ಹಳ್ಳಿ ಹಾದಿ | ಸರ್ಕಾರ ಮಾಡುತ್ತಿರುವುದು 'ಮಾತೃ ವಂದನೆ'ಯಲ್ಲ, ಮಾತೃ ವಂಚನೆ!

PMMVY 4

ದೆಹಲಿ ರಾಜ್ಯದ ಒಬ್ಬ ತಾಯಿ ಹೇಳುತ್ತಾಳೆ: "ಮನೆಯಲ್ಲಿ ಗ್ಯಾಸ್ ತೀರಿದೆ. ಹೇಗೆ ಒಲೆ ಹಚ್ಚಲಿ? ಬೀದಿ-ಬೀದಿ ತಿರುಗಾಡಿ ಕಟ್ಟಿಗೆ ಚೂರು, ಕಲ್ಲುಗಳನ್ನಾರಿಸಿ ತಂದು ಒಲೆ ಹೂಡಿದ್ದೇನೆ. ಎರಡು ತಿಂಗಳಿನಿಂದ ಇದೇ ಒಲೆಯ ಮೇಲೆ ಅಕ್ಕಿಗಿಷ್ಟು ಬೇಳೆ ಹಾಕಿ, ಕಿಚಡಿ ಮಾಡಿ ಉಣ್ಣುತ್ತಿದ್ದೇವೆ."

ಇದು ಈ ಒಂದು ಹೆಣ್ಣುಮಗಳ ಸುದ್ದಿಯಲ್ಲ. ಸರ್ವೆಯಲ್ಲಿ ಭಾಗವಹಿಸಿದ ಶೇಕಡ ೬೭ರಷ್ಟು ಕುಟುಂಬಗಳಲ್ಲಿ ಗ್ಯಾಸ್ ಖರೀದಿಯೇ ದೊಡ್ಡ ಸಮಸ್ಯೆಯಾಗಿತ್ತು. ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿಯೂ, "ನಿಮ್ಮ ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದರಿಂದ ಇಷ್ಟೆಲ್ಲ ಹೊಸ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ನೀಡಲು ಸಾಧ್ಯವಾಗಿದೆ," ಎಂದು ಪ್ರಧಾನಮಂತ್ರಿಗಳ ದೊಡ್ಡ-ದೊಡ್ಡ ಫೋಟೊ ಹಾಕಿ ಬೃಹದಾಕಾರದ ಕಟೌಟ್ ಹಾಕಿದ್ದನ್ನು ರಸ್ತೆಯಲ್ಲಿ ಹೋಗುವವರೆಲ್ಲ ೨೦೧೫ರಿಂದಲೂ ನೋಡುತ್ತಲೇ ಇದ್ದೇವೆ. ೨೦೨೦ರ ಲಾಕ್‌ಡೌನ್ ಸಮಯದಿಂದ ಜಾಗತಿಕ ಮಟ್ಟದಲ್ಲಿ ತೈಲಬೆಲೆಯು ಏರಿಕೆಯಾದ್ದರಿಂದ ಎಲ್‌ಪಿಜಿ ಸಬ್ಸಿಡಿಯನ್ನು ಕೇಂದ್ರ ಸರಕಾರವು ಸದ್ದಿಲ್ಲದೇ ಹಿಂತೆಗೆದುಕೊಂಡಿತು. ಅಲ್ಲಿಯವರೆಗೆ ಆಧಾರ್ ಆಧರಿತವಾಗಿ ಗ್ರಾಹಕರಿಗೆ ಸಬ್ಸಿಡಿಯ ಹಣ ನೇರ ನಗದು ವರ್ಗಾವಣೆ ಆಗುತ್ತಿತ್ತು. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯು ಕಡಿಮೆಯಾದ ಮೇಲಾದರೂ ಸಬ್ಸಿಡಿಯನ್ನು ಮತ್ತೆ ಕೊಡಬೇಕಾಗಿತ್ತು. ಸರಕಾರ ಆ ಯೋಜನೆಯನ್ನು ಮತ್ತೆ ಆರಂಭಿಸಲಿಲ್ಲ. ಈ ಒಂದು ಯೋಜನೆಯಿಂದಲೇ ಸರಕಾರಕ್ಕೆ ಜನರಿಂದ ೨೦,೦೦೦ ಕೋಟಿ ರುಪಾಯಿ ನೇರವಾಗಿ ಬರುತ್ತಿದೆ. ಏನೇ ಇರಲಿ, ದೊಡ್ಡ ಪ್ರಚಾರದೊಂದಿಗೆ ಆರಂಭವಾದ 'ಪ್ರಧಾನಮಂತ್ರಿ ಉಜ್ವಲ ಯೋಜನೆ'ಯ ಪರಿಣಾಮವಾಗಿ ಗ್ರಾಮೀಣ ಜನರೀಗ ತಮ್ಮ ಗಳಿಕೆಯ ಶೇಕಡ ೧೦ ಭಾಗವನ್ನು ಸಿಲಿಂಡರ್ ತುಂಬಿಸಲೆಂದೇ ಖರ್ಚು ಮಾಡಬೇಕಾಗಿದೆ. ಸಿಲಿಂಡರುಗಳ ಬೆಲೆ ಏರಿಕೆಯ ಜೊತೆಗೇ ಸಬ್ಸಿಡಿಯನ್ನೂ ಹಿಂತೆಗೆದುಕೊಂಡು, ಸರಕಾರವು ಬಡ ಕುಟುಂಬಗಳಿಗೆ ಪೆಟ್ಟಿನ ಮೇಲೆ ಪೆಟ್ಟು ಕೊಟ್ಟಿದೆ. ಹೊಸ ಬಜೆಟ್ಟಿನಲ್ಲಿ ಗ್ಯಾಸ್ ಸಬ್ಸಿಡಿಗೆಂದು ೬೦೦ ಕೋಟಿ ರುಪಾಯಿ ಹೆಚ್ಚುವರಿ ಹಣ ಇಟ್ಟಿದೆಯಾದರೂ, ಅದು ದೂರ-ದೂರ ಸಿಲಿಂಡರ್‌ಗಳನ್ನು ಸಾಗಿಸಲಿಕ್ಕಾಗಿ ಇಟ್ಟಿರುವ ಹಣವೇ ಹೊರತು, ಜನರಿಗೆ ನೇರ ನಗದಲ್ಲ.

PMMVY

ಕೊರೋನಾ ಎರಡನೇ ಅಲೆಯಲ್ಲಿ ನಮ್ಮ ಹಳ್ಳಿಗಾಡಿನ ಬದುಕು ಹೇಗಿತ್ತೆಂದು ತಿಳಿದುಕೊಳ್ಳಲು 'ಆಹಾರದ ಹಕ್ಕಿಗಾಗಿ ಆಂದೋಲನ' ಸಂಘಟನೆಯು ದೇಶಾದ್ಯಂತ 'ಹಂಗರ್ ವಾಚ್' ಸರ್ವೆ ಆಯೋಜಿಸಿತ್ತು. ಗ್ರಾಮೀಣ ಜನರ ಹಸಿವು, ಸಾಮಾಜಿಕ ಅಭದ್ರತೆಗಳು ಯಾವ ರೀತಿಯಲ್ಲಿ ಜನರನ್ನು ಬಾಧಿಸಿವೆ ಅಥವಾ ಎಲ್ಲರೂ ಸುಖವಾಗಿದ್ದಾರೋ ಅರಿಯಲು ನಡೆಸಿದ ಈ ಸರ್ವೆಯಲ್ಲಿ, ೧೪ ರಾಜ್ಯಗಳ ೬,೬೯೭ ಕುಟುಂಬಗಳು ಭಾಗವಹಿಸಿದ್ದು, ಕರ್ನಾಟಕದ ಬೆಳಗಾವಿ, ಕೊಪ್ಪಳ, ಚಾಮರಾಜನಗರ, ಬೆಂಗಳೂರು ಜಿಲ್ಲೆಗಳ ತಾಯಂದಿರೂ ಭಾಗವಹಿಸಿದ್ದರು. ಕಳೆದ ಎರಡು, ಮೂರು ತಿಂಗಳಲ್ಲಿ ನಿಮ್ಮ ಮನೆಯ ಹಸಿವು, ಆಹಾರ ಲಭ್ಯತೆ, ಊಟದ ಸ್ಥಿತಿ ಹೇಗಿತ್ತು ಎಂದು ಪ್ರಶ್ನೆಗಳನ್ನು ಮಾಡಲಾಗಿತ್ತು.

ದೇಶದ ಶೇಕಡ ೭೯ ಕುಟುಂಬಗಳಲ್ಲಿ ಆಹಾರ ಅಭದ್ರತೆಯು ಹೆಚ್ಚಿದೆ. ಶೇಕಡ ೬೬ ಕುಟುಂಬಗಳಲ್ಲಿ ಕುಟುಂಬದ ಗಳಿಕೆಯೇ ಕಡಿಮೆಯಾಗಿ ಹೋಗಿದೆ. ಸುಮಾರು ಶೇಕಡ ೪೫ ಕುಟುಂಬಗಳಲ್ಲಿ ಸಾಲದಿಂದಲೇ ಜೀವನ ಸಾಗಿದೆ. ಅದರಲ್ಲೂ, ಶೇಕಡ ೨೧ ಕುಟುಂಬಗಳಲ್ಲಂತೂ, ೫೦,೦೦೦ಕ್ಕಿಂತ ಹೆಚ್ಚು ಸಾಲ ಇದೆ. ೨೦೨೦ರಲ್ಲಿ ಇದೇ ಹಳ್ಳಿಗಳಲ್ಲಿ ಕೊರೋನಾದ ಮೊದಲ ಅಲೆ ದಾಳಿ ಮಾಡಿ ಲಾಕ್‌ಡೌನ್ ಆಗಿದ್ದಾಗ, ಕುಟುಂಬದ ಹಸಿವನ್ನು ನೀಗಿಸಲು ಲಕ್ಷಗಟ್ಟಲೆ ಸಾಲ ಮಾಡಿದ ಕುಟುಂಬಗಳೂ ಸಿಕ್ಕಿದ್ದವು. ೨೦೨೧ರ ಡಿಸೆಂಬರ್ ಮತ್ತು ಜನವರಿ ೨೨ರಲ್ಲಿ ಮಾಡಿದ ಈ ಸರ್ವೆಯ ಪ್ರಶ್ನೆಗಳಿಗೆ ಉತ್ತರಿಸಿದ ಕುಟುಂಬಗಳಲ್ಲಿ, ಹೆಚ್ಚಿನ ಕುಟುಂಬಗಳಿಗೆ ಹಸಿವೆಯದ್ದೇ ಚಿಂತೆಯಾಗಿದೆ.

PMMVY 2

ಸುಮಾರು ಶೇಕಡ ೪೧ ಕುಟುಂಬಗಳಲ್ಲಿ ಉಣ್ಣಲಿತ್ತು; ಆದರೆ, ಅದು ಪೋಷಕಾಂಶ ಭರಿತವಾಗಿರಲಿಲ್ಲ. ಹಸಿರು ಸೊಪ್ಪು, ತರಕಾರಿಗಳನ್ನು ವಾರಕ್ಕೊಮ್ಮೆ ಮಾತ್ರ ತಿನ್ನಲು ಸಾಧ್ಯವಾಗುವ ಈ ಕುಟುಂಬಗಳಲ್ಲಿ ಮಾಂಸ, ಮೊಟ್ಟೆ ಸೇವನೆಯಂತೂ ಅಪರೂಪ ಆಗಿಹೋಗಿದೆ. ಇವರಲ್ಲಿ ಶೇಕಡ ೮೪ರಷ್ಟು ಕುಟುಂಬಗಳಲ್ಲಿ ಪಡಿತರ ಚೀಟಿ ಇದ್ದು, ಶೇಕಡ ೯೦ರಷ್ಟು ಜನರಿಗೆ ಉಚಿತ ಪಡಿತರ ಸಿಕ್ಕು, ಅಕ್ಕಿ, ಗೋಧಿಗೇನೂ ಕೊರತೆಯಾಗಲಿಲ್ಲವಾದರೂ, ಸುಮಾರು ಕಾಲುಭಾಗ ಕುಟುಂಬಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೂ, ಅವರಿಗೆ ಮಧ್ಯಾಹ್ನದ ಬಿಸಿಯೂಟವಾಗಲೀ, ಅದರ ರೇಶನ್ ಆಗಲೀ ಸಿಕ್ಕಿರಲಿಲ್ಲ.

ಅಂಗನವಾಡಿಗಳು ಮುಚ್ಚಿದ್ದು, ತಾಯಂದಿರ ನೋಂದಣಿಯಾಗಲೀ, ಅವರಿಗೆ ಸಿಗಬೇಕಾದ ಯೋಜನೆಗಳಾಗಲೀ ಸಿಕ್ಕಿದ್ದರ ಬಗ್ಗೆ ಸಂಶಯವನ್ನು ಈ ಸರ್ವೆಯು ನಿವಾರಣೆ ಮಾಡಿದೆ. ಹೋರಾಟಗಳ ನಂತರ, ರಾಜ್ಯ ಸರಕಾರ ಕೊಡಬೇಕಾಗಿದ್ದ ಅಂಗನವಾಡಿ ರೇಶನ್ನೇನೋ ಸಿಕ್ಕಿತು. ಗರ್ಭಿಣಿಗೆ ತಿಂಗಳಿಗೆ ೨೫ ತತ್ತಿಗಳು ಕೆಲವೆಡೆ ಸಿಕ್ಕರೆ ಸಿಕ್ಕವು, ಸಿಗದಿದ್ದರೆ ಇಲ್ಲ. ಶೇಕಡ ೭೮ ತಾಯಂದಿರಿಗೆ ಹೆರಿಗೆ ಸಮಯದಲ್ಲಿ ಸಿಗಬೇಕಾದ ಭತ್ಯೆ, ಯೋಜನೆಗಳು ಸಿಗಲಿಲ್ಲವೆಂದರೆ, ತಾಯಂದಿರ ಆಹಾರ ಭದ್ರತೆಯ ಬಗ್ಗೆ ಸರಕಾರದ ನಿಲುವು ಏನೆಂಬುದು ಸ್ಪಷ್ಟವಾಗುತ್ತದೆ. ಕೇಂದ್ರ ಸರಕಾರದಿಂದ ಬರಬೇಕಾಗಿದ್ದ ಪ್ರಧಾನಮಂತ್ರಿ 'ಮಾತೃವಂದನಾ' ಆಗಲೀ, ರಾಜ್ಯ ಸರಕಾರದ ಹೆರಿಗೆ ಭತ್ಯೆಯಾಗಲೀ ವ್ಯತ್ಯಯ ಆಗಿರುವುದು ಬಹಳ ಸ್ಪಷ್ಟವಾಗಿ ವೇದ್ಯವಾಗುತ್ತದೆ.

PMMVY 3

ಉದ್ಯೋಗ ಖಾತರಿಯಲ್ಲಂತೂ ಕೆಲಸ ಕೊಡುವುದಕ್ಕಿಂತ ಜನರಿಗೆ ಹೊಸ-ಹೊಸ ನಿಯಮಗಳನ್ನು ಹೇರುವುದೇ ನಡೆದಿದೆ. ಪರಿಶಿಷ್ಟ ಜಾತಿ-ಜನಾಂಗಗಳ ಕೂಲಿಕಾರರನ್ನು ಪ್ರತ್ಯೇಕಿಸುವ ಪ್ರಯತ್ನವೊಂದು ನಡೆಯಿತು. ಇತರೆ ಜಾತಿಗಳ ಕೂಲಿಕಾರರಿಗೆ ಮೂರು ತಿಂಗಳುಗಟ್ಟಲೆ ಕೂಲಿಯೇ ಸಿಗಲಿಲ್ಲ. ಕಾಯಕ ಬಂಧುಗಳೆಲ್ಲ ಎಂಟನೇ ತರಗತಿವರೆಗೆ ಓದಿರಲೇಬೇಕೆಂದು ನಿಯಮ ಬಂದಿತು. ಇವೆರಡನ್ನೂ ಹಿಂತೆಗೆದುಕೊಂಡರೂ, ಹಿಂಬಾಗಿಲಿನಿಂದ ಅದನ್ನು ನುಸುಳಿಸಲಾಗುತ್ತಿದೆ. ಈಗ ಪ್ರತೀ ಕಾಯಕ ಬಂಧುವಿನ ಕೈಯಲ್ಲಿ ಸ್ಮಾರ್ಟ್ ಫೋನ್ ಇರಲೇಬೇಕು, ಹಾಜರಿಯನ್ನು ವಾಟ್ಸಪ್‌ನಲ್ಲಿ ಕಳಿಸಬೇಕು, ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾಗ ಫೋಟೊ ತೆಗೆದು ಕಳಿಸಬೇಕು ಎಂದು ಆ ಕಡಿಮೆ ಶಿಕ್ಷಿತ, ಬಡ ಕಾಯಕ ಬಂಧುಗಳ ಮೇಲೆ ಒತ್ತಡ ಹೇರಿ, ವೇತನ ಕೊಡದಿದ್ದರೂ ೮೦೦೦-೧೦,೦೦೦ ಖರ್ಚು ಮಾಡಿಸಲಾಗಿದೆ. ಹೆಚ್ಚು ಓದಿರದಿದ್ದರೂ ವ್ಯವಹಾರ ಚತುರರಾಗಿದ್ದ, ಮುಂದಾಳತ್ವವುಳ್ಳ ಮಹಿಳೆಯರು ಕಾಯಕ ಬಂಧುಗಳಾಗಿದ್ದರು. ಈಗ ಅವರನ್ನೆಲ್ಲ ಬೇರೆ-ಬೇರೆ ನಿಯಮಗಳಡಿ ತೆಗೆದುಹಾಕುವ ಮೂಲಕ, ಆ ಮಾತೆಯರಿಗೆ ಸರಕಾರ ತನ್ನ ವಂದನೆಯನ್ನು ಸಲ್ಲಿಸುತ್ತಿದೆ!

ಇದನ್ನು ಓದಿದಿರಾ?: ಎಂದಾದರೂ 'ಪರಲಿಂಗಕಾಮಿಗಳಿಂದ ದರೋಡೆ' ಎಂಬ ಸುದ್ದಿ ಕಂಡಿದ್ದೀರಾ?

ಜನಸಮುದಾಯದಲ್ಲಿ ಶೇಕಡ ೭೯ ಕುಟುಂಬಗಳಲ್ಲಿ ಹಸಿವೆ ತಾಂಡವವಾಡುತ್ತಿದೆ ಎನ್ನುವುದೇನೂ ಹಾಸ್ಯದ ಮಾತಲ್ಲ. ಜನರಿಗೆ ಪೌಷ್ಟಿಕ ಆಹಾರ ತಿನ್ನಲು ಆಗುತ್ತಿಲ್ಲ ಎಂಬುದು ಚಿಂತಾಜನಕ ವಿಷಯ. ಸಬ್ಸಿಡಿಗೆ ಗ್ಯಾಸ್ ಕೊಡುತ್ತೇನೆಂದು ಅದನ್ನು ಕಿತ್ತುಕೊಳ್ಳುವುದು, ತಾಯಿ ಕಾರ್ಡ್ ಮಾಡಿಸಿಯೂ ಅವರಿಗೆ ಸಲ್ಲಬೇಕಾದ ಭತ್ಯೆ ಕೊಡದಿರುವುದು, ಉದ್ಯೋಗಕ್ಕಾಗಿ ಅಲೆದಾಡಿಸುವುದು ಇವೆಲ್ಲ ಯಾವ ಸರಕಾರಕ್ಕೂ ಗೌರವ ತರುವ ಮಾತಲ್ಲ. ವರ್ಷದಿಂದ ವರ್ಷಕ್ಕೆ ಹಸಿವಿನ ಸೂಚ್ಯಂಕದಲ್ಲಿ ಕೆಳಕ್ಕಿಳಿಯುತ್ತಿರುವ ನಾವು, ಪಾತಾಳದಿಂದ ಮೇಲೆದ್ದು ಬರಲೇಬೇಕಾಗಿದೆ. ಪಡಿತರದ ಸಾರ್ವತ್ರೀಕರಣ, ಪಡಿತರದಲ್ಲಿ ಎಣ್ಣೆ ಮತ್ತು ಬೇಳೆ, ಉಚಿತ ಆರೋಗ್ಯ ಸೇವೆ, ಸಾಮಾಜಿಕ ಭದ್ರತೆ, ೨೦೦ ದಿನಗಳ ಖಾತರಿ ಕೆಲಸ ಮತ್ತು ಸಮಯಕ್ಕೆ ಸರಿಯಾಗಿ ವೇತನ ಇವು ಪಾತಾಳದಿಂದ ಮೇಲೆ ಬರುವ ಏಣಿಯಲ್ಲಿ ಕೆಲವು ಮೆಟ್ಟಿಲುಗಳು. ಇನ್ನೂ ಇವೆ; ಮೊದಲು ಇಷ್ಟನ್ನು ಮಾಡಲಿ ಸರಕಾರ.

(ಲೇಖಕರು, ಸಾಮಾಜಿಕ ಹೋರಾಟಗಾರರು)

ನಿಮಗೆ ಏನು ಅನ್ನಿಸ್ತು?
1 ವೋಟ್
eedina app