ಸರ್ವೋಚ್ಛ ನ್ಯಾಯಾಲಯದ ನಿಯಮ ಮೀರಿ ‘ಬದಲಿ ನಿವೇಶನ’ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

Aaraga jnanendra
  • ಆರ್‌ಎಂವಿ 2ನೇ ಹಂತದ ಬಡಾವಣೆಯಲ್ಲಿ ಬೆಲೆ ಬಾಳುವ ನಿವೇಶನ ಪಡೆದ ಆರಗ
  • ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮತ್ತು ಇಬ್ಬರಿಗೆ ನಿವೇಶನ ಹಂಚಿಕೆ

ಒತ್ತುವರಿದಾರರಿಂದ ತೆರವುಗೊಳಿಸಿದ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹರಾಜು ಹಾಕಬೇಕೆಂಬ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಇತರೆ ಮೂವರಿಗೆ ಬದಲಿ ನಿವೇಶನ ಹಂಚಿಕೆ ಮಾಡಿದ್ದಾರೆ.

ಎಚ್‌ಎಸ್‌ಆರ್ ಬಡಾವಣೆಯಲ್ಲಿ ಬಿಡಿಎ ಅಭಿವೃದ್ಧಿಪಡಿಸಿದ್ದ ನಿವೇಶನವನ್ನು ಆರಗ ಜ್ಞಾನೇಂದ್ರ ಅವರಿಗೆ ಹಂಚಿಕೆ ಮಾಡಲಾಗಿತ್ತು. ಬದಲಿ ನಿವೇಶನ ಸಂಬಂಧ ಸರ್ವೋಚ್ಛ ನ್ಯಾಯಾಯದ ಆದೇಶ ಉಲ್ಲಂಘಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆರ್‌ಎಂವಿ 2ನೇ ಹಂತದ ಬಿಡಿಎ ನಿವೇಶನ ನೀಡಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮತ್ತು ಇತರ ಇಬ್ಬರಿಗೆ ನಾಲ್ಕು ಬೃಹತ್ ನಿವೇಶನಗಳನ್ನು ಬಿಡಿಎ ನಿಯಮ ಮೀರಿ ಮಂಜೂರು ಮಾಡಿದೆ.

ಪ್ರತಿ ನಿವೇಶನ 50x80 ಅಡಿ ಅಳತೆಯವಾಗಿದ್ದು, ₹10 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿವೆ. ನಾಲ್ಕು ದಶಕಗಳ ಹಿಂದೆ ಆರ್‌ಎಂವಿ 2ನೇ ಹಂತದಲ್ಲಿ (ಭೂಪಸಂದ್ರ) ಬಿಡಿಎ ನಿವೇಶನಗಳನ್ನು ಅಭಿವೃದ್ಧಿಪಡಿಸಿತ್ತು. ಈಗ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳ ಮಾರಾಟ ಪತ್ರಗಳನ್ನು ಬಿಡಿಎ ನೋಂದಾಯಿಸಿದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಡಿ ಕೆ ಶಿವಕುಮಾರ್ ಹೇಳಿಕೆ ಅಪ್ರಬುದ್ಧತೆಯ ಪ್ರತೀಕ, ಪರಮ ಬಾಲಿಶ: ಎಚ್ ಡಿ ಕುಮಾರಸ್ವಾಮಿ 

ಮೂರು ದಶಕಗಳ ಹಿಂದೆ ಆರಗ ಜ್ಞಾನೇಂದ್ರ ಮತ್ತು ಇತರರಿಗೆ ನೀಡಲಾಗಿದ್ದ ‘ಜಿ’ ಕೆಟಗರಿ ನಿವೇಶನಗಳಿಗೆ ಬದಲಾಗಿ ಹೊಸ ನಿವೇಶನಗಳನ್ನು ನೀಡಲಾಗಿದೆ. ‘ಜಿ’ ಕೆಟಗರಿ ನಿವೇಶನಗಳನ್ನು ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಹಂಚಲಾಗುತ್ತಿತ್ತು. ಈ ನಾಲ್ವರಿಗೆ ಹಂಚಿಕೆ ಮಾಡಿದ್ದ ನಿವೇಶನಗಳಲ್ಲಿ ಕೆಲವು "ಸಮಸ್ಯೆಗಳಿಂದ ಕೂಡಿದ್ದವು" ಎಂದು ಬಿಡಿಎ ಹೇಳಿಕೊಂಡಿದೆ. ಇದೇ ಕಾರಣಕ್ಕೆ ನಿವೇಶನದಾರರು ಬದಲಿ ನಿವೇಶನ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ. 

ಆದರೆ, ಹಲವು ವರ್ಷಗಳ ನಂತರ ಇವರಿಗೆ ಬದಲಿ ನಿವೇಶನ ನೀಡಿದ್ದು ಏಕೆ ಎಂಬುದನ್ನು ಮಾತ್ರ ವಿವರಿಸಿಲ್ಲ. ಸಚಿವ ಆರಗ ಜ್ಞಾನೇಂದ್ರ ಮತ್ತು ಇತರರು ಬಿಡಿಎ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಬದಲಿ ನಿವೇಶನಗಳನ್ನು ಪ್ರತಿಷ್ಠಿತ ಬಡಾವಣೆಯಲ್ಲಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Image
BDA

ಆರ್‌ಎಂವಿ ಬಡಾವಣೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ನಿವೇಶನಗಳನ್ನು ಬಿಡಿಎ ಕಳೆದ ಸೆಪ್ಟೆಂಬರ್‌ನಲ್ಲಿ ಮರಳಿ ಪಡೆದುಕೊಂಡಿತ್ತು. ಒತ್ತುವರಿ ತೆರವಿನಿಂದ ಪಡೆದ ಭೂಮಿಯಲ್ಲಿ ಒಂಬತ್ತು ನಿವೇಶನಗಳನ್ನು ಬಿಡಿಎ ಅಭಿವೃದ್ಧಿಪಡಿಸಿತ್ತು. ಡಿಸೆಂಬರ್ 28, 2021ರಂದು ಈ ನಿವೇಶನಗಳನ್ನು ಹಂಚಿಕೆ ಮಾಡಿ ಅನುಮೋದಿಸಲಾಗಿದೆ. ಹಂಚಿಕೆಯ ಆದೇಶಕ್ಕೆ ಎರಡು ತಿಂಗಳ ಹಿಂದೆಯಷ್ಟೇ (ಅ. 26, 2021) ಸರ್ವೋಚ್ಛ ನ್ಯಾಯಾಲಯ ಬದಲಿ ನಿವೇಶನ ಹಂಚಿಕೆ ಬಗ್ಗೆ ನೀಡಿದ್ದ ನಿರ್ದೇಶನವನ್ನು ಬಿಡಿಎ ಉಲ್ಲಂಘಿಸಿದೆ.

ಒತ್ತುವರಿದಾರರಿಂದ ವಾಪಸ್ ಪಡೆದ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಷನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ಮಾರಾಟ ಮಾಡಬಹುದು. ಬಿಡಿಎ (ನಿವೇಶನ ಹಂಚಿಕೆ) ನಿಯಮಗಳು, 1984ರ ಅಡಿಯಲ್ಲಿ ಹಂಚಿಕೆಯಾದ ಬದಲಿ ನಿವೇಶನಗಳನ್ನು ಹೊಸ ಬಡಾವಣೆಗಳಲ್ಲಿ ಮಾತ್ರ ಹಂಚಿಕೆ ಮಾಡಬಹುದು. ಆದರೆ, ಪ್ರಭಾವಿ ಸ್ಥಾನದಲ್ಲಿರುವ ಆರಗ ಜ್ಞಾನೇಂದ್ರ ಅವರಿಗೆ ನಿಯಮ ಮೀರಿ ನಿವೇಶನ ಹಂಚಿಕೆ ಮಾಡಿರುವುದು ಹಲವರ ಹಲವು ರೀತಿಯ ಗುಮಾನಿಗಳಿಗೆ ಕಾರಣವಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್