ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದಲ್ಲಿ ಬೇಜವಾಬ್ದಾರಿ ನಡವಳಿಕೆ: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

h d kumaraswamy
  • ನಮ್ಮ ಆಹಾರ ಪದ್ಧತಿ, ನಡವಳಿಕೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಬಾರದು
  • ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆಶೀರ್ವಾದ ಬೇಕು

ವಿರೋಧ ಪಕ್ಷದ ನಾಯಕರ‌ ಮೇಲೆ ಮೊಟ್ಟೆ ಎಸೆದರು ಎಂದು ಅದಕ್ಕೊಂದು ಪಾದಯಾತ್ರೆ, ಅದರ ವಿರುದ್ಧವಾಗಿ ಇನ್ನೊಂದು ಪಾದಯಾತ್ರೆ. ಎರಡು ರಾಷ್ಟ್ರೀಯ ಪಕ್ಷಗಳ ಈ ಬೇಜವಾಬ್ದಾರಿ ನಡವಳಿಕೆ ರಾಜ್ಯದ ಜನತೆಯ ಸಮಸ್ಯೆಗೆ ಪೂರಕವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯಲ್ಲಿರುವ ಸ್ವಗ್ರಾಮ ಹರದನಹಳ್ಳಿಯಲ್ಲಿ ಭಾನುವಾರ ಮಾತನಾಡಿದ ಅವರು, “ಎರಡು (ಬಿಜೆಪಿ-ಕಾಂಗ್ರೆಸ್) ಪಕ್ಷಗಳಿಗೆ ಭಗವಂತನೇ ಜ್ಞಾನೋದಯ ಕೊಡಲಿ ಎಂದು ಬಯಸುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಸಮಾಜದ ಸಾಮರಸ್ಯ ಹಾಳು ಮಾಡುವುದರಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿದ್ದಾರೆ" ಎಂದು ಟೀಕಿಸಿದರು.

“ಇವರ ಹುಚ್ಚಾಟಕ್ಕೆ ಜನತೆಯೇ ಸರಿಯಾದ ಉತ್ತರಕೊಡಬೇಕು. ನಮ್ಮ ಆಹಾರ ಪದ್ಧತಿಗಳು, ನಮ್ಮ ನಡವಳಿಕೆಗಳನ್ನ ದೊಡ್ಡಮಟ್ಟದಲ್ಲಿ ಪ್ರಚಾರಕ್ಕೆ, ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುವಂತಹ ರೀತಿಯಲ್ಲಿ ನಾವು ಅವಕಾಶ ಕೊಡದೆ ಇರುವುದು ಒಳ್ಳೆಯದು. ನಮ್ಮ ನಡವಳಿಕೆ, ಪದ್ಧತಿ ನಮಗೆ ಸೇರಿರೋದು. ಸಾರ್ವಜನಿಕವಾಗಿ ನಾನು ಆ ರೀತಿ, ಈ ರೀತಿ ಬದುಕಿದ್ದೇನೆ ಅನ್ನುವ ಮೂಲಕ ಸಂಘರ್ಷ ಉಂಟುಮಾಡಬಾರದು” ಎಂದರು. 

“ಆ ಎರಡು ಪಕ್ಷಗಳಿಗೆ ಜನರ ಸಮಸ್ಯೆಗಳನ್ನು ಸರಿ ಪಡಿಸೋದು ಬೇಕಾಗಿಲ್ಲ. ಅವರಿಗೆ ಬೇಕಾಗಿರೋದೆ ಇಂತಹ ವಿವಾದ ವಿಷಯಗಳು. ವಿವಾದಗಳ ಮೇಲೆ ಮುಂದಿನ ಚುನಾವಣೆಯಲ್ಲಿ ಮತ ಪಡೆಯಬೇಕು ಅನ್ನುವ ಇಚ್ಛೆ ಅವರದ್ದು” ಎಂದು ಕುಮಾರಸ್ವಾಮಿ ದೂರಿದರು.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “2019ರಲ್ಲಿ ಮಳೆಯಿಂದ ಆದ ಅನಾಹುತಗಳಿಗೆ ಮತ್ತು ಬೆಳೆ ಹಾನಿಗೆ ಪರಿಹಾರ ಕೊಡದೆ, ಕೇವಲ ಘೋಷಣೆ ಆಗಿ‌ ಮಾತ್ರ ಉಳಿದಿದೆ. ಹಲವಾರು ಕುಟುಂಬಗಳು ಈಗಲೂ ಶೆಡ್‌ನಲ್ಲೇ ವಾಸ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ” ಎಂದರು.

ಈ ಸುದ್ದಿ ಓದಿದ್ದೀರಾ?: ಮಾಂಸ ತಿಂದು ದೇಗುಲ ಪ್ರವೇಶ ವಿವಾದ | ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

“ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಮತ್ತು ಜಾಹೀರಾತುಗಳಲ್ಲಿ ಕೆಲವು ವ್ಯಕ್ತಿಗಳನ್ನು ಅವಹೇಳನ ಮಾಡಲಾಗಿದೆ. ಕೆಲವರನ್ನು ಮುಂದಿಟ್ಟುಕೊಂಡು ಎರಡು ರಾಷ್ಟ್ರೀಯ ಪಕ್ಷಗಳು ಸಾರ್ವಜನಿಕವಾಗಿ ಸಂಘರ್ಷದ ವಾತವಾರಣ ನಿರ್ಮಾಣ ಮಾಡಿದ್ದಾರೆ. ರಾಜ್ಯದ ಜನ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಒಂದು ಕಡೆ ನಿರುದ್ಯೋಗ, ಬಡತನ, ರೈತರ ಸಂಕಷ್ಟಗಳು ಇದ್ಯಾವುದಕ್ಕೂ ರಾಷ್ಟ್ರೀಯ ಪಕ್ಷಗಳು ಧ್ವನಿ ಎತ್ತುತ್ತಿಲ್ಲ” ಎಂದು ಟೀಕಿಸಿದರು.

ಇಂತಹ ಸಿದ್ದರಾಮೋತ್ಸವ ಎಷ್ಟು ನಡೆದಿಲ್ಲ‌?

ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಎರಡು ಪಕ್ಷಗಳು ಹತಾಷವಾಗಿವೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ರಾಜ್ಯದಲ್ಲಿ ಇಂತಹ ಸಿದ್ದರಾಮೋತ್ಸವಗಳು ಎಷ್ಟು ನಡೆದಿಲ್ಲ‌? ನಾವು ಕಾಣದೆ ಇರುವ ಸಿ‌ದ್ದರಾಮೋತ್ಸವನಾ, ಎಂತೆಂತಾ ಸಮಾವೇಶಗಳನ್ನು ಎಷ್ಟು ಪಕ್ಷಗಳು ಮಾಡಿಲ್ಲ. ಅವರು ಚಪಲಕ್ಕೆ ಹೇಳಿಕೊಳ್ಳುತ್ತಾರೆ. ಇಂತಹ ಉತ್ಸವಗಳಿಂದ ಜನ ಓಟು ಹಾಕುತ್ತಾರೆ ಎಂಬ ಭ್ರಮಾ ಲೋಕದಲ್ಲಿ ಇದ್ದಾರೆ” ಜರಿದರು.

ಮುಖ್ಯಮಂತ್ರಿಯಾಗಲು ಭಗವಂತನ ಆಶೀರ್ವಾದ ಬೇಕು

“ನಂಜಾವದೂತ ಸ್ವಾಮೀಗಳು ಏನು ಹೇಳಿದ್ದಾರೆ ಅದಕ್ಕೆ ಹಿನ್ನೆಲೆಯಾಗಿ ಹೇಳಿದ್ದೇನೆ. ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆಶೀರ್ವಾದ ಬೇಕು. ಆ ಭಗವಂತ ಆಶೀರ್ವಾದ ಕೊಟ್ಟಾಗ ನಮ್ಮದು ಸಹಕಾರ ಇದೆ ಅಂತ ಹೇಳಿದ್ದೇನೆ. ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದೇನೆ, ಅವರ ಪಕ್ಷವನ್ನು ಅವರು ಸಂಘಟನೆ ಮಾಡುತ್ತಿದ್ದಾರೆ” ಎಂದು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಸಹಕಾರ ನೀಡುತ್ತೇನೆ ಎಂಬ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್