ಮಳೆಗಾಲ ಅಧಿವೇಶನ | ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದ ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಚರ್ಚೆಗೆ ಒಪ್ಪಿಗೆ 

  • ಕೋರ್ಟ್‌ನಲ್ಲಿರುವ ಪ್ರಕರಣದ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ: ಬಿಜೆಪಿ ವಾದ
  • ನಿಯಮ ಬದಲಾಯಿಸಿಯಾದರೂ ಚರ್ಚೆಗೆ ಅವಕಾಶ ಕೊಡಿ: ಕಾಂಗ್ರೆಸ್ ಪಟ್ಟು

ರಾಜ್ಯ ಸರ್ಕಾರಕ್ಕೆ ಮೊದಲ ಹಗರಣದ ಲೇಪ ಹಚ್ಚಿದ ಪಿಎಸ್ಐ ಅಕ್ರಮ ನೇಮಕಾತಿ ಸದನದೊಳಗೆ ಕೋಲಾಹಲವನ್ನೆಬ್ಬಿಸಿತು. ಪ್ರಶೋತ್ತರ ಕಲಾಪದ ಬಳಿಕ ಈ ವಿಚಾರದ ಚರ್ಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದರು. ಅದರ ಜೊತೆಜೊತೆಗೆ ವಿಷಯ ಪ್ರಸ್ತಾಪಿಸಿ, "ಇದೊಂದು ಅತ್ಯಂತ ಗಂಭೀರ ವಿಷಯ; ಹಿರಿಯ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದಾರೆ. ಅನೇಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದೆ. ಹೀಗಾಗಿ ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಬೇಕು" ಎಂದು ಕೇಳಿದರು.

"ತಾವು ಚರ್ಚೆಗೆ ಅವಕಾಶ ಕೊಡುವುದರಿಂದ 545 ಹುದ್ದೆಗಳಿಗೆ ಪರೀಕ್ಷೆ ಬರೆದು ಭವಿಷ್ಯಕ್ಕಾಗಿ ಕಾದು ನಿಂತಿದ್ದ ಅಭ್ಯರ್ಥಿಗಳ ಮುಂದಿನ ಬದುಕಿನ ದಾರಿ ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ" ಎಂದು ಸಭಾಧ್ಯಕ್ಷರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.

Image

ಆದರೆ, ಈ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ ಕೋರ್ಟ್‌ನಲ್ಲಿ ತನಿಖೆ ಹಂತದಲ್ಲಿರುವ ವಿಷಯದ ಚರ್ಚೆ ಮಾಡುವುದು ಸಮಂಜಸವಲ್ಲ ಎಂದರು. ಈ ವಿಚಾರದ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. 

ಚರ್ಚೆ ನಡೆದಲ್ಲಿ ಆಡಳಿತ ಪಕ್ಷಕ್ಕೆ ಮುಜುಗರವಾಗಬಹುದು ಎಂಬ ಆತಂಕದಿಂದ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ವಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ತಿರುಗೇಟು ನೀಡಿದ ಕಾನೂನು ಸಚಿವರು, "ಈ ಹಗರಣ ಹೊರತಂದಿದ್ದೇ ನಮ್ಮ ಸರ್ಕಾರ. ನೀವು ಎಲ್ಲವನ್ನೂ ಮುಚ್ಚಿ ಹಾಕಿದ್ದೀರಿ. ಇದರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಪಾರದರ್ಶಕ ತನಿಖೆ ನಡೆಸಿ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಎಡಿಜಿಪಿ ದರ್ಜೆಯ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿತು" ಎಂದರು.

ಈ ವೇಳೆ ಮದ್ಯೆ ಪ್ರವೇಶಿಸಿದ ಕಾಂಗ್ರೆಸ್‌ನ ದೇಶಪಾಂಡೆ, ಹಗರಣದ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಾರಂಭಿಸಿದರು. ಈ ವೇಳೆ ಕೋಪಗೊಂಡ ಮಾಧುಸ್ವಾಮಿ, "ಹಿರಿಯ ಸದಸ್ಯರಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ನಾವೇನು ಇಲ್ಲಿ ಕತ್ತೆ ಕಾಯಲು ಬಂದಿದ್ದೇವಾ? ಕೂಗಾಟ, ಹಾರಾಟ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತದೆಯೇ" ಎಂದು ತಮ್ಮ ಆಕ್ರೋಶ ಹೊರಹಾಕಿದರು.

Image

ಅದಕ್ಕೆ ಸಿದ್ದರಾಮಯ್ಯ, "ನಿಯಮಗಳಿರುವುದು ಸರಿ, ಆದರೆ, ಇದೂ ಅಷ್ಟೇ ಗಹನವಾದ ವಿಚಾರ. ಹೀಗಾಗಿ ಕೊಂಚ ಬದಲಾವಣೆ ಮಾಡಿ ಚರ್ಚೆಗೆ ಅವಕಾಶ ಕೊಡಿ" ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡ ಕಾನೂನು ಸಚಿವ ಮಾಧುಸ್ವಾಮಿ, "ನಿಯಮ 60ರಡಿ ಚರ್ಚೆ ಮಾಡಬೇಕಾದರೆ ಇತ್ತೀಚಿನ ಘಟನೆಯಾಗಿರಬೇಕು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕರು ಬಂಧನಕ್ಕೊಳಪಟ್ಟಿದ್ದಾರೆ. ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ. ಸಿಐಡಿ ತನಿಖೆ ನಡೆಸುತ್ತಿರುವಾಗ ಚರ್ಚೆಗೆ ಅವಕಾಶ ಕೊಡುವುದು ಸೂಕ್ತವೇ" ಎಂದು ಕೇಳಿದರು. 

ಈ ವೇಳೆ ಎದ್ದು ನಿಂತ ಸಿದ್ದರಾಮಯ್ಯ "ಚರ್ಚಗೆ ಅವಕಾಶ ಕೊಡಲೇಬೇಕು. ನಾವು ಅಧಿಕಾರದಲ್ಲಿದ್ದಾಗ ನಿಯಮ 60ರಡಿ ಚರ್ಚೆಗೆ ಅವಕಾಶ ಕೊಟ್ಟ  ಉದಾಹರಣೆಗಳಿಲ್ಲವೇ… ಡಿ.ಕೆ.ರವಿ ಸಾವು, ಡಿವೈಎಸ್ಪಿ ಗಣಪತಿ ಭಟ್ ಸೇರಿದಂತೆ ಅನೇಕ ಪ್ರಕರಣಗಳನ್ನು ಸದನದಲ್ಲಿ ಚರ್ಚೆ ಮಾಡಲಾಗಿದೆ. ಈಗ ತನಿಖೆ ನಡೆಯುತ್ತಿದೆ ಎಂಬ ಒಂದೇ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಡದಿದ್ದರೆ ಹೇಗೆ" ಎಂದು ಮರು ಪ್ರಶ್ನೆ ಹಾಕಿದರು.

Image

ಈ ವಿಚಾರಕ್ಕೆ ಮರಳಿ ಸದಸದಲ್ಲಿ ಗದ್ದಲ ಕೋಲಾಹಲ ಆರಂಭವಾಯಿತು. ಗದ್ದಲದ ನಡುವೆಯೇ ಎಂ.ಬಿ.ಪಾಟೀಲ್ ಮತ್ತು ಜಮೀರ್ ಅಹ್ಮದ್ ಮಾತನಾಡಲು ಮುಂದಾದರು. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಮಾಧುಸ್ವಾಮಿ, "ನಿಮಗೆ ಸದನದ ನಿಯಮಗಳು ಅರ್ಥವಾಗುತ್ತವೆಯೇ? ಸುಮ್ಮನೆ ಯಾಕೆ ಕೂಗಾಡುತ್ತಿರಿ? ಎಲ್ಲದರ ಬಗೆಗೂ ತನಿಖೆ ನಡೆಯುತ್ತಿದೆ. ನೀವು ಕೂಗಾಡಿದ ಮಾತ್ರಕ್ಕೆ ವಿಧಾನಸಭೆಯ ಕಾರ್ಯಕಲಾಪಗಳ ಹೆದರುವುದಿಲ್ಲ" ಎಂದು ಜೋರು ಧ್ವನಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮತ್ತೆ ಮಾತಿಗೆ ನಿಂತ ಸಿದ್ದರಾಮಯ್ಯ, "ರೀ ಮಾಧುಸ್ವಾಮಿಯವರೇ, ಇದಕ್ಕೆ ನಾವು ಹೆದರುವುದಿಲ್ಲ. 40 ವರ್ಷದಿಂದ ಈ ಸದನದಲ್ಲಿ ಇದ್ದೇನೆ. ರಾಜಕೀಯ ಭಾಷಣ ಮಾಡಲು ನನಗೂ ಬರುತ್ತದೆ. 2006ರಿಂದ ಹಿಡಿದು ಇಲ್ಲಿಯವರೆಗೆ ಯಾವ್ಯಾವ ಇಲಾಖೆಯಲ್ಲಿ ಏನೇನು ಆಗಿದೆಯೋ ತಿಳಿದುಕೊಳ್ಳಿ. ಬೇಕಾದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿಕೊಳ್ಳಿ" ಎಂದರು.

ಈ ಸುದ್ದಿ ಓದಿದ್ದೀರಾ? : ಮಳೆಗಾಲ ಅಧಿವೇಶನ | ಬಿಟ್‌ ಕಾಯಿನ್‌ ಆರೋಪಕ್ಕೆ ಸಾಕ್ಷಾಧಾರ ಕೊಡಿ : ಆರಗ ಜ್ಞಾನೇಂದ್ರ

ಇದಾದ ಬಳಿಕವೂ ಕೆಲಕಾಲ ಸದಸನದಲ್ಲಿ ಗದ್ದಲದ ವಾತಾರವಣ ನಿರ್ಮಾಣವಾಗಿತ್ತು. ಬಳಿಕ ಇವೆಲ್ಲವನ್ನೂ ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪಕ್ಷದ ನ್ಯಾಯಯುತ ಬೇಡಿಕೆಗೆ ಮಣಿದು ಎರಡೂ ಪಕ್ಷಗಳ ವಾದ ವಿವಾದವನ್ನಾಲಿಸಿ, ನಿಯಮ 60ರ ಬದಲು 69ರ ಅಡಿ ಚರ್ಚೆಗೆ ಅವಕಾಶ ನೀಡಿದರು. ಸಭಾಧ್ಯಕ್ಷರ ಈ ನಿರ್ಧಾರ ಸದನದಲ್ಲಿನ ಕಾವೇರಿದ ವಾತಾವರಣವನ್ನು ತಣ್ಣಗಾಗಿಸಿತು.

ನಿಮಗೆ ಏನು ಅನ್ನಿಸ್ತು?
0 ವೋಟ್