
- ಕ್ಷಣಕ್ಕೊಮ್ಮೆ ಮಾತು ಬದಲಾಯಿಸುವ ವ್ಯಕ್ತಿ ನಾನಲ್ಲ: ಗುಬ್ಬಿ ಶಾಸಕ
- ನಮ್ಮ ನಾಯಕರಿಗೆ ನಾನು ಬೇಡ, ಪಕ್ಷದವರಿಗೆ ನಾನು ಬೇಕು
"ನಾನು ಜೆಡಿಎಸ್ಗೆ ವಾಪಸ್ ಬರಲ್ಲ. ನನ್ನ ನಿರ್ಧಾರವನ್ನು ಬದಲಾಯಿಸುವುದಿಲ್ಲ" ಎಂದು ಜೆಡಿಎಸ್ನಿಂದ ಉಚ್ಛಾಟನೆ ಗೊಂಡಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಮಾಡಿರುವ ಅವರು, "ನಾನೇನಾದ್ರೂ ಜೆಡಿಎಸ್ಗೆ ಹೋದರೆ ನನ್ನ ಫೇಸ್ ಮಾಡೋ ಧೈರ್ಯ ಎಚ್ ಡಿ ಕುಮಾರಸ್ವಾಮಿಯವರಿಗೆ ಇಲ್ಲ" ಎಂದಿದ್ದಾರೆ.
ಆ ಮೂಲಕ ಎಚ್ಡಿಕೆ ಹಾಗೂ ತಮ್ಮ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ: ಬಿಜೆಪಿ ಬಿಟ್ಟ ಬಿ ಎಸ್ ಯಡಿಯೂರಪ್ಪ ಆಪ್ತ ಯು ಬಿ ಬಣಕಾರ್: ಮುಂದೇನು?
ತಮ್ಮ ನಾಯಕರ ನಿರ್ಧಾರದ ಬಗ್ಗೆ ಕಿಡಿ ಕಾರಿದ ಶ್ರೀನಿವಾಸ್, "ನಾನು ನನ್ನ ನಿರ್ಧಾರ ವಾಪಸ್ ತೆಗೆದುಕೊಳ್ಳಲ್ಲ. ಹಾಗೆ ಮಾಡೋಕೆ ನಾನೇನು ಜಿಟಿಡಿ, ಶಿವರಾಮೇಗೌಡ ಅಲ್ಲ. ನಾನು ನಮ್ಮ ಅಪ್ಪನ ಮಾತೇ ಕೇಳಲ್ಲ. ನನಗೇನು ಬೇಕೋ ಅದನ್ನೇ ಮಾಡುತ್ತೇನೆ" ಎಂದರು.
ಪಕ್ಷದೊಂದಿಗಿನ ಒಡನಾಟದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಶ್ರೀನಿವಾಸ್, "ಅನೇಕ ಶಾಸಕರಿಗೆಲ್ಲ ನಾನು ಜೆಡಿಎಸ್ ನಲ್ಲಿರಬೇಕೆಂಬುದು ಇದೆ. ಆದರೆ, ನಮ್ಮ ನಾಯಕರಿಗೆ ನಾನು ಬೇಕಾಗಿಲ್ಲ" ಎಂದರು.
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಾಸ್, "ನಾನು ಕ್ಷಣಕ್ಕೊಂದು ಮಾತನಾಡುವ ವ್ಯಕ್ತಿಯಲ್ಲ. ನನ್ನದೇ ಆದ ವ್ಯಕ್ತಿತ್ವ ಇದೆ. ಕುಮಾರಸ್ವಾಮಿ ನನ್ನ ಬಳಿ ಬರಲ್ಲ. ನನ್ನನ್ನು ಫೇಸ್ ಮಾಡೋ ಧೈರ್ಯ ಎಚ್ಡಿಕೆ ಮಾಡಲ್ಲ" ಎಂದು ಕಿಡಿ ಕಾರಿದರು.
ಇದೇ ವೇಳೆ ಸಾರಾ ಮಹೇಶ್ ಜೊತೆಗಿನ ಭೇಟಿ ಬಗ್ಗೆ ಮಾಹಿತಿ ನೋಡಿದ ಶ್ರೀನಿವಾಸ್, "ಇದು ವೈಯಕ್ತಿಕ, ಗೆಳೆತನದ ಭೇಟಿ" ಎಂದಷ್ಟೇ ಹೇಳಿದರು.
ಬುಧವಾರ ಶ್ರೀನಿವಾಸ್ ಹಾಗೂ ಸಾರಾ ಮಹೇಶ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಎಚ್ ಡಿ ಕುಮಾರಸ್ವಾಮಿ, ಶ್ರೀನಿವಾಸ್ ವಿಚಾರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿ, "ಗುಬ್ಬಿ ಕ್ಷೇತ್ರದಲ್ಲಿ ನಮ್ಮ ಹೊಸ ಅಭ್ಯರ್ಥಿ ಕೆಲಸ ಆರಂಭಿಸಿದ್ದಾರೆ" ಎಂದು ಮಾರ್ಮಿಕವಾಗಿ ನುಡಿದಿದ್ದರು.