ಎಸಿಬಿ ರದ್ದು ಆದೇಶ | ಮೊದಲು ವಿಧಾನಸೌಧದ 3ನೇ ಮಹಡಿ ಸ್ವಚ್ಛ ಮಾಡಿ; ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

h d kumaraswamy
  • ಮತ್ತೊಬ್ಬರ ಮರ್ಜಿಯಲ್ಲಿದ್ದೆ; ಎಸಿಬಿ ರದ್ದು ಮಾಡಲು ಆಗಲಿಲ್ಲ
  • ಎಸಿಬಿಯು ಭ್ರಷ್ಟಾಚಾರದ ಪವರ್ ಪಾಯಿಂಟ್ ಆಗಿತ್ತು

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಮಾಡಿ ಲೋಕಾಯುಕ್ತದ ಮೂಲಕ ಭ್ರಷ್ಟಾಚಾರ ನಿಲ್ಲಿಸುತ್ತಾರೆ ಎಂಬ ನಂಬಿಕೆ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆ ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುರಿ ಕಾಯುವುದಕ್ಕೆ ತೋಳ ಬಿಡುತ್ತಾರೆ ಎನ್ನುತ್ತಾರಲ್ಲ ಹಾಗೆ ಇದು. ಭ್ರಷ್ಟ ವ್ಯವಸ್ಥೆ ಲೋಕಾಯುಕ್ತದಿಂದ ಶುದ್ಧ ಆಗುತ್ತದೆ ಎಂದು ನಾನು ಭಾವಿಸಿಲ್ಲ. ಮೊದಲು ವಿಧಾನಸೌಧದ ಮೂರನೇ ಮಹಡಿ ಶುದ್ಧವಾಗಬೇಕು” ಎಂದು ಟೀಕಿಸಿದರು.

Eedina App

“ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಎಸಿಬಿ ರಚನೆ ಮಾಡಲಾಗಿತ್ತು. ಆ ಸರ್ಕಾರದ ವಿರುದ್ಧ ಬಂದಿದ್ದ ಅನೇಕ‌ ಆರೋಪಗಳನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ಎಸಿಬಿ ರಚನೆಯಾಗಿತ್ತು. ವಿಧಾನ ಮಂಡಲದಲ್ಲಿ ಕಾಯಿದೆ ತಂದು ಎಸಿಬಿಯನ್ನು ರಚನೆ ಮಾಡಿದ್ದಲ್ಲ ಅದು. ಆ ಸರ್ಕಾರ ಮುಖಭಂಗದಿಂದ ಪಾರಾಗಲು ಎಸಿಬಿ ರಚನೆ ಮಾಡಿತ್ತು” ಎಂದು ಕುಮಾರಸ್ವಾಮಿ ಟೀಕಿಸಿದರು.

“ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ತನ್ನ ಲೋಪದೋಷ ಮುಚ್ಚಿಕೊಳ್ಳಲು ಮಾಡಿದ ತನಿಖಾ ಸಂಸ್ಥೆಯೇ ಎಸಿಬಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಮತ್ತೊಬ್ಬರ ಮರ್ಜಿಯಲ್ಲಿದ್ದೆ. ಹೀಗಾಗಿ ಎಸಿಬಿಯನ್ನು ರದ್ದು ಮಾಡಲು ನನ್ನಿಂದ ಆಗಲಿಲ್ಲ. ನನ್ನ ಸರ್ಕಾರ ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿಯು ಎಸಿಬಿಯನ್ನು ರದ್ದು ಮಾಡಲು ಮೂರು ವರ್ಷಗಳಿಂದ ಆಸಕ್ತಿಯನ್ನೆ ತೋರಲಿಲ್ಲ. ಈಗ ರಾಜ್ಯ ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸುವ ಆದೇಶ ಮಾಡಿದೆ. ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೇ ನೀಡಿದೆ” ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ?: ಎಸಿಬಿ ರಚನೆ ಆದೇಶ ರದ್ದು | ಇದೊಂದು ಐತಿಹಾಸಿಕ ತೀರ್ಪು: ಹೋರಾಟಗಾರ ಎಸ್ ಆರ್ ಹಿರೇಮಠ್ ಸಂತಸ

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ

“ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅದಕ್ಕೆ ಒಂದು ಉದಾಹರಣೆ ನೀಡುವುದಾದರೆ, ಇಂದು ರಾಮನಗರದ ಒಂದು ಹಳ್ಳಿಯ ಮಹಿಳೆಯರು ನನ್ನನ್ನು ತಡೆದರು. ಅಲ್ಲಿನ ಮಹಿಳಾ ಹಾಲು ಉತ್ಪಾದಕರ ಸಂಘದಲ್ಲಿ 8 ಲಕ್ಷ ರೂ. ಹಣ ಲೂಟಿ ಮಾಡಿದ ಕಾರ್ಯದರ್ಶಿ ಬಗ್ಗೆ ಅವರು ದೂರು ಹೇಳಿದರು. ಹಣ ದುರುಪಯೋಗ ಮಾಡಿಕೊಂಡ ಆ ವ್ಯಕ್ತಿಯನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಮತ್ತೆ 24 ಗಂಟೆಗಳಲ್ಲಿ ಆ ವ್ಯಕ್ತಿ ಅದೇ ಜಾಗಕ್ಕೆ ವಾಪಸ್ ಬಂದಿದ್ದಾರೆ. ಈ ರಾಜ್ಯದಲ್ಲಿ ಲೂಟಿ ಹೊಡೆಯುವವರಿಗೆ ಸಂಪೂರ್ಣ ರಕ್ಷಣೆ ನೀಡಲಾಗುತ್ತಿದೆ ಎಂಬುದು ಇದರಿಂದ ಅರ್ಥವಾಗುತ್ತದೆ” ಎಂದರು.

“ನಾನು ಯಾವ ದಾಖಲೆಗಳನ್ನು ಬೇಕಾದರೂ ನೀಡಬಲ್ಲೆ. ಏನು ಪ್ರಯೋಜನ? ಎಸಿಬಿ ಭ್ರಷ್ಟಾಚಾರದ ಪವರ್ ಪಾಯಿಂಟ್ ಆಗಿತ್ತು. ಭ್ರಷ್ಟಾಚಾರ ತಡೆಯುವುದು ಅದರಿಂದ ಸಾಧ್ಯ ಆಗಲಿಲ್ಲ” ಎಂದರು.

“2008ರ ಬಿಜೆಪಿ ಸರ್ಕಾರದಲ್ಲಿ ನಡೆದ ಅಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಪಕ್ಷ ಜೆಡಿಎಸ್ ಮಾತ್ರ. ‌ಅಂದಿನ ಬಿಜೆಪಿ ಸರ್ಕಾರದ ಲಂಚಾವತಾರದ ಬಗ್ಗೆ ಸರಣಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದೆವು. ನಮ್ಮ ದೇಶದಲ್ಲಿ ಭ್ರಷ್ಟ ವ್ಯವಸ್ಥೆ ತಡೆಯಲು ಸಂಸ್ಥೆಗಳು ಇದ್ದರೂ, ಲೂಟಿಕೋರರಿಗೆ ಯಾರು ಯಾವ ರೀತಿ ರಕ್ಷಣೆ ಕೊಟ್ಟಿದ್ದಾರೆ ಅಂತ ಗೊತ್ತಿದೆ. ನಾನು ಮತ್ತೆ ಕೆದಕಲು ಹೋಗಲ್ಲ. ನನಗೆ ಲೋಕಾಯುಕ್ತ ಸೇರಿ ಮತ್ಯಾವ ಸಂಸ್ಥೆಗಳೂ ಮುಖ್ಯ ಅಲ್ಲ. ಭ್ರಷ್ಟಾಚಾರ ತೊಲಗಬೇಕು” ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app