ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕರೆ ಕೋಮು ಸಂಘರ್ಷಕ್ಕೆ ಕೊನೆ ಹಾಡುತ್ತೇನೆ: ಎಚ್ ಡಿ ಕುಮಾರಸ್ವಾಮಿ 

JDS karnataka
  • ಕರ್ನಾಟಕವನ್ನು ಕೋಮು ಸಂಘರ್ಷದಲ್ಲಿ ಬೇಯಿಸುತ್ತಿರುವ ಬಿಜೆಪಿ
  • ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು

‘ನಮ್ಮ ಪಕ್ಷಕ್ಕೊಮ್ಮೆ ಪೂರ್ಣ ಪ್ರಮಾಣದ ಸರ್ಕಾರ ನೀಡಿದರೆ ಜನಪರ ಸರ್ಕಾರ ನೀಡುತ್ತೇನೆ. ರಾಜ್ಯದಲ್ಲಿನ ಕೋಮು ಸಂಘರ್ಷಕ್ಕೆ ಕೊನೆ ಹಾಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಕೋಲಾರದಲ್ಲಿ ಭಾನುವಾರ ನಡೆದ ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜಾತ್ಯತೀತತೆ ಬಗ್ಗೆ ಹೇಳುತ್ತಲೇ ಜಾತಿ ಜಾತಿಗಳ ನಡುವೆ ಕಾಂಗ್ರೆಸ್‌ ಹುಳಿ ಹಿಂಡಿತು. ದಲಿತರು ಮತ್ತು ಅಲ್ಪಸಂಖ್ಯಾತ ನಾಯಕರನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಮುಗಿಸಿತು” ಎಂದು ಅವರು ನೇರ ಆರೋಪ ಮಾಡಿದರು.

“ಇನ್ನು, ಬಿಜೆಪಿ ಜನರ ನೆಮ್ಮದಿಯ ಜೀವನವನ್ನೇ ಕಸಿಯುತ್ತಾ ತನ್ನ ರಾಜಕೀಯಕ್ಕಾಗಿ ಕರ್ನಾಟಕವನ್ನು ಕೋಮು ಸಂಘರ್ಷದಲ್ಲಿ ಬೇಯುವಂತೆ ಮಾಡುತ್ತಿದೆ” ಎಂದು ಅವರು ಕಿಡಿಕಾರಿದರು.

"ಕಾಂಗ್ರೆಸ್‌ ಹೇಳುವುದು ಒಂದು. ಮಾಡುವುದು ಇನ್ನೊಂದು. ಕೋಲಾರದಲ್ಲಿ ಬಿಜೆಪಿ ಲೋಕಸಭೆ ಚುನಾವಣೆ ಅಭ್ಯರ್ಥಿಯನ್ನು ಗೆಲ್ಲಿಸಲು ತನ್ನದೇ ಆದ ದಲಿತ ಅಭ್ಯರ್ಥಿಯನ್ನು ಮುಗಿಸಲು ಕೆಲವರು ವ್ಯವಸ್ಥಿತ ಷಡ್ಯಂತ್ರ ನಡೆಸಿದರು" ಎಂದು ಕೆ ಎಚ್ ಮುನಿಯಪ್ಪ ಅವರ ಬಗ್ಗೆ ಪ್ರಸ್ತಾಪಿಸಿದರು.

"ನಮ್ಮ ಪಕ್ಷಕ್ಕೊಮ್ಮೆ ಪೂರ್ಣ ಪ್ರಮಾಣದ ಸರ್ಕಾರ ನೀಡಿ, ಜನಪರ ಆಡಳಿತ ನೀಡುತ್ತೇನೆ. ರಾಜ್ಯದಲ್ಲಿನ ಕೋಮು ಸಂಘರ್ಷಕ್ಕೆ ಕೊನೆ ಹಾಡುತ್ತೇನೆ. ಕೋಲಾರ ಉದ್ಧಾರವಾಗಲಿ ಎಂದು ಬಿಜೆಪಿ ಲೋಕಸಭಾ ಸದಸ್ಯನಿಗೆ ಒಳಗೊಳಗೇ ಸಹಕಾರ ನೀಡಿ ಕಾಂಗ್ರೆಸ್ಸಿಗರು ಗೆಲ್ಲಿಸಿದರು. ಆದರೆ, ಆ ವ್ಯಕ್ತಿ ಕ್ಲಾಕ್ ಟವರ್ ಹೆಸರಿಟ್ಟುಕೊಂಡು ರಾಜಕೀಯ ಮಾಡಿದರು" ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ಈ ಸುದ್ದಿ ಓದಿದ್ದೀರಾ?: ಬಳ್ಳಾರಿ ವಿಮ್ಸ್ ಪ್ರಕರಣ | ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆದೇಶಿಸಲಾಗಿದೆ: ಆರೋಗ್ಯ ಸಚಿವ ಸುಧಾಕರ್

"ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಇತಿಹಾಸ ನೋಡುತ್ತಾ ಹೋದರೆ ಎರಡೂ ಪಕ್ಷಗಳು ಅಲ್ಪಸಂಖ್ಯಾತರಿಗೆ ಇನ್ನಿಲ್ಲದ ಅನ್ಯಾಯ ಮಾಡಿವೆ. ರಾಜ್ಯದಲ್ಲಿ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದಾಗ ಜೆಡಿಎಸ್ ಅವರ ನೆರವಿಗೆ ಧಾವಿಸಿದೆ. ಮಂಗಳೂರಿನಲ್ಲಿ ಗೋಲಿಬಾರ್ ನಡೆದಾಗ ಸಿದ್ದರಾಮಯ್ಯ ಅಲ್ಲಿಗೆ ಹೋಗಲಿಲ್ಲ, ನಾವು ಹೋಗಿದ್ದೆವು. ಇತ್ತೀಚೆಗೆ ಮೂರು ಸರಣಿ ಕೊಲೆಗಳು ನಡೆದಾಗಲೂ ಅವರು ಹೋಗಲಿಲ್ಲ. ಮೂರೂ ಮನೆಗಳಿಗೆ ನಾವೇ ಹೋಗಿದ್ದೆವು. ಇಂಥ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ. ಒಂದು ಬಾರಿ ನಮಗೆ ಅವಕಾಶ ಕೊಡಿ. 'ಏಕ್ ಬಾರ್ ಹಮ್ ಕೋ ಮೋಕಾ ದೀಜಿಯೇ..' ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಕಣ್ಣೀರಿಟ್ಟ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ

ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಣ್ಣೀರಿಟ್ಟ ಪ್ರಸಂಗ ನಡೆಯಿತು. "ಹಿಂದೂ, ಮುಸ್ಲಿಮರು ಒಂದು ತಾಯಿಯ ಮಕ್ಕಳು. ಹಲವು ಕಡೆ ಮುಸ್ಲಿಮಮರಿಗೆ ಸಮಸ್ಯೆ ಆಗಿದೆ. ಹಲಾಲ್, ಹಿಜಾಬ್ ಅಂತ ಕಿರುಕುಳ ನೀಡಲಾಗುತ್ತಿದೆ. ಕೇವಲ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡೇ ನಮಗೆ ಕಿರುಕುಳ ನೀಡಲಾಗುತ್ತಿದೆ" ಎಂದು ಇಬ್ರಾಹಿಂ ಕಣ್ಣೀರಿಟ್ಟರು.

"ಗುಲಾಂ ನಬಿ ಆಝಾದ್ ಅವರಿಗೆ ಕಾಂಗ್ರೆಸ್ ಅಸಲಿಯೆತ್ತಿನ ಬಗ್ಗೆ ಅರ್ಥವಾಯಿತು. ಆ ಪಕ್ಷದಿಂದ ಹೊರಗೆ ಬನ್ನಿ ಎಂದು ನಾನೇ ಸಲಹೆ ನೀಡಿದೆ. ಈಗ ಗುಲಾಂ ನಬಿ ಆಝಾದ್ ಕಾಂಗ್ರೆಸ್ ಬಿಟ್ಟು ಹೊರಗೆ ಬಂದರು. ಈಗ ಪ್ರಾದೇಶಿಕ ಪಕ್ಷ ಕಟ್ಟುತ್ತಿದ್ದಾರೆ" ಎಂದು ಹೇಳಿದರು.

ಸಮಾವೇಶದಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಸಿಎಂಆರ್ ಶ್ರೀನಾಥ್, ರಾಜ್ಯ ಉಪಾಧ್ಯಕ್ಷ ಶಫೀವುಲ್ಲಾ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಹಿರಿಯ ಮುಖಂಡರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್