ಬಿಎಂಎಸ್ ಟ್ರಸ್ಟ್ ವಿವಾದ | ಅಶ್ವತ್ಥ ನಾರಾಯಣ ರಾಜೀನಾಮೆಗೆ ಎಚ್‌ಡಿಕೆ ಪಟ್ಟು; ಆಸ್ತಿ ಮುಟ್ಟುಗೋಲಿಗೆ ಆಗ್ರಹ

h d kumaraswamy
  • ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ
  • ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆಯೂ ಅಕ್ರಮಕ್ಕೆ ಕನ್ನಡಿ

ಬಿ ಎಂ ಶ್ರೀನಿವಾಸಯ್ಯ (ಬಿಎಂಎಸ್) ಶಿಕ್ಷಣ ಸಂಸ್ಥೆ ಟ್ರಸ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಹೋರಾಟ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೂರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

“ಬಿಎಂಎಸ್ ಟ್ರಸ್ಟ್‌ʼನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್‌ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ಇನ್ನು ನಾನು ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ” ಎಂದು ಅವರು ಹೇಳಿದ್ದಾರೆ. 

"ಬಿಎಂಎಸ್ ಟ್ರಸ್ಟ್ ಬಗ್ಗೆ ಬಿಜೆಪಿ ಸರ್ಕಾರ ಕಾನೂನುರೀತ್ಯ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕಾನೂನುರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

“ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲಾ ಸಕ್ರಮವಾಗಿದ್ದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್‌ನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರು” ಎಂದು ಕಿಡಿ ಕಾರಿದ್ದಾರೆ.

“ಉನ್ನತ ಶಿಕ್ಷಣ ಸಚಿವರೇ, 1957ರಲ್ಲಿ ರಚನೆಗೊಂಡು ನೋಂದಣಿಯಾದ ಬಿಎಂಎಸ್ ಟ್ರಸ್ಟಿನ ಮೂಲ ಡೀಡನ್ನು ಒಮ್ಮೆ ಓದಿ. ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ ಮತ್ತು ಸರ್ಕಾರಕ್ಕೆ ಸೇರಿದ ಇಡೀ ಟ್ರಸ್ಟಿನ ಆಸ್ತಿ ಹೊಡೆಯಲು ನಿಂತವರ ಪರ ನಾಚಿಕೆ ಇಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ” ಎಂದು ಆರೋಪ ಮಾಡಿದ್ದಾರೆ.

“ಬಿಎಂಎಸ್ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟ್‌ ಬ್ಲಾಕಿಂಗ್‌, ಪೇಮೆಂಟ್‌ ಸೀಟುಗಳನ್ನು 50:50 ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರ್ಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ, ಅದಕ್ಕೆ ಕಾರಣವೇನು” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪೌರಕಾರ್ಮಿಕ ದಿನಾಚರಣೆ | ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿದ ಸಿಎಂ ಬೊಮ್ಮಾಯಿ 

ಇದ್ಯಾವ ಶಿಕ್ಷಣ ನೀತಿ? ಇದ್ಯಾವ ಧರ್ಮನೀತಿ? 

“ನಮ್ಮ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಬಹಳ ಕ್ರಮ ಕೈಗೊಂಡಿದ್ದೇವೆ ಎನ್ನುತ್ತೀರಿ. ಸುಧಾರಣೆ ಎಂದರೆ, ಸಾರ್ವಜನಿಕ ಟ್ರಸ್ಟುಗಳನ್ನು ಹೀಗೆ ನುಂಗಿ ನೀರು ಕುಡಿಯಲು ಒಳಗೊಳಗೇ ಸಹಕಾರ ನೀಡುವುದಾ? ಪ್ರಧಾನಿ ಮೋದಿ ಅವರು ಹೇಳಿಕೊಟ್ಟ ವಿಶ್ವಗುರು ಪರಿಕಲ್ಪನೆ ಇದೇನಾ? ಶೈಕ್ಷಣಿಕೋದ್ಧಾರ ಮಾಡುವುದು ಎಂದರೆ ಹೀಗೇನಾ” ಎಂದು ಸರಣಿ ಪ್ರಶ್ನೆಗಳನ್ನು ಬಿಜೆಪಿ ಸರ್ಕಾರದ ಮುಂದಿಟ್ಟಿದ್ದಾರೆ. 

“2018ರಲ್ಲಿ ನನ್ನ ನೇತೃತ್ವದ ಸರ್ಕಾರವು ದಾನಿ ಟ್ರಸ್ಟಿ, ಅಜೀವ ಟ್ರಸ್ಟಿ ನೇಮಕದ ಬಗ್ಗೆ ಬಿಎಂಎಸ್ ಟ್ರಸ್ಟಿನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮ ಎಂದು ಸಾರಿ, ಆ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿತ್ತು. ನನ್ನ ಸರ್ಕಾರ ಉರುಳಿದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಈ ಅಕ್ರಮ ತಿದ್ದುಪಡಿಗಳನ್ನು ಶರವೇಗದಲ್ಲಿ ಪುರಸ್ಕರಿಸಿದ್ದು ಹೇಗೆ” ಎಂದು ಪ್ರಶ್ನಿಸಿದ್ದಾರೆ. 

“ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣಿಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ” ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್