ಕೊಲೆ ಆರೋಪಿಗಳ ಬಂಧನಕ್ಕೆ ಗಡುವು | ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಎಚ್ ಡಿ ಕುಮಾರಸ್ವಾಮಿ

h d kumaraswamy
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಟೀಕಾ ಪ್ರಹಾರ
  • ಸರಣಿ ಹತ್ಯೆಗಳು ನಡೆಯುತ್ತಿದ್ದು ನಾವು ತಲೆತಗ್ಗಿಸುವಂತೆ ಆಗಿದೆ

ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿ, ಮೂರು ಪ್ರಕರಣಗಳಲ್ಲಿ ನೈಜ ಆರೋಪಿಗಳನ್ನು ಆಗಸ್ಟ್ 5ರೊಳಗೆ ಬಂಧಿಸದಿದ್ದರೆ, ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಯಾದ ಮೂವರು ಯುವಕರ ಮನೆಗಳಿಗೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, “ಮೂವರ ಮನೆಗಳಿಗೂ ಹೋಗಿ ಸಾಕಷ್ಟು ಮಾಹಿತಿ ಪಡೆದಿದ್ದೇನೆ‌. ಅಲ್ಲೇ ಹೆಚ್ಚು ಹೊತ್ತು ಇದ್ದು ನಾನು ಸಾಂತ್ವನ ಹೇಳಿದ್ದೇನೆ. ನನ್ನದು ‘ಫ್ಲೈಯಿಂಗ್ ವಿಸಿಟ್’ ಅಲ್ಲ” ಎಂದರು.

Eedina App

“ಮೂವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸದಿದ್ದರೆ ನಮ್ಮ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿ ಮಂಗಳೂರಿಗೆ ಹೊಸ ಬದಕು ನೀಡುವ ಉದ್ದೇಶದಿಂದ ಸತ್ಯಾಗ್ರಹ ಮಾಡುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.

“ಸರ್ಕಾರದಿಂದ ನ್ಯಾಯ ಸಿಗುವ ಬಗ್ಗೆ ಮೃತರ ಮನೆಯವರಿಗೆ ಅನುಮಾನ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮಂಗಳೂರಿಗೆ ಬಂದು ಏನು ಸಾಧಿಸಿದರು. ಎರಡು ಸಮುದಾಯದ ಜನರಿಗೆ ಒಂದು ಒಳ್ಳೆ ಸಂದೇಶ ಕೊಡುತ್ತೀರಿ ಅಂತಾ ನಾನು ನಿರೀಕ್ಷೆ ಇಟ್ಟಿದ್ದೆ. ಮೃತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಮಾಡಿದರು. ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಅವತ್ತೇ ಸುರತ್ಕಲ್‌ನಲ್ಲೂ ಕೊಲೆಯಾಗಿತ್ತು. ಆದರೆ, ನೀವು ಉಳಿದ ಎರಡು ಕಡೆ ಭೇಟಿ ನೀಡಲಿಲ್ಲ. ನನ್ನ ಪ್ರಕಾರ ಪ್ರವೀಣ್ ಹಂತಕರ ಬಗ್ಗೆ ನಿಖರವಾದ ಮಾಹಿತಿ ಇನ್ನು ಸಿಕ್ಕಿಲ್ಲ” ಎಂದು ಹೇಳಿದರು.

AV Eye Hospital ad

ಪ್ರವೀಣ್ ಸೂದ್ ವಿರುದ್ಧ ವಾಗ್ದಾಳಿ

“ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಮಂಗಳೂರಿಗೆ ಬಂದಿದ್ದು ನೋಡಿ ನಾನು ಏನೋ ಮಹಾನ್ ಸಂದೇಶ ಕೊಡಲು ಬಂದಿದ್ದಾರೆಂದು ಅಂದುಕೊಂಡಿದ್ದೆ. ಘಟನೆ ನಡೆದ ದಿನ ಡಿಜಿಪಿ ಇಲ್ಲಿಗೆ ಬರಬೇಕಿತ್ತು. ಬೆಂಗಳೂರಿನಲ್ಲಿ ಅಂಥಹ ಘನಂಧಾರಿ ಕೆಲಸ ಏನಿತ್ತು? ವರ್ಗಾವಣೆ  ದಂಧೆಯ ಹಣ ಎಣಿಸುವ ಕೆಲಸ ಇತ್ತಾ?” ಎಂದು ವಾಗ್ದಾಳಿ ನಡೆಸಿದರು.

“ಮುಖ್ಯಮಂತ್ರಿ ಬಂದಾಗ ಕೂಡ ಡಿಜಿಪಿ ಬರಲಿಲ್ಲ. ಇವತ್ತು ಬಂದು ಆ ಮೂರು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ ಅಂತಾ ಅಂದುಕೊಂಡಿದ್ದೆ. ನಾನು ಬಂದ ವಿಮಾನದಲ್ಲೇ ಡಿಜಿಪಿ ಅವರು ಬಂದರು. ಆದರೆ, ಇವರು ಬಂದು ಸಭೆ  ಮಾಡಿ ಹೋಗಿದ್ದಾರೆ. ಆರ್ ಎಸ್ ಎಸ್ ಸೂಚನೆಯನ್ನು ಪೊಲೀಸ್ ಅಧಿಕಾರಿಗಳಿಗೆ ಹೇಳಲು ಬಂದಿದ್ದರೆಂದು ನನಗನ್ನಿಸುತ್ತದೆ. ಡಿಜಿಪಿ ಅವರು ಮುಖ್ಯಮಂತ್ರಿ ಗಿಂತ ದೊಡ್ಡವರಾ?” ಎಂದು ಹರಿಹಾಯ್ದರು.

“ಸಣ್ಣಪುಟ್ಟ ಸಮಾಜಕ್ಕೆ ಸೇರಿದ ಯುವಕರನ್ನು ಹತ್ಯೆ ನಡೆಸುತ್ತೀರಿ. ಮಸೂದ್ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆ. ಒಂದು ಕರುವನ್ನು ಯಾರೊ ಒಬ್ಬರು ಸಾಕುವುದಕ್ಕೆ ಕೊಟ್ಟಿದ್ದರು ಎಂದು ಮನೆಯವರು ಹೇಳಿದ್ದಾರೆ. ಮಸೂದ್ ಆ ಕರುವನ್ನು ಮೇಯಿಸಲು ಕರೆದೊಯ್ಯುತ್ತಿದ್ದ. ಕೆಲ ಯುವಕರು ಈತನನ್ನು ಗುರಾಯಿಸುತ್ತಿದ್ದರು. ಘರ್ಷಣೆ ನಡೆದು ಸಂಧಾನಕ್ಕೆ ಕರೆದಿದ್ದರು. ಆದರೆ ಸಂಧಾನಕ್ಕೆ ಕರೆದವರು ಮಸೂದ್ ಹತ್ಯೆ ಮಾಡಿದ್ದಾರೆ. ಹತ್ಯೆ ನಡೆದ ದಿನವೇ ಕರುವೂ ಸತ್ತು ಹೋಗಿದೆ ಎಂದು ಹೇಳಿದ್ದಾರೆ” ಎಂದರು.

“ಇನ್ನು ಪ್ರವೀಣ್ ಹಂತಕರಿಗೆ ಶಿಕ್ಷೆ ವಿಧಿಸಬೇಕು ಎಂಬುದು ಕುಟುಂಬ ಸದಸ್ಯರ ಆಗ್ರಹವಾಗಿದೆ. ಈ ಅಂಶವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಕಾಟಾಚಾರಕ್ಕೆ ತನಿಖೆ ಮಾಡುವುದು ಬೇಡ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾಟಾಚಾರಕ್ಕೆ ಎನ್ಐಎ ತನಿಖೆಗೆ ವಹಿಸಲಾಗಿದೆ. ಇವರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರಾವಳಿ ಜಿಲ್ಲೆಗಳು ಶಿಕ್ಷಣ ಕಾಶಿಯೇ ಆಗಿ ಉಳಿಯಲಿ

“ದಕ್ಷಿಣ ಕನ್ನಡವನ್ನು 'ಕರ್ನಾಟಕದ ಶಿಕ್ಷಣ ಕಾಶಿ' ಎನ್ನುತ್ತಾರೆ. ಇದು ಹೀಗೆಯೇ ಉಳಿಯಬೇಕು. ಹಿಂಸೆಯ ನೆರಳು ಬದಿಗೆ ಸರಿಯಬೇಕು. ಇಲ್ಲಿನ ವಾತಾವರಣ ಕದಡಲು ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯೇ ಮುಖ್ಯ ಕಾರಣ. ದೇಶದ ವಿವಿಧ ಮೂಲೆಯಿಂದ ಇಲ್ಲಿ ದೇವರ ದರ್ಶನ ಪಡೆಯಲು ಆಗಮಿಸುತ್ತಾರೆ. ಆದರೆ, ಇಲ್ಲಿ ಸರಣಿ ಹತ್ಯೆಗಳು ನೆಡೆಯುತ್ತಿದ್ದು ನಾವು ತಲೆತಗ್ಗಿಸುವಂತೆ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮೃತಪಟ್ಟವರು ಎಲ್ಲರೂ  ಬಡ ಕುಟುಂಬದ ಮಕ್ಕಳೇ ಆಗಿದ್ದಾರೆ. ಕಳೆದ 15 ವರ್ಷಗಳಿಂದ ರಾಜಕೀಯ ಮುಖಂಡರು ತಮ್ಮ ಶಕ್ತಿಯನ್ನ ಬೆಳೆಸಿಕೊಳ್ಳಲು ಇಂಥ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಚುನಾವಣೆ ಗೆಲ್ಲಲು ನಾನು ಇಲ್ಲಿಗೆ ಬಂದಿಲ್ಲ. ಶಾಂತಿ ಸೌಹಾರ್ದತೆ  ಕಾಪಾಡಬೇಕು” ಎಂದು ಮನವಿ ಮಾಡಿದರು.

“ಬಿಜೆಪಿಗೆ ಕರ್ನಾಟಕದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ. ಇದೇ ರೀತಿಯ ವಾತಾವರಣ ಮುಂದುವರಿದರೆ ಸರ್ಕಾರಕ್ಕೂ, ಪಕ್ಷಕ್ಕೂ ಅನುಕೂಲ ಎಂದು ಮುಖ್ಯಮಂತ್ರಿಗಳು ಯೋಚಿಸುತ್ತಿರುವಂತಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಕೋಮುವಾದ ನಡೆಸಿದರೆ ಮಾತ್ರ ಲಾಭವಾಗುತ್ತದೆ ಎಂದು ಅನ್ನಿಸಿರಬೇಕು. ಯುವಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು” ಎಂದರು.

ಒಂದು ವರ್ಗದ ಜನರನ್ನು ಮಾತ್ರ ಓಲೈಕೆ ಮಾಡುತ್ತಾರೆ: ಸಿ ಎಂ ಇಬ್ರಾಹಿಂ  

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ವರ್ಗದ ಜನರ ಓಲೈಕೆಗೆ ಮುಂದಾಗಿದ್ದಾರೆ. ಮುಸಲ್ಮಾನ ಯುವಕರ ಹತ್ಯೆ ಕೂಡಾ ಆಗಿದೆ. ಅವರ ಮನೆಯಲ್ಲೂ ಆ ಕುಟುಂಬ ನೋವಿನಲ್ಲಿ ಇದೆ. ಮುಖ್ಯಮಂತ್ರಿಗಳು ಅವರ ಮನೆಗೆ ಹೋಗಿಲ್ಲ. ಪ್ರವೀಣ್ ಮನೆಗೆ ಹೋಗಿ ಹಣ ಕೊಡ್ತಾರೆ, ಮುಸ್ಲಿಂ ಕುಟುಂಬದವರಿಗೆ ಒಂದು ರೂಪಾಯಿ ಕೊಟ್ಟಿಲ್ಲ”  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ ಎಂ ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ಮುಖಂಡರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app