
- ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡ ಕಡ್ಡಾಯ ಮಾಡಿದ್ದ ಸರ್ಕಾರ
- ರಾಷ್ಟ್ರಪತಿಗಳ ಕಾರ್ಯಕ್ರಮದಿಂದಲೇ ಕನ್ನಡ ಅನುಷ್ಠಾನ ಜಾರಿ
ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಸಲುವಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯ ಗೊಳಿಸಿ ಸರ್ಕಾರಿ ಆದೇಶ ಹೊರ ಬಿದ್ದ ಬೆನ್ನಲ್ಲೇ ಅದರ ಅನುಷ್ಠಾನ ಕಾರ್ಯ ದಸರಾ ಉದ್ಘಾಟನೆಯೊಂದಿಗೆ ಆರಂಭವಾಗಿದೆ.
ನಾಡಹಬ್ಬ ದಸರಾದಲ್ಲಿ ಸರ್ಕಾರದ ಆದೇಶ ಮೊದಲ ಬಾರಿಗೆ ಅನುಷ್ಠಾನವಾಗಿದೆ. ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಅಧೀಕೃತವಾಗಿ ಚಾಲನೆ ನೀಡಿದ ದಸರಾ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಮೊದಲ ʼಇಂಗನ್ನಡʼ ಕಾಣಿಸಿಕೊಂಡಿದೆ.
ಇದೇನಿದು ಇಂಗನ್ನಡ?
ಹಿಂದಿ ಹೇರಿಕೆ ವಿಚಾರದಲ್ಲಿ ರಾಜ್ಯದಲ್ಲಾದ ಪ್ರತಿಭಟನೆ ಬಳಿಕ ರಾಜ್ಯದಲ್ಲಿ ಬಳಕೆಯಾಗುತ್ತಿರುವ ಭಾಷಾ ಪ್ರಯೋಗವೇ ಇಂಗನ್ನಡ. ಅಂದರೆ ಇಂಗ್ಲೀಷ್ ಅಕ್ಷರಗಳನ್ನು ಬಳಸಿಕೊಂಡು ಕನ್ನಡದ ವಾಕ್ಯ ರಚನೆ ಮಾಡುವುದು. ಅರ್ಥಾತ್ ನಾವುಗಳು ವಾಟ್ಸ್ಅಪ್ ನಲ್ಲಿ ಕನ್ನಡ ಟೈಪಿಂಗ್ ಬರುವುದಕ್ಕೂ ಮೊದಲು ಇಂಗ್ಲೀಷ್ ಕನ್ನಡ ಬಳಕೆ ಮಾಡುತ್ತಿದ್ದ ರೀತಿ.
ಏಕೆ ಈ ಪ್ರಯೋಗ?
ಭಾಷಾ ತಾರತಮ್ಯದ ವಿಚಾರವಾಗಿ ಭಾರತ ಒಕ್ಕೂಟ ವ್ಯವಸ್ಥೆಯೊಳಗೆ ಪ್ರಾದೇಶಿಕ ಅಸ್ಮಿತೆ ನಿಧಾನವಾಗಿ ಮೊಳಕೆಯೊಡೆಯಲು ಆರಂಭಿಸಿದ ಪರಿಣಾಮ ಬಹುತೇಕ ರಾಜ್ಯಗಳು ಮೊದಲು ತಮ್ಮ ಮಾತೃಭಾಷೆಗೆ ಮನ್ನಣೆ ನೀಡಲಾರಂಭಿಸಿವೆ.
ಇದರ ಜೊತೆಗೆ ʼಒಂದು ದೇಶ ಒಂದು ಭಾಷೆʼ ಎನ್ನುವ ನಿಲುವಿನೊಂದಿಗೆ ದೇಶದುದ್ದಕ್ಕೂ ಹಿಂದಿಯನ್ನೇ ರಾಷ್ಟ್ರಿಯ ಭಾಷೆಯನ್ನಾಗಿಸಲು ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಜಾರಿಗೆ ತಂದಿದೆ. ಇದಕ್ಕೆ ದಕ್ಷಿಣ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ತಮ್ಮ ತಮ್ಮ ಭಾಷೆಗಳಿಗೆ ಮೊದಲ ಆದ್ಯತೆ ನೀಡುವಂತೆ ಹೋರಾಟ ನಡೆಸಿದ್ದವು. ಅದರಂತೆ ಆಯಾಯ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳೇ ಆಡಳಿತ ಭಾಷೆಗಳಾಗಿ ಬಳಕೆಯಾಗುತ್ತಿವೆ.

ಆದರೆ, ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಾಗುವ ಹೊತ್ತಿನಲ್ಲಿ ಹಿಂದಿಯಲ್ಲೇ ಕಾರ್ಯಕ್ರಮ ವಿವರ ರೂಪಿಸುವುದು ಅನಿವಾರ್ಯ. ಇಲ್ಲವೇ ಇಂಗ್ಲೀಷ್ ನಲ್ಲಿ ಅದನ್ನು ಪ್ರಸ್ತುತ ಪಡಿಸಬೇಕಾಗುತ್ತದೆ. ಆದರೆ ಹಿಂದಿ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಆ ಕಾರ್ಯಕ್ರಮಗಳಲ್ಲಿ ಇಂಗ್ಲೀಷ್ ಬಳಕೆ ಹೆಚ್ಚುತಿದೆ.
ಈ ಹಿಂದೆ ಅಮಿತ್ ಷಾ ಅವರ ರಾಜ್ಯ ಕಾರ್ಯಕ್ರಮ ಮತ್ತು ಹರ್ ಘರ್ ತಿರಂಗಾ ವೇಳೆ ಹಿಂದಿ ಬಳಕೆಯಾಗಿದ್ದರ ವಿರುದ್ಧ ನಾಡಿನುದ್ದಕ್ಕೂ ಆರಂಭವಾದ ಅಭಿಯಾನ ರಾಜ್ಯ ಸರ್ಕಾರ ಕನ್ನಡ ಬಳಕೆ ವಿಚಾರದಲ್ಲಿ ಹೊಸ ಕಾನೂನನ್ನೇ ತರುವಂತೆ ಮಾಡಿತ್ತು. ಇದರ ಫಲವಾಗಿ ಈಗ ದಸರಾದ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ʼಇಂಗನ್ನಡʼ ಬಳಕೆಯಾಗಿದೆ.
ಶಿಷ್ಟಾಚಾರಕ್ಕಾಗಿ ಭಾಷೆ ಬಳಕೆ
ಸರ್ಕಾರಿ ಕಾರ್ಯಕ್ರಮಗಳ ಆಯೋಜನೆ ಮಾಡುವ ವಿಚಾರದಲ್ಲಿ ಶಿಷ್ಟಾಚಾರ ಪಾಲನೆ ಮಾಡುವುದು ಅಧಿಕಾರಿಗಳ ಕರ್ತವ್ಯ. ಏಕೆಂದರೆ ರಾಜ್ಯ ಸರ್ಕಾರದ ಕಾರ್ಯಕ್ರಮ ಫಲಕಗಳಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಬಳಕೆಗೆ ಆದ್ಯತೆ ಇದ್ದರೆ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲು ಹಿಂದಿ ಅಥವಾ ಇಂಗ್ಲೀಷ್ ಬಳಕೆ ಇರುತ್ತದೆ. ನಂತರ ಸ್ಥಳೀಯ ಭಾಷೆಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಸ್ಥಳೀಯ ಭಾಷೆ ಬಳಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ತಿಕ್ಕಾಟದಿಂದಾಗಿ ರಾಜ್ಯ ಸರ್ಕಾರಗಳು ತಮ್ಮಲ್ಲಿನ ಭಾಷೆಗಳಿಗೆ ಮನ್ನಣೆ ನೀಡುತ್ತಿವೆ.
ಈ ಸುದ್ದಿ ಓದಿದ್ದೀರಾ? : ದಸರಾ ಉತ್ಸವ-2022 | ಮಹಿಳಾ ಸಮಾನತೆ ಕಲ್ಪಿಸುವಲ್ಲಿ ಕರ್ನಾಟಕ ಮುಂದಿದೆ : ರಾಷ್ಟ್ರಪತಿ ದ್ರೌಪದಿ ಮುರ್ಮು
ದಸರಾ ಕಾರ್ಯಕ್ರಮದಲ್ಲಿ ಕನ್ನಡದ ಫಲಕದ ಜೊತೆಗೆ ನಾಡಹಬ್ಬ ದಸರಾಗೆ ಸ್ವಾಗತ ಎಂದು ಇಂಗನ್ನಡದಲ್ಲೂ ಸ್ವಾಗತ ಕೋರಲಾಗಿದೆ. ಆ ಮೂಲಕ ಭಾಷಾ ತಾರತಮ್ಯ ಮತ್ತು ರಾಷ್ಟ್ರಪತಿ ಭವನ ಹಾಗೂ ರಾಜ್ಯ ಸರ್ಕಾರದ ಶಿಷ್ಟಾಚಾರ ಪಾಲನೆ ವಿಚಾರದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.