
- ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳ್ಳವರನ್ನು ಬಿಜೆಪಿ ಭೂ ಒಡೆಯನನ್ನಾಗಿಸುತ್ತಿದೆ
- ಸಂವಿಧಾನದ ಕತ್ತು ಹಿಸುಕುವ ಕಾರ್ಯವನ್ನು ನಾವು ಗಟ್ಟಿ ಧ್ವನಿಯಿಂದ ವಿರೋಧ ಮಾಡಬೇಕಿದೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಬೆಂಬಲಿಸಿ ಅಧಿಕಾರಕ್ಕೆ ತಂದರೆ, 10ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಛರಿಸಿದರು.
ಶಿವಮೊಗ್ಗದಲ್ಲಿ ನಡೆದ ಬೃಹತ್ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದು ಶತಸಿದ್ಧ. ನಾವು ಅಧಿಕಾರಕ್ಕೆ ಬಂದ ನಂತರ ಇಲ್ಲಿನ ಜನರ, ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡುತ್ತೇವೆ" ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಬೇರು ಸಹಿತ ಕಿತ್ತೊಗೆಯುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಗುಡುಗಿದ ಸಿದ್ದರಾಮಯ್ಯ, ಜನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಕಾರ್ಯವನ್ನು ಇಲ್ಲಿಂದಲೇ ಆರಂಭಿಸುವಂತೆ ಕರೆ ನೀಡಿದರು.

"ಬಸವರಾಜ ಬೊಮ್ಮಾಯಿ ಅವರು ಶರಾವತಿ ಸಂತ್ರಸ್ಥರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದರು. ನ್ಯಾಯ ಕೊಡಿಸಿದ್ದಾರಾ? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಯಡಿಯೂರಪ್ಪ, ಈಶ್ವರಪ್ಪ ಇದೇ ಜಿಲ್ಲೆಯವರು, ರೈತರ ಪರ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ, ಜಿಲ್ಲೆಯ ರೈತರಿಗೆ ನ್ಯಾಯ ಸಿಕ್ಕಿದೆಯಾ" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
"ಎಲ್ಲ ಜಾತಿಯ ಬಡ ಜನರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದೆ ನಮ್ಮ ಕಾಂಗ್ರೆಸ್. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಅಸ್ಸಾಂ ನಲ್ಲಿ ಯಾಕೆ ಇಲ್ಲ? ನಮ್ಮ ಸರ್ಕಾರ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದು ಬೊಮ್ಮಾಯಿ ಅವರು. ಮತ್ತೆ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ಅಕ್ಕಿಯನ್ನು ಕಡಿತ ಮಾಡಿದವರು ಬಡವರ ಪರವಾಗಿ ಇರಲು ಸಾಧ್ಯವೇ?" ಎಂದು ವಿಪಕ್ಷ ನಾಯಕರು ಕೇಳಿದರು.
"ಇಂದಿರಾ ಗಾಂಧಿ ಅವರು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದವರು. ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆಯನ್ನು ಜಾರಿಗೊಳಿಸಿದವರು ದೇವರಾಜ ಅರಸು. ಇಂದು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಉಳ್ಳವನನ್ನೇ ಭೂಮಿಯ ಒಡೆಯನನ್ನಾಗಿ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಈ ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಹೇಳಿದವರು ಗುತ್ತಿಗೆದಾರರ ಸಂಘದವರು. 'ನ ಖಾವೂಂಗಾ ನ ಖಾನೆದೂಂಗ' ಎಂದು ಹೇಳುವ ನರೇಂದ್ರ ಮೋದಿ ಅವರು ಯಾಕೆ ಸುಮ್ಮನಿದ್ದಾರೆ? ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಮೋದಿ ಅವರಿಗೆ ಪತ್ರ ಬರೆದು ಒಂದು ವರ್ಷ ಕಳೆದಿದೆ ಏನಾದರೂ ಕ್ರಮ ಕೈಗೊಂಡರಾ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಂಗಾರಪ್ಪ ಅವರು, ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿ, ಮಂತ್ರಿ ಆಗಿದ್ದರು. ಇವರ ಆಸ್ತಿಪಾಸ್ತಿಗಳನ್ನು ನೋಡಿ, ಬಿಜೆಪಿಯವರ ಆಸ್ತಿಯನ್ನು ನೋಡಿ. ಕೋಟಿ ಕೋಟಿ ಲೂಟಿ ಮಾಡಿ ಆಸ್ತಿ ಮಾಡಿಕೊಂಡಿದ್ದಾರೆ. ಇವರಿಗೆ ನರೇಂದ್ರ ಮೋದಿ ಅವರು ರಕ್ಷಣೆ ನೀಡುತ್ತಿದ್ದಾರೆ. ಐಟಿ, ಇಡಿ ಅವರು ಕಾಂಗ್ರೆಸಿನವರನ್ನು ಹುಡುಕಿ ಹುಡುಕಿ ರೇಡ್ ಮಾಡಿ ಜೈಲಿಗೆ ಹಾಕುತ್ತಾರೆ. ಬಿಜೆಪಿಯವರೇನು ಹರಿಶ್ಚಂದ್ರರಾ? ಇಂದು ನೇಮಕಾತಿ, ವರ್ಗಾವಣೆ, ಗುತ್ತಿಗೆ ಕಾಮಗಾರಿಗಳಲ್ಲಿ ಲಂಚ ನಡೆಯುತ್ತಿದೆ. ಹೋಟೆಲ್ ನ ಮೆನುವಿನಂತೆ ಎಲ್ಲಾ ಅಧಿಕಾರಿಗಳಿಗೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ಇಂತಹ ಸರ್ಕಾರ ಇರಬೇಕಾ? ಎಂದು ಸಿದ್ದರಾಮಯ್ಯ ಕೇಳಿದರು.
ದೇಶದ ಯುವಕರನ್ನು ಜಾತಿ, ಧರ್ಮಗಳ ಆಧಾರದಲ್ಲಿ ಎತ್ತಿ ಕಟ್ಟಿ ಬಡಿದಾಡುವಂತೆ ಮಾಡಿದ್ದಾರೆ. ಹಿಜಾಬ್, ಪ್ರಾರ್ಥನಾ ಮಂದಿರಗಳ ಪ್ರಾರ್ಥನೆ ಮುಂತಾದ ವಿಚಾರಗಳಲ್ಲಿ ಬಿಜೆಪಿ ಅವರು ಮಧ್ಯಪ್ರವೇಶ ಮಾಡುತ್ತಿದ್ದಾರೆ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ಈ ದೇಶ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಇದು ಸರ್ವ ಧರ್ಮಗಳ ನಾಡು. ಇದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೂ ಹೇಳುತ್ತದೆ. ಈ ಸಂವಿಧಾನದ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ. ನಾವದನ್ನು ಗಟ್ಟಿಧ್ವನಿಯಿಂದ ವಿರೋಧ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸುದ್ದಿ ಓದಿದ್ದೀರಾ? : ಶಿವಮೊಗ್ಗ | ಡಿಸೆಂಬರ್ ವೇಳೆಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಬದ್ಧ: ಸಿಎಂ ಬೊಮ್ಮಾಯಿ ಭರವಸೆ
ದೇಶದಲ್ಲಿ ಜನರ ಮನಸುಗಳ ಒಡೆದಿವೆ, ಭ್ರಷ್ಟಾಚಾರ, ದುರಾಡಳಿತ, ಬೆಲೆಯೇರಿಕೆ ಮಿತಿಮೀರಿದೆ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಅವರು 3575 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ಯಾವೊಬ್ಬ ನಾಯಕನೂ ಇಷ್ಟು ದೊಡ್ಡ ಪಾದಯಾತ್ರೆ ಮಾಡಿದ ನಿದರ್ಶನ ಇಲ್ಲ. ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನ ಬದುಕುವುದು ಕಷ್ಟವಾಗಿದೆ. ಇಂಥಾ ಸರ್ಕಾರವನ್ನು ಕಿತ್ತು ಹಾಕಬೇಕು, ಈ ಹೋರಾಟ ಶಿವಮೊಗ್ಗ ಜಿಲ್ಲೆಯಿಂದಲೇ ಆರಂಭ ಆಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.