ಬೆಂಗಳೂರು | ಇನ್ಸ್‌ಪೆಕ್ಟರ್ ನಂದೀಶ್ ಸಾವು ಹೃದಯಾಘಾತವಲ್ಲ; ಸರ್ಕಾರ ನಡೆಸಿರುವ ಕಗ್ಗೊಲೆ: ಎಚ್ ಡಿ ಕುಮಾರಸ್ವಾಮಿ

H D Kumaraswamy
  • ಮೃತ ಇನ್ಸ್‌ಪೆಕ್ಟರ್ ನಂದೀಶ್ ಹಿನ್ನೆಲೆ ತಿಳಿದುಕೊಂಡಿದ್ದೇನೆ
  • ಉತ್ತರ ಭಾರತದ ಹಿರಿಯ ಅಧಿಕಾರಿಗಳಿಂದ ಕರ್ನಾಟಕದಲ್ಲಿ ದರ್ಪ

‘ಕೆ ಆರ್ ಪುರಂ ಇನ್ಸ್‌ಪೆಕ್ಟರ್ ನಂದೀಶ್ ಸತ್ತಿರುವುದು ಉತ್ತರ ಭಾರತದ ಅಧಿಕಾರಿಗಳ ಕಿರುಕುಳ ಹಾಗೂ ಸರ್ಕಾರ ನಡೆಸಿರುವ ಕಗ್ಗೊಲೆಯಿಂದ; ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿ, ಜೆ ಪಿ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೆ ಆರ್ ಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಂದೀಶ್ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಗೂ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.

Eedina App

“ಬಿಜೆಪಿ ಹೈಕಮಂಡ್ ಕೃಪಾಕಟಾಕ್ಷ ಇರುವ, ಅದರಲ್ಲೂ ಉತ್ತರ ಭಾರತ ಮೂಲದ ಹಿರಿಯ ಅಧಿಕಾರಿಗಳ ಉದ್ಧತಟನ, ಕಿರುಕುಳ, ಸರ್ಕಾರದ ನಡವಳಿಕೆ, ಕಾಸಿಗಾಗಿ ಹುದ್ದೆ ಕೊಡುತ್ತಿರುವುದೇ ಈ ಸಾವಿಗೆ ಕಾರಣ” ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದರು.

“ರಾಜ್ಯದಲ್ಲಿ ಒಂದು ದುರ್ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತದಿಂದ ತೀರಿಕೊಂಡರು. ಅಧಿಕಾರಿ ನಂದೀಶ್ ಅವರು ಹೃದಯಾಘಾತಕ್ಕೆ ಬಲಿಯಾಗಲು ಕಾರಣ ಏನು ಅನ್ನೋದು ನನ್ನ ಪ್ರಶ್ನೆ" ಎಂದರು.

AV Eye Hospital ad

"ನಂದೀಶ್ ಮಾನಸಿಕ ಒತ್ತಡಕ್ಕೆ ಒಳಗಾಗಿ ಸತ್ತಿದ್ದಾರೆ ಎಂದು ಅವರ ಧರ್ಮಪತ್ನಿ ಹೇಳಿದ್ದಾರೆ. ನನಗೆ ಕೆಲಸ ಬೇಡ ಪತಿಯನ್ನು ತಂದುಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು” ಎಂದು ಅವರು ಆಗ್ರಹಿಸಿದರು.

“ಕೆ ಆರ್ ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ಇವರ ವ್ಯಾಪ್ತಿಯಲ್ಲಿ ಇತ್ತು. ಬೆಳಗಿನ ಜಾವದವರೆಗೆ ಅದು ತೆಗೆದಿತ್ತು, ಇದಕ್ಕೆ ಈ ಪೊಲೀಸ್ ಸಹಕಾರವಿತ್ತೆಂದು ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರಂತೆ. ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯುವ ಅವಕಾಶ ಕೊಟ್ಟಿದೆ. ಆ ಪಬ್ ಎಷ್ಟೊತ್ತು ತೆಗೆದಿತ್ತು, ಅಲ್ಲಿ ಯಾರಿದ್ದರು? ರಾಜಕಾರಣಿ ಬೆಂಬಲಿಗರು ಎಷ್ಟು ಜನ ಅಲ್ಲಿ ಇದ್ದರು” ಎಂದು ಪ್ರಶ್ನಿಸಿದರು. 

ಈ ಸುದ್ದಿ ಓದಿದ್ದೀರಾ? ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್ ಡಿ ದೇವೇಗೌಡ ಪುನರ್ ಆಯ್ಕೆ

"ಇನ್ಸ್‌ಪೆಕ್ಟರ್ ನಂದೀಶ್ ಹಿನ್ನೆಲೆ ತಿಳಿದುಕೊಂಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ. 'ಸಸ್ಪೆಂಡ್ ರಿವೋಕ್‌'ಗಾಗಿ ಹಲವು ಮುಖಂಡರ ಮನೆಗೂ ಹೋಗಿದ್ದರಂತೆ. ಪೊಲೀಸ್ ಅಧಿಕಾರಿ ಬಳಿ ₹70-80 ಲಕ್ಷ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡು ನಂತರ ಹೀಗೆ ಆದಾಗ ಅವರು ಎಲ್ಲಿ ಹಣ ವಸೂಲಿ ಮಾಡಬೇಕು? ಸರ್ಕಾರದ ನಡವಳಿಕೆಯಿಂದ ಆದ ಕಗ್ಗೊಲೆಯೇ ಇದು” ಎಂದು ಕಿಡಿಕಾರಿದರು.

“ಈ ಸರ್ಕಾರ ನೇಮಕಾತಿ, ವರ್ಗಾವಣೆಗೆ ಲಕ್ಷಾಂತರ ಹಣ ಪಡೆದು ಕೊಳ್ಳೆ ಹೊಡೆಯುತ್ತಿದೆ. ಅದೇ ರೀತಿ ಒತ್ತಡ ತಂದು ನಂದೀಶ್ ಅವರಿಂದ ಹಣ ವಸೂಲಿ ಮಾಡಲಾಗಿದೆ. ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಬಿಜೆಪಿ ಹೈಕಮಾಂಡ್ ರಕ್ಷಣೆ ಇದೆ ಎಂದು ಹಿರಿಯ ಅಧಿಕಾರಿಗಳು ಹೀಗೆ ಮಾಡುತ್ತಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಐಎಎಸ್ ಸೇರಿ ಕೆಲ ಅಧಿಕಾರಿಗಳ ಮನೆಗಳಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ. ನಂತರ ನೋಡಿದರೆ ಅಂತಹ ಅಧಿಕಾರಿಗಳು ಆಯಕಟ್ಟಿನ ಜಾಗಕ್ಕೆ ಬರುತ್ತಾರೆ" ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ಸ್ವೇಚ್ಛಾಚಾರವಾಗಿ ದಂಧೆ ನಡೆಸಲು ಯಾಕೆ ಬಿಡಬೇಕು ಎನ್ನುವುದು ನನ್ನ ಪ್ರಶ್ನೆ. ರಾಮನಗರ ಜಿಲ್ಲೆಯಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ನನಗೆ ಗೊತ್ತಿದೆ. ಎಲ್ಲಿ, ಹೇಗೆ ಪೋಸ್ಟಿಂಗ್ ಕೊಡ್ತಾ ಇದ್ದಾರೆ ಅಂತಲೂ ಗೊತ್ತಿದೆ. ನಾನು ಹಣ ಪಡೆದು ಪೋಸ್ಟಿಂಗ್ ಕೊಟ್ಟಿದ್ದರೆ ತಲೆ ಬಾಗುತ್ತೇನೆ” ಎಂದು ಅವರು ಸವಾಲು ಹಾಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app