ನಾನು ಅಸ್ಪೃಶ್ಯತೆ ವಿರೋಧಿ; ದಲಿತರ ಶೋಷಣೆ ಮಾಡಿದವರಿಂದ ನನ್ನ ಬಗ್ಗೆ ಅಪಪ್ರಚಾರ: ಎಚ್ ಡಿ ಕುಮಾರಸ್ವಾಮಿ

H D Kumaraswamy
  • ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ
  • ಸಿದ್ದರಾಮಯ್ಯ ಕೂಡ ಅಸ್ಪೃಶ್ಯತೆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ

"ನಾನು ಅಸ್ಪೃಶ್ಯತೆ ವಿರೋಧಿ; ದಲಿತರ ಶೋಷಣೆ ಮಾಡಿದವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಆಡಿರುವ ಮಾತುಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಎಚ್ ಡಿ ಕುಮಾರಸ್ವಾಮಿ ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಪಂಚರತ್ನ ರಥಯಾತ್ರೆ ಪ್ರಯುಕ್ತ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮಧುರೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು, ಬುಧವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.

Eedina App

“ರಥಯಾತ್ರೆ ಸಂದರ್ಭದಲ್ಲಿ ರಾತ್ರಿ 1 ಗಂಟೆವರೆಗೂ ಜನ ನಿದ್ದೆಗೆಟ್ಟು ನಮಗೆ ಬೆಂಬಲ ನೀಡುತ್ತಿದ್ದಾರೆ. 8ರಿಂದ 10 ವರ್ಷದ ಮಕ್ಕಳು ಸಹ ಕುಮಾರಣ್ಣನನ್ನು ನೋಡಬೇಕು ಎಂದು ಕಾಯುತ್ತಿದ್ದಾರೆ. ಪಂಚರತ್ನ ಯಾತ್ರೆ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜನಾಂಗದವರು ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದರು.

ಸಿ ಎಂ ಇಬ್ರಾಹಿಂ ಏನು ಅಸ್ಪೃಶ್ಯರಾ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು  ಆಡಿರುವ ಮಾತನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಯಾವುದೇ ವ್ಯಕ್ತಿ ನನ್ನನ್ನು ಭೇಟಿ ಮಾಡಲು ಬಂದರೂ ನಾನು ಅವರನ್ನು ಅಸ್ಪೃಶ್ಯನನ್ನಾಗಿ ನೋಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

AV Eye Hospital ad

“ನಾನು ಮುಖ್ಯಮಂತ್ರಿಯಾಗಿದ್ದಾಗ ಕೆ ಆರ್ ಪೇಟೆಗೆ ಭೇಟಿ ನೀಡಿದ್ದೆ. ಒಬ್ಬ ಬಾಲಕಿ ನನ್ನ ಕಾರು ತಡೆದು ಹೃದಯ ಕಾಯಿಲೆ ಇದೆ ಎಂದು ದುಃಖ ತೋಡಿಕೊಂಡಿದ್ದಳು. ಚಿಕಿತ್ಸೆ ಕೊಡಿಸಿ ಎಂದು ಆಕೆ ಮನವಿ ಮಾಡಿದ್ದಳು. ಶಾಸಕರಾದ ಸಾ ರಾ ಮಹೇಶ್‌ಗೆ ಹೇಳಿ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದೆ. ಮುಖ್ಯಮಂತ್ರಿಗಳ ನಿವಾಸದಲ್ಲೇ ಆ ಬಾಲಕಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಚಿಕಿತ್ಸೆ ಕೊಡಿಸಿದ್ದೆ. ಯಾವ ಮುಖ್ಯಮಂತ್ರಿ ಆ ರೀತಿ ಮಾಡಿದ್ದಾರೆ ಎಂದು ನನ್ನನ್ನು ಟೀಕೆ ಮಾಡುವವರು ಹೇಳಲಿ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಕೃತಿಯಲ್ಲಿ ತೋರಿಸಿದ್ದೇನೆ” ಎಂದು ತಿರುಗೇಟು ಕೊಟ್ಟರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ ಗಡಿ ವಿವಾದ | ಇಂದು ಸುಪ್ರೀಂ ವಿಚಾರಣೆ; ಕುಂದಾನಗರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

“ನಾನು ಮುಖ್ಯಮಂತ್ರಿ ಅಭ್ಯರ್ಥಿ ಆಗ್ತೀನಿ; ಕುಮಾರಸ್ವಾಮಿ ದೆಹಲಿಗೆ ಹೋಗುವ ಸಮಯ ಬಂದಿದೆ ಎಂದು ಸಿ ಎಂ ಇಬ್ರಾಹಿಂ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಆದರೆ, ಮುಸ್ಲಿಮರು ಪಾಕಿಸ್ತಾನದವರು, ಅವರನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ನಮ್ಮಲ್ಲಿ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದೆ. ಯಾಕೆ ಮುಸ್ಲಿಮರು ಸಿಎಂ ಆಗಬಾರದಾ? ಅವರೇನು ಅಸ್ಪೃಶ್ಯರಾ ಎಂದು ಪ್ರಶ್ನೆ ಮಾಡಿದೆ. ನಾನು ಕೊಟ್ಟ ಈ ಹೇಳಿಕೆ ಅಸ್ಪೃಶ್ಯತೆಯನ್ನು ಪೋಷಿಸುವ ಉದ್ದೇಶ ಇಟ್ಟುಕೊಂಡು ಹೇಳಿದ್ದಲ್ಲ. ನಾನು ಅಸೃಶ್ಯತೆಯ ವಿರೋಧಿ. ಅದೆಲ್ಲವನ್ನೂ ಕೃತಿಯಲ್ಲಿ ಮಾಡಿ ತೋರಿಸಿದ್ದೇನೆ” ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ಸಿದ್ದರಾಮಯ್ಯ ಕೂಡ ಹೇಳಿಕೆ ಕೊಟ್ಟಿದ್ದಾರೆ

“ಸಿದ್ದರಾಮಯ್ಯ ಕೂಡ ಅವರೇನು ಅಸ್ಪೃಶ್ಯರಾ ಎಂದು ಹೇಳಿದ್ದಾರೆ. ಯಾರೋ ಒಬ್ಬರು ನನಗೆ ಆ ವಿಡಿಯೋ ತೋರಿಸಿದರು. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ. ನನ್ನ ಹೇಳಿಕೆ ಬಗ್ಗೆ ದೊಡ್ಡ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಇದನ್ನು ನೋಡಿದರೆ ಪಿತೂರಿ ಎಂದು ತಿಳಿಯುತ್ತದೆ. ಕಳೆದ 75 ವರ್ಷಗಳಿಂದ ದಲಿತರನ್ನು ಶೋಷಣೆ ಮಾಡಿದ ಜನ ನನ್ನ ಹೇಳಿಕೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app