ನಾಳೆ‌ ಸದನದಲ್ಲಿ ಹೊಸ ಹಗರಣದ ಬಾಂಬ್ ಸಿಡಿಸುವರೇ ಕುಮಾರಸ್ವಾಮಿ?

  • ಸಾವಿರ ಕೋಟಿ ಅವ್ಯವಹಾರದ ದಾಖಲೆ ಬಿಡುಗಡೆ : ಎಚ್‌ಡಿಕೆ 
  • ʼಆರೋಪ ಮಾಡುವವರಿಗೆ ದಾಖಲೆ ಸಮೇತ ಉತ್ತರ ಕೊಡುವೆʼ

ಹಗರಣವೊಂದನ್ನು ಬಯಲಿಗೆ ತರುವ ವಿಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಗಳವಾರ(ಸೆ.20) ಅದನ್ನು ಸದನದಲ್ಲೇ ಬಹಿರಂಗಪಡಿಸಲು ನಿರ್ಧರಿಸಿರುವ ಅವರು, ಅದಕ್ಕಾಗಿ ಸ್ಪೀಕರ್ ಅನುಮತಿಗೆ ಕೋರಿದ್ದಾರೆ. 

ವಿಧಾನಸೌಧದಲ್ಲಿ ಈ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಅವರು "ಹಗರಣದ ವಿಷಯ ಚರ್ಚೆ ಮತ್ತು ದಾಖಲೆ ಮಂಡನೆಗೆ ಅವಕಾಶ ಕೊಡಬೇಕು ಎಂದು ಈಗಾಗಲೇ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಇದರ ಬಗ್ಗೆ ಸುಖಾಸುಮ್ಮನೆ ಮಾತನಾಡಿ ಸದನದಲ್ಲಿ ಅನಗತ್ಯ ಗೊಂದಲ ಮಾಡೋಕೆ ನನಗೆ ಇಷ್ಟವಿಲ್ಲ. ಹಾಗಾಗಿಯೇ ಇಂದು ಬೆಳಗ್ಗೆ ಕೂಡ ಸಭಾಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಮತ್ತೊಮ್ಮೆ ಮನವಿ ಮಾಡಿದ್ದೇನೆ" ಎಂದು ಕುಮಾರಸ್ವಾಮ ಹೇಳಿದರು. 

"ಸೋಮವಾರ ಬೇರೆ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡಲಾಗಿದ್ದ ಕಾರಣದಿಂದ ಹಗರಣದ ವಿಚಾರ ಚರ್ಚೆಗೆ ತಡವಾಗಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಬಹುಶಃ ನಾಳೆ (ಮಂಗಳವಾರ) ಅವಕಾಶ ಸಿಗಬಹುದು" ಎಂದು ಕುಮಾರಸ್ವಾಮಿ ತಿಳಿಸಿದರು.

"ಸದನದಲ್ಲಿ ನಾನು ಪ್ರಸ್ತಾಪ ಮಾಡಲಿರುವ ವಿಷಯ ಅತ್ಯಂತ ಗಂಭೀರವಾದದ್ದು. ಪೂರ್ಣವಾಗಿ ದಾಖಲೆಗಳನ್ನು ಇಟ್ಟುಕೊಂಡೇ ನಾನು ಮಾತನಾಡುತ್ತೇನೆ. ಇಲ್ಲಿಯವರೆಗೆ ಗಾಳಿಯಲ್ಲಿ ಗುಂಡು ಹಾರಿಸೋನು, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡ್ತಾರೆ ಎಂದು ಹೇಳುವವರಿಗೆ ನಾನು ನಾಳೆ ಉತ್ತರ ಕೊಡುತ್ತೇನೆ" ಎಂದವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಹೈಟೆಕ್‌ ಬಸ್‌ ಮೂಲಕ ʼಕರ್ನಾಟಕ ಯಾತ್ರೆʼಗೆ ಸಜ್ಜಾಗುತ್ತಿದ್ದಾರೆ ಸಿದ್ದರಾಮಯ್ಯ!

"ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಾವಿರಾರು ಕೋಟಿ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯ ಇದಾಗಿದ್ದು, ಈ ವಿಷಯದಲ್ಲಿ ಸರ್ಕಾರ ಆಘಾತಕಾರಿ ತೀರ್ಮಾನ ತೆಗೆದುಕೊಂಡಿದೆ" ಎಂದ ಕುಮಾರಸ್ವಾಮಿ, ಭಾರೀ ಕುತೂಹಲ ಮೂಡಿಸಿರುವ ಆ ಹಗರಣ ಯಾವುದು ಎಂಬುದನ್ನು ಸದ್ಯ ರಹಸ್ಯವಾಗಿಯೇ ಇಟ್ಟಿದ್ದಾರೆ! 

ನಿಮಗೆ ಏನು ಅನ್ನಿಸ್ತು?
1 ವೋಟ್