- ಕಾಂಗ್ರೆಸ್ ಮುಖಂಡರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು
- ಕೊಲೆ ಬೆದರಿಕೆ ಹಾಕಿ ವಿಡಿಯೋ ಹರಿಬಿಟ್ಟಿದ್ದ ಬಜರಂಗದಳ ಮುಖಂಡ
ಶಾಸಕ ತನ್ವಿರ್ ಸೇಠ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಬಜರಂಗದಳ ಮುಖಂಡನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಸಕಲೇಶಪುರ ಪಟ್ಟಣದ ನಿವಾಸಿ ರಘು ಎಂಬಾತ ಇತ್ತೀಚೆಗೆ ಹಾಸನದಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ಸಭೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವಿರ್ ಸೇಠ್ ಅವರು ಟಿಪ್ಪು ಪ್ರತಿಮೆ ಸ್ಥಾಪಿಸುವ ಕನಸು ಬಿಡದಿದ್ದಲ್ಲಿ ಬಹಿರಂಗವಾಗಿ ಶಾಸಕರನ್ನು ಕೊಲೆಗೈಯುವುದಾಗಿ ಬೆದರಿಕೆ ಹಾಕಿದ್ದಾನೆ. ಆದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಸಮದ್, ಕಾರ್ಯದರ್ಶಿ ಅಮ್ಜಾದ್ ಖಾನ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ತಾರ ಚಂದನ್, ನಗರಸಭೆ ಮಾಜಿ ಸದಸ್ಯ ಪ್ರಕಾಶ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಂಜಿತ್ ಗೊರೂರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಘು, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಸೋಶಿಯಲ್ ಮಿಡಿಯಾ ಉಪಾಧ್ಯಕ್ಷ ಮಹಮದ್ ಆರೀಫ್ ಮುಜಾಯಿದ್ ಪಾಷ, ಮಾಜಿ ಸದಸ್ಯ ವೆಂಕಟೇಶ್, ಸದಸ್ಯ ಅಶ್ರು ಆಸೀಫ್, ಅಲ್ತಾಫ್ ರೆಹಮನ್, ನಝೀರ್, ಪಿ ಎಸ್ ಜಮೀಲಾ ಹಾಗೂ ಇತರರು ಇದ್ದರು.

ಘಟನೆ ಹಿನ್ನೆಲೆ
“ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ನಾವು ವಿರೋಧಿಸುತ್ತೇವೆ. 108 ಅಡಿ ಅಲ್ಲ 1 ಅಡಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದರೂ ನಿಮ್ಮ ಅಂತಿಮ ಯಾತ್ರೆ ಆಗುತ್ತದೆ ಎಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಈ ದೇಶ ಮತ್ತು ಸಮಾಜಕ್ಕೆ ಕಂಠಕವಾಗಿದ್ದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ನಾವು ವಿರೋಧಿಸುತ್ತೇವೆ. ಒಂದು ವೇಳೆ ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ ನಾವು ಉತ್ತರ ಕೊಡುತ್ತೇವೆ” ಎಂದು ಎಚ್ಚರಿಕೆ ನೀಡಿ ಬಜರಂಗದಳ ಮುಖಂಡ ರಘು ವಿಡಿಯೋ ಹರಿಬಿಟ್ಟಿದ್ದ.
ಈ ಸುದ್ದಿ ಓದಿದ್ದೀರಾ? ಟಿಪ್ಪು ಪ್ರತಿಮೆ ನಿರ್ಮಾಣ ಹೇಳಿಕೆ; ಶಾಸಕ ತನ್ವೀರ್ ಸೇಠ್ಗೆ ಜೀವ ಬೆದರಿಕೆ
ಈ ಕುರಿತು ಟ್ವೀಟ್ ಮಾಡಿದ್ದ ಕಾಂಗ್ರೆಸ್ “ಮೊನ್ನೆ ಒಬ್ಬ ಬಿಜೆಪಿ ಗೂಂಡಾ ಪ್ರಿಯಾಂಕ್ ಖರ್ಗೆ ಅವರಿಗೆ ಗುಂಡು ಹೊಡೆಯುತ್ತೇನೆ ಎಂದಿದ್ದ. ಇಂದು ಮತ್ತೊಬ್ಬ ಶಾಸಕ ತನ್ವೀರ್ ಸೇಠ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಜನಪ್ರತಿನಿಧಿಗಳಿಗೇ ಕೊಲೆ ಬೆದರಿಕೆ ಹಾಕಿ ರಾಜಾರೋಷವಾಗಿ ತಿರುಗಿಕೊಂಡಿರಲು ಸರ್ಕಾರ ಬಿಟ್ಟಿದೆ ಎಂದರೆ ಗೃಹ ಇಲಾಖೆ ಸತ್ತಿದೆ ಎಂದರ್ಥ ಅಲ್ಲವೇ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿತ್ತು.