ಸೆಪ್ಟೆಂಬರ್ ಅಂತ್ಯದೊಳಗೆ ವಸತಿ ಇಲಾಖೆಯಿಂದ 2000 ಮನೆಗಳ ಲೋಕಾರ್ಪಣೆ: ಸಚಿವ ವಿ ಸೋಮಣ್ಣ ಭರವಸೆ

V Somanna
  • ಸಚಿವರಿಂದ ಬಹುಮಹಡಿ ಕಟ್ಟಡಗಳ ಕಾಮಗಾರಿ ಪರಿಶೀಲನೆ
  • ಡಿಸೆಂಬರ್ ಒಳಗೆ 20 ಸಾವಿರ ಮನೆಗಳ ಲೋಕಾರ್ಪಣೆ ಭರವಸೆ

ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ 2000 ಮನೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ ಸೋಮಣ್ಣ ತಿಳಿಸಿದರು.

ಯಲಹಂಕ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ಕಟ್ಟಡಗಳ ಕಾಮಗಾರಿ ಪರಿಶೀಲನೆ ನಡೆಸಿ ಮಾತಾನಾಡಿದ ಅವರು, “ಸೂರಿಲ್ಲದವರಿಗೆ ಸೂರು ಎಂಬ ಧ್ಯೇಯದಡಿ 2016-17 ಮತ್ತು 2017-18 ರಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ ಕೇಂದ್ರ ಸರ್ಕಾರವು ಮೊದಲನೇ ಕಂತಿನ ₹600 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಂದಾಯ ಇಲಾಖೆಯಿಂದ 553 ಎಕರೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದರು.

“ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸುಮಾರು 10 ಕಿ.ಮೀ ದೂರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ 2000 ಮನೆಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ. ಮೊದಲನೇ ಹಂತದ 52000 ಮನೆಗಳ ಪೈಕಿ 48000 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು ಡಿಸೆಂಬರ್ ಅಂತ್ಯದೊಳಗೆ 15 ರಿಂದ 20 ಸಾವಿರ ಮನೆಗಳನ್ನು ಲೋಕಾರ್ಪಣೆ ಮಾಡಲಾಗುವುದು” ಎಂದರು.

“ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದ್ದು, ಒಂದು ಕುಟುಂಬ ವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾಂಪೌಂಡ್, ಒಳರಸ್ತೆ, ಕುಡಿಯುವ ನೀರು, ಬೀದಿ ದೀಪ ಹಾಗೂ ಇತರೆ ವ್ಯವಸ್ಥಿತವಾದ ಸೌಲಭ್ಯಗಳನ್ನು ಒದಗಿಸಲಾಗಿದೆ” ಎಂದು ಅವರು ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ | ಮುಖ್ಯಮಂತ್ರಿ ಬೊಮ್ಮಾಯಿ ಹರ್ಷ

“ಎಲ್ಲ ಮನೆಗಳಿಗೂ ಕುಡಿಯಲು ಕಾವೇರಿ ನೀರನ್ನು ಕಲ್ಪಿಸುವುದರ ಜೊತೆಗೆ, ಎಲ್ಲಿ ಕಾವೇರಿ ನೀರಿನ ವ್ಯವಸ್ಥೆ ಲಭ್ಯವಿಲ್ಲವೋ, ಅಂತಹ ಜಾಗದಲ್ಲಿ ಕೊಳವೆ ಬಾವಿ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು” ಎಂದರು.

“ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿಬದಿ ವ್ಯಾಪಾರಿಗಳು, ಸಣ್ಣ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಹಾಗೂ 3 ಲಕ್ಷ ಅದಾಯ ಇರುವವರಿಗೆ ಮನೆಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು ₹5.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ₹5 ಲಕ್ಷ ಪಾವತಿಸಬೇಕಾಗಿದೆ. ಫಲಾನುಭವಿಗಳು ಮೊದಲು 50 ಸಾವಿರ ನೀಡಿ ರಿಜಿಸ್ಟರ್ ಮಾಡಿಸಿಕೊಂಡು, ತದನಂತರ ಪ್ರತಿ ತಿಂಗಳು 800 ರೂ. ಬಾಡಿಗೆ ರೂಪದಲ್ಲಿ ನೀಡಿದರೆ ಸಾಕು” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್