
- 'ಭಾಷೆಗಳನ್ನು ನಾಶ ಮಾಡಿ ರಾಷ್ಟ್ರ ಕಟ್ಟೋಕೆ ಹೇಗೆ ಸಾಧ್ಯ'
- ‘ಮಳವಳ್ಳಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಅಮಾನವೀಯ’
‘ಕೇಂದ್ರದ ಗೃಹ ಸಚಿವರು ದೇಶದಲ್ಲಿ ಹಲವಾರು ಭಾಷೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, “ಸ್ಥಳೀಯ ಭಾಷೆಗಳನ್ನು ಉದ್ಧಾರ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹಿಂದಿಯನ್ನು ಹೇರಿಕೆ ಮಾಡಲು ಹೊರಟಿದ್ದಾರೆ; ಇದು ಸರಿಯಲ್ಲ. ನಾವು ಒಪ್ಪುವುದಿಲ್ಲ” ಎಂದರು.
“ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು. ಗೃಹ ಸಚಿವರಿಗೆ ತಿಳಿವಳಿಕೆ ಮೂಡಿಸಬೇಕು. ಪದೇಪದೆ ಭಾಷೆಗಳ ವಿಷಯವನ್ನೇ ಕೆದಕುತ್ತಾ ಕೂರುವುದು ಸರಿಯಲ್ಲ. ಹೀಗೆಯೇ ಕೆದಕುತ್ತಾ ಹೋದರೆ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ಆಗುತ್ತದೆ. ಈ ಬಗ್ಗೆ ಗೃಹ ಸಚಿವರ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಕುಮಾರಸ್ವಾಮಿ ಹೇಳಿದರು.
“ಈಗಾಗಲೇ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪ್ರತಿಭಟನೆ ಮಾಡಿದ್ದಾರೆ. ಪಶ್ಚಿಮ ಬಂಗಾಳ, ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಒಂದು ರಾಷ್ಟ್ರ - ಒಂದು ಭಾಷೆ ಎನ್ನುವ ನೀತಿಯನ್ನು ತಂದು ಬಿಜೆಪಿ ನಾಯಕರು ಇತರೆ ಭಾಷೆಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. ಆದರೆ, ಇತರೆ ಭಾಷೆಗಳನ್ನು ನಾಶ ಮಾಡಿ ಒಂದು ರಾಷ್ಟ್ರ ಕಟ್ಟೋಕೆ ಹೇಗೆ ಸಾಧ್ಯ” ಎಂದು ಅವರು ಪ್ರಶ್ನಿಸಿದರು.
“ಎರಡೂ ರಾಷ್ಟ್ರೀಯ ಪಕ್ಷಗಳು ರಾಷ್ಟ್ರಕ್ಕೆ ಮಾರಕ. ಇವೆರಡೂ ಒಂದೇ ನಾಣ್ಯದ ಎರಡು ಮುಖ. ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಮತ್ತೊಂದೆಡೆ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈಗ ಭಾಷೆ ಇಟ್ಟುಕೊಂಡು ದಬ್ಬಾಳಿಕೆ ಪ್ರಾರಂಭ ಮಾಡಿವೆ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲೂ ಆ ದಿನ ಬರುವುದು ಬಹಳ ದೂರ ಇಲ್ಲ” ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯೇತರ ರಾಜ್ಯಗಳಲ್ಲಿ ಬೆಲೆ ಏರಿಕೆ | ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿಕೊಳ್ಳಿ: ರಾಹುಲ್ಗೆ ಬಿಜೆಪಿ ಸಲಹೆ
ಮೀಸಲಾತಿಗೆ ದೇವೇಗೌಡರು ಕೊಟ್ಟ ಕೊಡುಗೆ ಬಗ್ಗೆ ಹೇಳಲಿ
ಎಸ್ಸಿ- ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಸಮ್ಮಿಶ್ರ ಸರ್ಕಾರದಲ್ಲಿ ನಾವು ನ್ಯಾ. ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದೆವು ಎಂದು ಕಾಂಗ್ರೆಸ್ ನಾಯಕರು ಈಗ ಹೇಳುತ್ತಾರೆ. ಬಿಜೆಪಿಯವರು ನಾವು ವರದಿಯನ್ನು ಜಾರಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಬೇರೆ ಎದೆ ಬಡಿದುಕೊಂಡು ಮಾತನಾಡುತ್ತಿದ್ದರು. ಒಬ್ಬ ಶಾಸಕರಂತೂ ನಾವು ಬದುಕಿರುವವರೆಗೂ ಬಿಜೆಪಿಗೆ ಗುಲಾಮರಾಗಿ ಇರುತ್ತೇವೆ ಎಂದು ಘೋಷಣೆ ಮಾಡಿದರು. ಇದರಿಂದ ಆ ಸಮಾಜವನ್ನು ಇನ್ನೂ ಗುಲಾಮಗಿರಿಯಲ್ಲೇ ಇಡುವ ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಮೀಸಲಾತಿ ಹೆಚ್ಚಳಕ್ಕೆ ದೇವೇಗೌಡರು ಕೊಟ್ಟ ಕೊಡುಗೆಯನ್ನು ಹೇಳಲಿ” ಎಂದರು.
ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಅಮಾನವೀಯ
ಮಳವಳ್ಳಿಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, “ಇದು ಅತ್ಯಂತ ಹೇಯ ಘಟನೆ; ಆ ಮಗುವಿನ ಸಾವು ನನಗೆ ಬಹಳ ದುಃಖ ಉಂಟುಮಾಡಿದೆ. ನಮ್ಮ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ₹50 ಸಾವಿರ ಪರಿಹಾರ ಕೂಡ ನೀಡಿದ್ದಾರೆ. ನಾವು ಹೋದ ಮೇಲೆ ಇಬ್ಬರು ಸಚಿವರು ಕಾಟಚಾರಕ್ಕೆ ಹೋಗಿದ್ದಾರೆ. ಕಣ್ಣು ಒರೆಸುವ ತಂತ್ರ ಮಾಡಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದರು.