ಹಾಲು, ಮೊಸರಿಗೆ ಜಿಎಸ್‌ಟಿ ಹೆಚ್ಚಳ: ಪುನರ್ ಪರಿಶೀಲನೆಗೆ ಎಚ್ ಡಿ ಕುಮಾರಸ್ವಾಮಿ ಆಗ್ರಹ

h d kumaraswamy
  • ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೇ?
  • ಜಿಎಸ್‌ಟಿ ಹೆಚ್ಚಳ ಬಡವರ ಮೇಲೆ ಮಾರಕ ಪ್ರಭಾವ ಬೀರುತ್ತದೆ

ಜಿಎಸ್‌ಟಿ ಮೂಲಕ ಕೇಂದ್ರ ಸರ್ಕಾರವು ಬಡವರನ್ನು ದೋಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಷ್ಟ್ರಪತಿ ಚುನಾವಣೆ ಮತದಾನದ ನಂತರ ಮಾತನಾಡಿದ ಅವರು, “ಜಿಎಸ್‌ಟಿ ಜನ ವಿರೋಧಿ ತೆರಿಗೆ ನೀತಿಯಾಗಿದೆ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈಗ ಆಹಾರ ಪದಾರ್ಥಗಳಿಗೆ ತೆರಿಗೆ ವಿಧಿಸಿ ಬಡವರ ಅನ್ನವನ್ನೂ ಕಸಿದುಕೊಳ್ಳಲಾಗುತ್ತಿದೆ. ಅಚ್ಛೇದಿನ್‌ ಎಂದರೆ ಇದೇನಾ? ಇವು ಜನ ವಿರೋಧಿ ಸರ್ಕಾರಗಳು” ಎಂದು ಅವರು ವಾಗ್ದಾಳಿ ನಡೆಸಿದರು.

“ಹಾಲು, ಮೊಸರು, ಉಪ್ಪಿನಕಾಯಿ ಮೇಲೆ ತೆರಿಗೆ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೇ? ಇದು ಜನ ವಿರೋಧಿ ನಿರ್ಧಾರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕೋವಿಡ್‌ನಿಂದಾಗಿ ಆನೇಕ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಮೇಲೆ ಜಿಎಸ್‌ಟಿ ಹೊರೆ ಹಾಕಲಾಗುತ್ತಿದೆ. ಜಿಎಸ್‌ಟಿಯನ್ನು ನಾನು ಮೊದಲೇ ವಿರೋಧ ಮಾಡಿದ್ದೆ. ರಾಜ್ಯಗಳು ಕೇಂದ್ರಕ್ಕೆ ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿವೆ ಅಂತ ಹೇಳಿದ್ದೆ. ಈ ನೀತಿಯನ್ನು ಮರು ಪರಿಶೀಲನೆ ಮಾಡಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.

“ಜಿಎಸ್‌ಟಿ ಹೆಚ್ಚಳ ಬಡವರ ಮೇಲೆ ಮಾರಕ ಪ್ರಭಾವ ಬೀರುತ್ತದೆ. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತದೆ. ಆದರೆ, ಬಿಜೆಪಿ ಜಿಎಸ್‌ಟಿಯನ್ನು ಸಮರ್ಥನೆ ಮಾಡುತ್ತಿದೆ. ನೂರು ಸುಳ್ಳು ಹೇಳಿ ಅದನ್ನೇ ಸತ್ಯ ಮಾಡುವುದು ಅವರ ಹುಟ್ಟುಗುಣ. ಎಂಟು ವರ್ಷದಿಂದ ಎಲ್ಲಿ ಎಷ್ಟು ಒಳ್ಳೆಯ ದಿನಗಳು ಬಂದಿವೆ? ಡಾಲರ್ ಎದುರು ರೂಪಾಯಿ ಕಥೆ ಏನಾಗಿದೆ? ವಿದೇಶಿ ವಿನಿಮಯ ಕೂಡ ಖಾಲಿ ಆಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದ ವಿದೇಶಿ ಕಂಪನಿಗಳು ಬಂಡವಾಳ ವಾಪಸ್ ಪಡೆಯುತ್ತಿವೆ. ಇದರ ಬಗ್ಗೆ ಚರ್ಚೆ ಮಾಡಬೇಕು” ಎಂದು ಸಲಹೆ ನೀಡಿದರು.

“ಪ್ರಧಾನಿ ನರೇಂದ್ರ ಮೋದಿ ಉಚಿತ ಕಾರ್ಯಕ್ರಮ ಬೇಡ ಎನ್ನುತ್ತಿದ್ದಾರೆ. ಈ ದೇಶದಲ್ಲಿ 1.7 ಮಿಲಿಯನ್ ಜನರು ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಭಿನ್ನವೇನಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ಹೆಚ್ಚುತ್ತಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಜನರನ್ನು ಆರ್ಥಿಕವಾಗಿ ಬಲಗೊಳಿಸಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ” ಎಂದು ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಪಿಎಸ್‌ಐ ಅಕ್ರಮ ಭಾಗ-4| ಫಿಂಗರ್‌ ಪ್ರಿಂಟ್‌ ಅಧಿಕಾರಿ ನಡೆಸಿದ ʼಆಪರೇಷನ್‌ ಬ್ಲೂಟೂಥ್‌ʼ ಕರಾಮತ್ತು!

ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ನನಗೆ ಗೊತ್ತಿದೆ

“ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತತೆ ಬಗ್ಗೆ ನನಗೆ ಗೊತ್ತಿದೆ. ಯಡಿಯೂರಪ್ಪ 2008ರಲ್ಲಿ ಆಪರೇಷನ್ ಕಮಲ ನಡೆಸಿದಾಗ ಸಿದ್ದರಾಮಯ್ಯ ಅವರ ಜತೆ ಸೇರಿ ಏನು ಮಾಡಿದರೆಂಬುದು ನನಗೆ ಗೊತ್ತಿದೆ” ಎಂದರು.

“ನಾನು ತಾಜ್ ವೆಸ್ಟ್ ಎಂಡ್‌ನಲ್ಲಿ ಇಲ್ಲದೆ ಹೋಗಿದ್ದರೆ ಸರ್ಕಾರ ಉಳಿಯುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆಯಿತು, ಹಾಗೇ ಅಂದುಕೊಳ್ಳೋಣ. ಆದರೆ, ಮಹಾರಾಷ್ಟ್ರದಲ್ಲಿ ಇವರ ಸರ್ಕಾರ ಯಾಕೆ ಹೋಯಿತು? ಅಷ್ಟೂ ಪ್ರಮಾಣದ ಶಾಸಕರು ಏಕೆ ಹೋದರು? ಈ ಬಗ್ಗೆ ಅವರು ಜನರಿಗೆ ಹೇಳಲಿ” ಎಂದು ವಾಗ್ದಾಳಿ ನಡೆಸಿದರು. 

“ನಾನು ಏನು ಅಪರಾಧ ಮಾಡಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಮುಖ್ಯಮಂತ್ರಿ ಆಗಿದ್ದಾಗ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ? ಇದು ಕೊನೆ ಚುನಾವಣೆ ಅಂತಾರೆ ಅವರು. ಈ ಭ್ರಷ್ಟ ಸರ್ಕಾರವನ್ನು ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳುತ್ತಾರೆ. ಆದರೆ, ಇಂಥ ಸರ್ಕಾರ ಬರಲು ಯಾರಯ್ಯ ಕಾರಣ” ಎಂದು ಪ್ರಶ್ನಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್