ನಾಡಹಬ್ಬ ದಸರಾದಲ್ಲಿ ಕನ್ನಡ ಕಡೆಗಣನೆ; ಕನ್ನಡ ಪುಸ್ತಕ ಪ್ರದರ್ಶನ ರದ್ದು: ಎಚ್‌ಡಿಕೆ ಕಿಡಿ

  • 'ಸರ್ಕಾರದ ಕನ್ನಡ ಪ್ರೇಮ ತೋರಿಕೆಯದ್ದು' ಎಂದ ಮಾಜಿ ಸಿಎಂ
  • 'ನಾಡಹಬ್ಬದಲ್ಲಿ ತಕ್ಷಣ ಕನ್ನಡ ಪುಸ್ತಕ ಪ್ರದರ್ಶನ ಆಯೋಜಿಸಿ': ಎಚ್ಡಿಕೆ

ನಾಡ ಹಬ್ಬ ದಸರೆಯಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇಲ್ಲಿಯವರೆಗೆ ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದ ಕನ್ನಡ ಪುಸ್ತಕ ಪ್ರದರ್ಶನವನ್ನು ಈ ಬಾರಿ ಕೈಬಿಡಲಾಗಿದೆ. ಇದರ ವಿರುದ್ಧ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲೂ ಟೀಕೆ ವ್ಯಕ್ತವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಂಡಿಸಿದ್ದಾರೆ. ಅವರ ಟ್ವೀಟ್ ಸಾರಾಂಶ ಹೀಗಿದೆ:

"ಕನ್ನಡ ನಾಡಿನ ಶ್ರೀಮಂತ ಪರಂಪರೆ, ಸಾಹಿತ್ಯ ಸಿರಿ ಸಂಪತ್ತಿನ ಹೆಗ್ಗುರುತು ನಾಡಹಬ್ಬ ಮೈಸೂರು ದಸರಾ ಬಗ್ಗೆ ರಾಜ್ಯ ಸರಕಾರದ ನೀತಿ ಅತ್ಯಂತ ಖಂಡನೀಯ. ಕನ್ನಡ ಭಾಷೆ, ಸಂಸೃತಿಯ ಕುರಿತು ಆಡಳಿತ ನಡೆಸುವವರ ದಿವ್ಯ ನಿರ್ಲಕ್ಷ್ಯ ಮಾತೃಭಾಷೆಗೆ ಮಾಡಿರುವ ಅಪಮಾನ ಮತ್ತು ದ್ರೋಹ."

"ಮೈಸೂರು ದಸರೆಯಲ್ಲಿ ಕನ್ನಡ ಪುಸ್ತಕ ಪ್ರದರ್ಶನ ಅನಾದಿ ಕಾಲದಿಂದ ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ತಾಯಿಯ ಸೇವಾ ಕೈಂಕರ್ಯ. ಆದರೆ, ರಾಜ್ಯ ಸರಕಾರ ಕನ್ನಡ ಪುಸ್ತಕ ಪ್ರದರ್ಶನಕ್ಕೇ ಕೊಕ್ ಕೊಟ್ಟು, ತನ್ನ ಕನ್ನಡ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾರಿದೆ. ಪುಸ್ತಕ ಸಂಸ್ಕೃತಿಗೆ ಧಕ್ಕೆ ತಂದಿದೆ."

"ಮೈಸೂರು ಸಾಂಸ್ಕೃತಿಕ ನಗರಿ. ದಸರಾ, ಜಗದ್ವಿಖ್ಯಾತ  ಸಾಂಸ್ಕೃತಿಕ ಉತ್ಸವ. ಹೀಗಿದ್ದೂ ರಾಜ್ಯ ಸರಕಾರವು ಕನ್ನಡವನ್ನು ಧಿಕ್ಕರಿಸಿ ತನ್ನ ʼರಹಸ್ಯ ಕಾರ್ಯಸೂಚಿʼಯನ್ನು ಹೇರಲು ಹೊರಟಿದೆ. ಹಿಂದಿ ಭಾಷೆಯ ವಕ್ತಾರಿಕೆ ಮಾಡುವ ಪಕ್ಷದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?" ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ದಸರಾದಲ್ಲಿ ಪ್ರತ್ಯಕ್ಷವಾದ ʼಇಂಗನ್ನಡ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆಗೆ ಮುನ್ನುಡಿ

"ಕನ್ನಡ ಭಾಷೆ ಮುಗಿಸುವುದನ್ನೇ ರಾಜ್ಯ ಸರಕಾರ ನಿತ್ಯಕಾಯಕ ಮಾಡಿಕೊಂಡಿದೆ. ಸಮಯ ಸಿಕ್ಕಾಗಲೆಲ್ಲ ಕನ್ನಡಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡುತ್ತಲೇ ಇದೆ. ಕನ್ನಡಿಗರ ಶಾಂತಿ, ಸಹನೆಯನ್ನು ಬಿಜೆಪಿ ಪರೀಕ್ಷೆ ಮಾಡುತ್ತಿದೆ. ಬೇಕೆಂದೇ, ಉದ್ದೇಶಪೂರ್ವಕವಾಗಿ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಂತೆ ಕಾಣುತ್ತಿದೆ. ರಾಜ್ಯ ಸರಕಾರ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನಿಲ್ ಕುಮಾರ್ ಅವರೇ ಈ ಬಗ್ಗೆ ಕನ್ನಡಿಗರಿಗೆ ಉತ್ತರ ಕೊಡಬೇಕು. ತಕ್ಷಣ ಕನ್ನಡ ಪುಸ್ತಕ ಪ್ರದರ್ಶನವನ್ನು ಆಯೋಜನೆ ಮಾಡಬೇಕು" ಎಂದು ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್