ಸ್ವಾತಂತ್ರ್ಯ ಅಮೃತ ಮಹೋತ್ಸವ| ಭಾರತದ ಜಿಡಿಪಿಯಲ್ಲಿ ಶೇಕಡ 9ರಷ್ಟು ಕೊಡುಗೆ ಕರ್ನಾಟಕದ್ದು: ಸಿಎಂ ಬೊಮ್ಮಾಯಿ

  • ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಅಡೆತಡೆಗಳ ನಡುವೆಯೂ ದೇಶ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ

“ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಈ ಸ್ವಾತಂತ್ರ್ಯ ದಿನವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನಗೈದ ಹಲವಾರು ಅನಾಮಧೇಯ ಹೋರಾಟಗಾರರಿಗೆ ಅರ್ಪಿಸುತ್ತೇನೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯವನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ ಶಾಂತಿಯ, ಸಹಬಾಳ್ವೆಯ, ಸಮಾನತೆಯ, ಸಮೃದ್ಧಿಯ, ಏಕತೆಯ ಕರ್ನಾಟಕದಿಂದ ನವಭಾರತವನ್ನು ನಿರ್ಮಿಸಲು ಶ್ರಮಿಸೋಣ” ಎಂದು ಅವರು ಕರೆ ನೀಡಿದರು. 

“1857ರಲ್ಲಿ ನಡೆದ ಘಟನೆಯನ್ನು ನಾವು ಪ್ರಥಮ ಸ್ವಾತಂತ್ರ್ಯ ದಂಗೆ ಎಂದು ಕರೆಯುತ್ತೇವೆ. ಆದರೆ, ಅದಕ್ಕೂ ಮುಂಚೆ 1824ರಲ್ಲಿಯೇ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ, ಅವರ ಬಂಟ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ಮೊದಲಿಗರಾಗಿದ್ದರು” ಎಂದರು.

“ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರು ಪಾಲ್ಗೊಂಡಿದ್ದರು. ಬದ್ಧತೆಯ ಹೋರಾಟದಿಂದ ಅತಿಶಕ್ತ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಬಹುದು ಎಂಬುದನ್ನು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸಾಧಿಸಿ ತೋರಿಸಿದರು. ಬಹುತೇಕ ಹೋರಾಟಗಾರರು ಅನಾಮಧೇಯರಾಗಿಯೇ ಉಳಿದರು. ಅಂಥ ಅನಾಮಧೇಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ” ಎಂದು ತಿಳಿಸಿದರು.

“ಭಾರತ ದೇಶವನ್ನು ಕಟ್ಟಲು ನಮ್ಮ ಸುದೈವವೆಂಬಂತೆ ಪ್ರಧಾನಿ ಮೋದಿ ಅವರ ನಾಯಕತ್ವ ದೊರೆತಿದೆ. ಎಂಟು ವರ್ಷಗಳಲ್ಲಿ ಹಲವು ಅಡೆತಡೆಗಳನ್ನು ಎದುರಿಸಿದರೂ, ದೇಶ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಾ, ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆ” ಎಂದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75 | ಭಾರತದ ಪ್ರಜೆಗಳಾದ ನಾವು; ಸಂವಿಧಾನದ ಮುನ್ನುಡಿಯ ಗಾನ

“ಕರ್ನಾಟಕ ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯವಾಗಿದೆ. ಎಲ್ಲ ತರಹದ ಸಂಪನ್ಮೂಲಗಳು ಹೇರಳವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಆಗಿದೆ. ದೇಶದ ಜಿಡಿಪಿಯಲ್ಲಿ ಶೇ. 9ರಷ್ಟು ಕೊಡುಗೆ ನಮ್ಮ ರಾಜ್ಯದ್ದಾಗಿದೆ” ಎಂದು ತಿಳಿಸಿದರು.

“ಭಾರತ ದೇಶವನ್ನು ಕಟ್ಟಲು ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ತನಕ ಎಲ್ಲರೂ ತಮ್ಮ ತಮ್ಮ ಕೊಡುಗೆ ನೀಡಿ, ದೇಶವನ್ನು ಕಟ್ಟಿದ್ದಾರೆ” ಎಂದು ಸ್ಮರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್