ಪದೇ ಪದೆ ಕರೆದು ಯಾಕೆ ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ: ಇ.ಡಿ, ಸಿಬಿಐ ಬಗ್ಗೆ ಡಿಕೆಶಿ ಬೇಸರ

D K Shivakumar
  • ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ
  • ಈಗ ನಡೆದಿರುವ ಹಗರಣಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ

‘ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ನನ್ನ ಹಾಗೂ ನನ್ನ ಸಹೋದರನ ಮೇಲೆ ಪ್ರಕರಣ ದಾಖಲಿಸಿವೆ; ನಾವು ನಮ್ಮ ಕಾನೂನು ಹೋರಾಟ ಮುಂದುವರೆಸಿದ್ದೇವೆ. ಆದರೆ, ಅವರು ಪದೇ ಪದೆ ನಮ್ಮನ್ನು ಕರೆದು ಯಾಕೆ ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ನನ್ನ ಮೇಲೆ ದಾಖಲಾಗಿರುವ ಪ್ರಕರಣ ಸಂಬಂಧ ನಾನು ಈಗಾಗಲೇ ಉತ್ತರಿಸಿದ್ದೇನೆ; ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಫೌಂಡೇಶನ್ ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆ. ಆದ್ದರಿಂದ, ಇದೇ ತಿಂಗಳ 7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ನನಗೆ ಮತ್ತು ನನ್ನ ತಮ್ಮನಿಗೆ ನೋಟಿಸ್ ಕೊಟ್ಟು ದಾಖಲಾತಿ ನೀಡುವಂತೆ ಕೇಳಿದ್ದಾರೆ. ಕೆಲ ದಾಖಲಾತಿಗಳನ್ನು ಸಲ್ಲಿಸಿದ್ದು, ಇನ್ನೂ ಕೆಲ ದಾಖಲಾತಿಗಳನ್ನು ಕೊಡಬೇಕಿದೆ” ಎಂದು ಮಾಹಿತಿ ನೀಡಿದರು.

Eedina App

“ಆದಾಯ ಮೀರಿ ಗಳಿಕೆ ಆರೋಪದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆ ರೀತಿ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ನಾನು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ” ಎಂದರು.

ಈ ಸುದ್ದಿ ಓದಿದ್ದೀರಾ? ಗರ್ಭಿಣಿ ಸಾವು ಪ್ರಕರಣ | ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ, ಎಚ್‌ಡಿಕೆ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಕಿಡಿ

AV Eye Hospital ad

ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ

ಹಿಂದಿನ ಸರ್ಕಾರಗಳಲ್ಲಿ ನಡೆದಿರುವ ಇಂಧನ ಇಲಾಖೆ ಹಗರಣಗಳ ತನಿಖೆ ನಡೆಸುತ್ತೇವೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನನ್ನ ಮೇಲೆ ಏನು ಬೇಕಾದರೂ ತನಿಖೆ ನಡೆಸಲಿ. ಒಂದು ಸಣ್ಣ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲು ನಾನು ಸಿದ್ಧನಿದ್ದೇನೆ; ತನಿಖೆಯನ್ನು ನಾನು ಸ್ವಾಗತಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಏನೇನು ಹಗರಣ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ತಿರುಗೇಟು ನೀಡಿದರು.

“ಬಿಟ್ ಕಾಯಿನ್ ಸೇರಿದಂತೆ ಹಲವು ಹಗರಣ ಯಾವ ರೀತಿ ಮುಚ್ಚಿ ಹಾಕಿದರು, ಬೇರೆ ಬೇರೆ ತನಿಖೆಗಳನ್ನು ಹೇಗೆ ದಾರಿ ತಪ್ಪಿಸಿದರು ಎಂಬುದು ಸಮಯ ಬಂದಾಗ ಗೊತ್ತಾಗುತ್ತದೆ. ನಾನು ಸಚಿವನಾಗಿದ್ದಾಗ ಏನೇನು ಮಾಡಿದೆ ಎಂಬ ಸತ್ಯಾಂಶವನ್ನು ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲ; ಸತ್ಯವನ್ನು ಮುಚ್ಚಿಹಾಕಬಾರದು” ಎಂದು ಹೇಳಿದರು.

ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ

ತುಮಕೂರಿನಲ್ಲಿ ಸಂಭವಿಸಿದ ಬಾಣಂತಿ ಮತ್ತು ಅವಳಿ ಮಕ್ಕಳ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದು ಸರ್ಕಾರದ ವೈಫಲ್ಯ, ಸರ್ಕಾರಕ್ಕೆ ಮಾನವೀಯತೆ ಇಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ. ಅಂದಿನ ನನ್ನ ಮಾತಿಗೆ ಈ ಘಟನೆಯೇ ಸಾಕ್ಷಿ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app