ಬಳ್ಳಾರಿ ವಿಮ್ಸ್ ಪ್ರಕರಣ | ಯಾವ ನಂಬಿಕೆ ಮೇಲೆ ಜನರು ಸರ್ಕಾರಿ ಆಸ್ಪತ್ರೆಗೆ ಬರಬೇಕು: ಎಚ್ ಡಿ ಕುಮಾರಸ್ವಾಮಿ

h d kumaraswamy
  • ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಲಿ
  • ಆರೋಗ್ಯ ಸಚಿವರು ಬಳ್ಳಾರಿಯ ಆಸ್ಪತ್ರೆಗೆ ಮೊದಲು ಹೋಗಬೇಕಿತ್ತು

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಹೊಣೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೇ ಹೊರಬೇಕು. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಡಾ. ಕೆ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೋಲಾರದಲ್ಲಿ ಭಾನುವಾರ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

“ಇಬ್ಬರು ರೋಗಿಗಳ ಸಾವಿನ ಬಗ್ಗೆ ಸರ್ಕಾರ ವಾಸ್ತವಾಂಶಗಳನ್ನು ಸ್ಪಷ್ಟಪಡಿಸಿಲ್ಲ. ನೈತಿಕತೆ ಇದ್ದಿದ್ದರೆ ಆರೋಗ್ಯ ಸಚಿವರು ಬಳ್ಳಾರಿಯ ಆಸ್ಪತ್ರೆಗೆ ಮೊದಲು ಹೋಗಬೇಕಿತ್ತು. ಅವರು ಹೋಗಲಿಲ್ಲ. ಬೆಂಗಳೂರಿನಲ್ಲಿ ಇದ್ದುಕೊಂಡೇ ಮಾತನಾಡುತ್ತಿದ್ದರು” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ?: ಬಳ್ಳಾರಿ ವಿಮ್ಸ್ ಪ್ರಕರಣ | ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆದೇಶಿಸಲಾಗಿದೆ: ಆರೋಗ್ಯ ಸಚಿವ ಸುಧಾಕರ್

“ನಮಗೆ ಕೆಟ್ಟ ಹೆಸರು ತರಬೇಕೆಂದು ಕೆಲವರು ಷಡ್ಯಂತ್ರ ನಡೆಸಿ ಹೀಗೆ ಮಾಡಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳುತ್ತಿದ್ದಾರೆ. ತನಿಖಾ ತಂಡವನ್ನು ಕಳಿಸುತ್ತೇನೆ ಎಂದು ಈಗ ಸಚಿವರು ಹೇಳುತ್ತಿದ್ದಾರೆ. ಜನತೆಗೆ ಸತ್ಯ ಹೇಳಲು ಎಷ್ಟು ದಿನ ಬೇಕು? ಆರೋಗ್ಯ ಸಚಿವರೇ ಇದರ ನೈತಿಕ ಹೊಣೆ ಒಪ್ಪಿಕೊಳ್ಳಬೇಕು” ಎಂದವರು ಒತ್ತಾಯಿಸಿದರು.

“ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಆರೋಗ್ಯ ಸಚಿವರು ಪತ್ರಿಕೆಗಳಲ್ಲಿ ಅರ್ಧಪುಟ ಲೇಖನ ಬರೆಸಿಕೊಂಡಿದ್ದಾರೆ. ಇಲ್ಲಿ ನೋಡಿದರೆ ರಾಜ್ಯದ ಆರೋಗ್ಯ ಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದಕ್ಕೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಕರ್ಮಕಾಂಡವೇ ಸಾಕ್ಷಿ. ಯಾವ ನಂಬಿಕೆಯ ಮೇಲೆ ಜನರು ಸರ್ಕಾರಿ ಆಸ್ಪತ್ರೆಗೆ ಬರಬೇಕು? ಘಟನೆ ಸಂಭವಿಸಿ ಇಷ್ಟು ದಿನವಾದರೂ ಸತ್ಯಾಂಶ ಇಲ್ಲಿಯವರೆಗೂ ಹೊರಬಂದಿಲ್ಲ. ಸರ್ಕಾರದ ಆಡಳಿತದ ವೈಖರಿಯೇ ಇದಕ್ಕೆ ಕಾರಣ. ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್