ದೇವೇಗೌಡರನ್ನು ನೆನೆದು ಮತ್ತೆ ಕಣ್ಣೀರಿಟ್ಟ ಎಚ್ ಡಿ ಕುಮಾರಸ್ವಾಮಿ

  • ನನಗೆ ಅಧಿಕಾರಕ್ಕಿಂತ ನಮ್ಮ ತಂದೆಯವರ ಆರೋಗ್ಯ ಮುಖ್ಯ
  • ದೊಡ್ಡವರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಹೊಣೆ 

ಜಾತ್ಯತೀತ ಜನತಾದಳ ಪಕ್ಷದ ರಾಜ್ಯಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ಣಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಲ್ಲದೆ, ಪಕ್ಷದ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ 65 ಮಂದಿ ಆಯ್ಕೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಎಚ್ ಸಿ ನೀರಾವರಿ ಅವರು ಪ್ರಕಟಿಸಿ ಆಯ್ಕೆ ಪ್ರಮಾಣ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, “ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿ ಎಂ ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ 65 ಮಂದಿ ನಾಯಕರು ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ರಾಹಿಂ ಅವರು ಹಿಂದೆ ಅಧ್ಯಕ್ಷರಾಗಿದ್ದಾಗ ಪಕ್ಷ ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಈಗ ಅದೇ ಇತಿಹಾಸ ಮರುಕಳಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೆ ಕಣ್ಣೀರಿಟ್ಟ ಕುಮಾರಸ್ವಾಮಿ: 

“ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲರೂ ಪಕ್ಷ ಕಟ್ಟಬೇಕು. ಇನ್ನು ಮುಂದೆ ಹಗಲಿರುಳು ಪಕ್ಷ ಕಟ್ಟುವ ಕೆಲಸವನ್ನು ಎಲ್ಲರೂ ಮಾಡಬೇಕು. ಯಾರೂ ವಿಶ್ರಮಿಸಬಾರದು. ಈ ಸಭೆ ಅವರ ಸಮ್ಮುಖದಲ್ಲಿ ನಡೆಯಬೇಕಿತ್ತು” ಎಂದು ಕುಮಾರಸ್ವಾಮಿ ಅವರು ತಮ್ಮ ತಂದೆಯವರನ್ನು ನೆನಪಿಸಿಕೊಂಡು ಭಾವುಕರಾದರು. ತಂದೆಯವರ ಆರೋಗ್ಯವನ್ನು ನೆನಪಿಸಿಕೊಂಡು ಸಭೆಯಲ್ಲಿ ಕಣ್ಣೀರಿಟ್ಟರು.

“ಪ್ರತಿದಿನ ನನ್ನೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ತಂದೆಯವರಲ್ಲಿಗೆ ಓಡುತ್ತೇನೆ. ಅವರ ಆರೋಗ್ಯವೇ ಮುಖ್ಯವಾಗಿದೆ. ನನಗೆ ಅಧಿಕಾರಕ್ಕಿಂತ ನಮ್ಮ ತಂದೆಯವರ ಆರೋಗ್ಯ ಮುಖ್ಯ. ನನಗೆ ತಂದೆಗಿಂತ ಮುಖ್ಯಮಂತ್ರಿ ಪದವಿ ದೊಡ್ಡದಲ್ಲ” ಎಂದು ಕಣ್ಣೀರಿಟ್ಟ ಕುಮಾರಸ್ವಾಮಿ, ಅವರನ್ನು ಇಬ್ರಾಹಿಂ ಹಾಗೂ ವೇದಿಕೆ ಮೇಲಿದ್ದ ಎಲ್ಲ ನಾಯಕರು ಸಂತೈಸಿದರು.

“2006ರಲ್ಲಿ ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದೆ. ದೇವೇಗೌಡರ ಆರೋಗ್ಯ ಹದಗೆಟ್ಟಿದ್ದು ಆಗಲೇ. ಅದರ ನೋವು ಎಂಥದು ಎನ್ನುವುದು ನನಗೆ ಈಗ ಅರ್ಥವಾಗುತ್ತಿದೆ. ಸ್ವತಂತ್ರ ಸರ್ಕಾರ ಬರಬೇಕು ಎನ್ನುವುದು ದೊಡ್ಡವರ (ದೇವೇಗೌಡರ) ಕನಸು. ಆ ಕನಸನ್ನು ನನಸು ಮಾಡಬೇಕು. ಇದೆಲ್ಲ ನಮ್ಮೆಲ್ಲರ ಹೊಣೆ” ಎಂದು ಮುಖಂಡರನ್ನು ಹುರಿದುಂಬಿಸಿದರು.

ಈ ಸುದ್ದಿ ಓದಿದ್ದೀರಾ? ಸಿದ್ದರಾಮೋತ್ಸವ, ಜೆಡಿಸ್‌ನ ಜನತಾ ಜಲಧಾರೆಯ ಶೇ. 50ರಷ್ಟು ಇಲ್ಲ; ಎಚ್‌ಡಿಕೆ

ಜೆಡಿಎಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ; ಸಿಎಂ ಇಬ್ರಾಹಿಂ

ಪಕ್ಷದ ನೂತನ ಅಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, “ಪಕ್ಷದ ಸಾಂಸ್ಥಿಕ ಚುನಾವಣೆ ಮುಗಿದು ನಾನು ಸೇರಿ ಕಾರ್ಯಕಾರಿಣಿ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಶುಭ ಸೂಚನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ” ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿಣಿ ಮಂಡಳಿ ನೂತನ ಸದಸ್ಯರು, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್