ಅಧಿಕಾರ ಸಿಕ್ಕರೆ ಎಲ್ಲಾ ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನ: ಎಚ್.ಡಿ. ಕುಮಾರಸ್ವಾಮಿ

  • ಜೆಡಿಎಸ್ 30-40 ಗೆಲ್ಲುತ್ತದೆ. ಆದರೆ ನನಗೆ ಬೇಕಿರುವುದು 120 ಸೀಟು
  • ನಾಡಿನ ಸಂಪತ್ತು ಉಳಿಯಬೇಕು. ಉಳಿಸುವ ಕೆಲಸ ಮಾಡಬೇಕು

"ಜನತಾದಳ (ಜಾತ್ಯಾತೀತ) ಪಕ್ಷಕ್ಕೆ ಐದು ವರ್ಷ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ 75 ವರ್ಷಗಳಿಂದ ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯವನ್ನು ಸರಿಪಡಿಸುತ್ತೇನೆ. ಇಲ್ಲವಾದರೆ ಪಕ್ಷವನ್ನು ಬರ್ಕಾಸ್ತು ಮಾಡಿ ಮನೆಗೆ ಹೋಗುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯಪುರದ ಆಲಮಟ್ಟಿಯಲ್ಲಿ ಜನತಾ ಜಲಧಾರೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಜೆಡಿಎಸ್ ಪಕ್ಷ ಈಗಲೂ 30-40 ಸೀಟು ಗೆಲ್ಲುತ್ತದೆ. ಅನುಮಾನ ಬೇಡ. ಆದರೆ ನನಗೆ ಬೇಕಿರುವುದು 120 ಸೀಟು. ಹನುಮ ಜಯಂತಿಯಂದು ನಾನು ಶಪಥ ಮಾಡುತ್ತಿದ್ದೇನೆ. ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾಡಿ ತೋರಿಸುವೆ” ಎಂದರು.

“ಭ್ರಷ್ಟಾಚಾರದ ಬಗ್ಗೆ ಬೇಕಾದಷ್ಟು ಹೇಳಬಹುದು. ಆದರೆ ನಮಗೆ ಬೇಕಿರುವುದು ಜನರ ಒಳಿತು ಮಾತ್ರ. ಈಗ ಎಲ್ಲೆಡೆ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆದರೆ, ನಾವು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ. ನೀರಾವರಿ, ನಿರುದ್ಯೋಗ, ಶಿಕ್ಷಣ, ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಅನೇಕ ಯೋಜನೆಗಳ ಬಗ್ಗೆ ಚಿಂತನೆ ಮಾಡಿದ್ದೇವೆ” ಎಂದು ಹೇಳಿದರು.

“ನಾಡಿನ ಸಂಪತ್ತು ಉಳಿಯಬೇಕು. ಉಳಿಸುವ ಕೆಲಸ ಮಾಡಬೇಕು. ಆದರೆ, ಕೇಂದ್ರದವರು ನಾಡಿನ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಹೇಳಿದ್ದಾರೆ, ಅದನ್ನು ಮಾಡಲು ಅವರಿಗೆ ಸಾಧ್ಯ ಆಗಿಲ್ಲ. ಆದರೆ ಈ ಭಾಗದ ಜನ ಗುಳೆ ಹೋಗೋದು ಮಾತ್ರ ತಪ್ಪಿಲ್ಲ” ಎಂದು ಕುಮಾರಸ್ವಾಮಿ ಕಿಡಿಕಾರಿದರು..

AV Eye Hospital ad

“ರಾಜಕೀಯ ಮಾಡುವುದಕ್ಕಿಂತ ನಾಡಿನ ಜನರ ಬದುಕು ಕಟ್ಟಿಕೊಡುವ ಕೆಲಸ ಆಗಬೇಕಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಆ ಕೆಲಸ ಮಾಡಲಿದೆ. ಬಿಜೆಪಿ ಹೊಸಪೇಟೆಯಲ್ಲಿ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿದೆ. ಆ ಪಕ್ಷ ಅಧಿಕಾರಕ್ಕಾಗಿ ಹಾತೊರೆಯುವ ಪಕ್ಷ. ಅವರಿಗೆ ಬೇಕಿರುವುದು ಜನರ ಒಳಿತಲ್ಲ, ಚುನಾವಣೆ” ಎಂದರು.

ಇದನ್ನು ಓದಿದ್ದೀರಾ?: ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮೂಲಕ ಚುನಾವಣೆ ಎದುರಿಸಲು ಸಿದ್ಧ: ಬಸವರಾಜ ಬೊಮ್ಮಾಯಿ

“ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಈಗ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ನಾನು ಕೇಳಲು ಬಯಸುತ್ತೇನೆ, ನೀವು ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಇರಲಿಲ್ಲವೇ? ಅವರು ಮಾತನಾಡುತ್ತಿರುವುದು ಹೇಗಿದೆ ಎಂದರೆ, ಭೂತದ ಬಾಯಲ್ಲಿ ಭಗವದ್ಗೀತೆಯ ಬಂದ ಹಾಗಿದೆ. ಇವತ್ತಿನ ಭ್ರಷ್ಟ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷವೇ ಕಾರಣ” ಎಂದು ಆರೋಪಿಸಿದರು.

“ನಾನು ಮುಖ್ಯಮಂತ್ರಿ ಆಗಲು ಜನತಾ ಜಲಧಾರೆ ಕಾರ್ಯಕ್ರಮವನ್ನು ಮಾಡುತ್ತಿಲ್ಲ. ನೀರು ಎಲ್ಲರಿಗೂ ಅಗತ್ಯವಾದ ಜೀವದ್ರವ. ಗ್ರಾಮೀಣ ಪ್ರದೇಶದ ಜನರ ಪರಿಹಾರ ವಿಚಾರವಾಗಿದೆ ನೀರಾವರಿ. ಈ ಭಾಗದಲ್ಲಿ ನೀರಾವರಿ ಸೌಲಭ್ಯ ಎಷ್ಟು ಆಗಬೇಕಿದೆಯೋ, ಅಷ್ಟೇ ಬಡತನ ಕೂಡ ಇದೆ. ನೀವು ಮುಗ್ದ ಜನರಿದ್ದೀರಾ, ನಾವು ಕರೆದಾಗ ಬಂದು ಕೇಳಿಸಿಕೊಂಡು ಹೋಗ್ತೀರಿ. ಆದರೆ, ನಾನು ಹೇಳುವ ಎಲ್ಲಾ ಮಾಹಿತಿ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು” ಎಂದು ಜನರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ದೇವಾನಂದ ಚೌಹಾಣ್ , ಸುನೀತಾ ಚೌಹಾಣ್, ಬಸನಗೌಡ ಸಾಹೇಬ್ ಮಾಡಗಿ, ಹನುಮಂತಪ್ಪ ಮಾವಿನಮರದ, ಅಮರೇಗೌಡ ಪಾಟೀಲ, ವಿರೂಪಾಕ್ಷ ಮುಂತಾದವರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app