪೌರ ಕಾರ್ಮಿಕರು!
ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ವಿಚಾರಕ್ಕೆ ಸಂಪುಟವೂ ಸಹಮತಿ ನೀಡಿದೆ. ಆರ್ಥಿಕ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ಹಣ ಬಿಡುಗಡೆ ಮಾಡಿಸಿ ಕೆಲಸ ಪ್ರಾರಂಭಿಸಲು ಅನುವಾಗುವಂತೆ ಮಾಡಲು ಸಂಪುಟ ಸದಸ್ಯರು ಒಪ್ಪಿದ್ದಾರೆ. ಇದರನ್ವಯ ಮಂಗಳವಾರ ಸಚಿವ ಸಂಪುಟದ ಸಭೆ ನಡೆದು, ನಿರ್ಧಾರ ಅಂತಿಮಗೊಳ್ಳಲಿದೆ.