ಸಣ್ಣ ನೀರಾವರಿ ಇಲಾಖೆ ಕುಂಟುತ್ತಾ, ತೆವಳುತ್ತಿರಬಹುದು: ಸಂಪುಟ ಸಹೋದ್ಯೋಗಿಗೆ ಸೋಮಶೇಖರ್ ತಿರುಗೇಟು

Somashekhar-Madhuswamy
  • ಕಾನೂನು ಸಚಿವರು ಹೇಳುವುದಿದ್ದರೆ ಮಾಧ್ಯಮಗಳ ಮುಂದೆಯೇ ಹೇಳಬೇಕು
  • ಆ ಧ್ವನಿ ಜೆ ಸಿ ಮಾಧುಸ್ವಾಮಿಯವರದ್ದೇ ಆಗಿದ್ದರೆ, ಅವರು ಹೇಳಿದ್ದು ತಪ್ಪು

‘ಸಚಿವ ಜೆ ಸಿ ಮಾಧುಸ್ವಾಮಿಯವರ ಸಣ್ಣ ನೀರಾವರಿ ಇಲಾಖೆ ಕುಂಟುತ್ತಾ, ತೆವಳುತ್ತಿರಬಹುದು, ನಮ್ಮದಲ್ಲ’ ಎಂದು ತಮ್ಮ ಸಂಪುಟ ಸಹೋದ್ಯೋಗಿಗೆ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಬಹಿರಂಗ ತಿರುಗೇಟು ನೀಡಿದ್ದಾರೆ.

“ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್‌ ಮಾಡುತ್ತಿದ್ದೇವೆ ಅಷ್ಟೆ. ಇನ್ನೆಂಟು ತಿಂಗಳು ಹೇಗೋ ತಳ್ಳಿದರೆ ಸಾಕು ಎಂದು ತಳ್ಳುತ್ತಿದ್ದೇವೆ” ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ತಮ್ಮದೇ ಸರ್ಕಾರದ ಕುರಿತು ಆಡಿರುವ ಮಾತುಗಳ ಆಡಿಯೋ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸೋಮಶೇಖರ್, ಮಾಧುಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲ ಯೋಜನೆಗಳನ್ನು ಅಂಗೀಕರಿಸಲಾಗುತ್ತಿದೆ. ಸಂಪುಟ ಅನುಮೋದಿಸಿದ ಕಾರ್ಯಕ್ರಮಗಳ ಬಗ್ಗೆ ಕಾನೂನು ಮಂತ್ರಿಗಳೇ ಮಾಧ್ಯಮದ ಮುಖಾಂತರ ಹೇಳಿದ್ದಾರೆ. ಸರ್ಕಾರ ತೆವಳುತ್ತಿರುವುದು ಆಗ ಅವರಿಗೆ ಗೊತ್ತಾಗಲಿಲ್ಲವಾ” ಎಂದು ಪ್ರಶ್ನಿಸಿದ್ದಾರೆ.

“ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ ಎಲ್ಲ ಕಾರ್ಯಕ್ರಮಗಳ ಬಗ್ಗೆ ಇವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಕು. ಹೇಳುವುದಿದ್ದರೆ ಮಾಧ್ಯಮಗಳ ಮುಂದೆಯೇ ಹೇಳಬೇಕು. ಆ ಧ್ವನಿ ಮಾಧುಸ್ವಾಮಿಯವರದ್ದೇ ಆಗಿದ್ದರೆ, ಅವರು ಹೇಳಿದ್ದು ತಪ್ಪು” ಎಂದು ಆಕ್ಷೇಪ ವ್ಯಕ್ತಪಡಿಸಿದರು.

“ಅವರ ಸಣ್ಣ ನೀರಾವರಿ ಇಲಾಖೆ ಕುಂಟುತ್ತಾ, ತೆವಳುತ್ತಿರಬಹುದು. ನಾವು ಆ ಮಟ್ಟದಲ್ಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಇಲಾಖೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಅದೇ ರೀತಿ ಬಸವರಾಜ ಬೊಮ್ಮಾಯಿ ಕೂಡ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದೇ 28ಕ್ಕೆ ಸರ್ಕಾರದ ಒಂದು ವರ್ಷದ ಕಾರ್ಯಕ್ರಮ ಕೂಡ ಮಾಡುತ್ತಿದ್ದಾರೆ” ಎಂದು ಸೋಮಶೇಖರ್ ಮಾಹಿತಿ ನೀಡಿದರು.

“ಮಾಧುಸ್ವಾಮಿ ಹೇಳಿದ ರೀತಿಯಲ್ಲಿ ಸರ್ಕಾರ ಕುಂಟುತ್ತಿಲ್ಲ. ನೂರಕ್ಕೆ ನೂರು, ಜನ ಮೆಚ್ಚುವಂಥ, ಅವರಿಗೆ ಅನುಕೂಲ ಆಗುವಂಥ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡುತ್ತಿದ್ದಾರೆ. ಆಗಸ್ಟ್ 15ರಂದು ಮುಂದಿನ ಕಾರ್ಯಕ್ರಮಗಳ ಬಗ್ಗೆ ಘೋಷಣೆ ಮಾಡುತ್ತಾರೆ” ಎಂದರು.

ಈ ಸುದ್ದಿ ಓದಿದ್ದೀರಾ?: ಅಮೃತ ಮಹೋತ್ಸವ ಜಾಹೀರಾತು| ನೆಹರೂ ಭಾವಚಿತ್ರವನ್ನೇ ಕೈಬಿಟ್ಟ ಬೊಮ್ಮಾಯಿ ಸರ್ಕಾರ; ಸಾರ್ವಜನಿಕ ಆಕ್ರೋಶ

“ನಾನು ಸಹಕಾರ ಸಚಿವನೇ ಇರಬಹುದು, ಕಾನೂನು ಬಾಹಿರವಾಗಿ ಡಿಸಿಸಿ ಬ್ಯಾಂಕ್‌ಗಳ ಮೇಲೆ ಗದಾಪ್ರಹಾರ ನಡೆಸುವುದಕ್ಕೆ ಸಾಧ್ಯವಿಲ್ಲ. ದೂರುಗಳು ಬಂದಲ್ಲಿ ಇಲಾಖೆಯಿಂದ ತನಿಖೆ ನಡೆಸಲಾಗುತ್ತದೆ. ದೂರು ಬರದೇ ಇದ್ದರೆ ತನಿಖೆ ಮಾಡುವುದಕ್ಕೆ ಆಗುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಮಾಧುಸ್ವಾಮಿ ಆಡಿಯೋದಲ್ಲಿ ಏನಿತ್ತು?

ಸಾಮಾಜಿಕ ಕಾರ್ಯಕರ್ತರೊಬ್ಬರು ಬ್ಯಾಂಕ್‌ಗಳಲ್ಲಿ ರೈತರ ಸಾಲದ ವಿಚಾರದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, “ಇದೆಲ್ಲವೂ ನನಗೆ ಗೊತ್ತು. ಸಚಿವ ಸೋಮಶೇಖರ್‌ ಗಮನಕ್ಕೂ ಇದನ್ನು ತರಲಾಗಿದೆ. ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಏನು ಮಾಡೋದು?” ಎಂದು ಅಸಹಾಯಕವಾಗಿ ಕೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ.

“ಬ್ಯಾಂಕಿನವರಿಗೆ ರೈತರಷ್ಟೇ ಅಲ್ಲ. ನಾನೂ ಹಣ ಕಟ್ಟಿದ್ದೇನೆ. ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್‌ ಮಾಡುತ್ತಿದ್ದೇವೆ ಅಷ್ಟೆ. ಇನ್ನೆಂಟು ತಿಂಗಳು ತಳ್ಳಿದರೆ ಸಾಕು ಎಂದು ತಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. ಆಡಿಯೋದಲ್ಲಿರುವ ದನಿ ಮಾಧುಸ್ವಾಮಿ ಅವರದ್ದೇ ಎನ್ನಲಾಗುತ್ತಿದ್ದರೂ, ಆ ಮಾಹಿತಿ ಇನ್ನೂ ಖಚಿತವಾಗಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್