ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆದ ಪ್ರಕರಣ | ಮುಖ್ಯಮಂತ್ರಿ ಬೊಮ್ಮಾಯಿ ಖಂಡನೆ

C P Yogeshwar car
  • ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು 
  • ಘಟನೆ ಖಂಡಿಸಿ ಟ್ವೀಟ್ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ 

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ನಡೆದ ಗಲಾಟೆ ಹಾಗೂ ಸಿ ಪಿ ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಾಟ ಘಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ. 

ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಹೊರಗಿಟ್ಟು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಲ್ಲು ಹಾಗೂ ಮೊಟ್ಟೆ ಎಸೆದಿರುವ ಘಟನೆ ಚನ್ನಪಟ್ಟಣದ ಭೈರಾಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ನಡೆದಿತ್ತು. ಘಟನೆಯಲ್ಲಿ ಯೋಗೇಶ್ವರ್ ಕಾರಿನ ಗಾಜುಗಳು ಜಖಂಗೊಂಡಿದ್ದು, ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇಂದು ರಾಮನಗರದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ ಪಿ ಯೋಗಿಶ್ವರ್ ಅವರ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವುದು ಸರಿಯಲ್ಲ. ಈ ದಾಳಿಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ವಿಷಯ ಏನೇ ಇರಲಿ, ಅದನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು ಮತ್ತು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು” ಎಂದು ಹೇಳಿದ್ದಾರೆ.

ಸುಮಾರು 500ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ಕಾರಿಗೆ ಮುತ್ತಿಗೆ ಹಾಕಿ, ಕಲ್ಲು ಹಾಗೂ ಮೊಟ್ಟೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಕಲ್ಲು ತೂರಾಟದ ವೇಳೆ ಗುಂಪು ಚದುರಿಸಲು ಯತ್ನಿಸಿದ ಕೆಲ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. 

ಶುಕ್ರವಾರ ಚನ್ನಪಟ್ಟಣ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಯೋಗೇಶ್ವರ್ ಆಗಮಿಸಿದ್ದರು. ರಾಂಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗಳಿಗೆ ಸಿ ಪಿ ಯೋಗೇಶ್ವರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ಉಂಟಾಗಿ ಕೈ ಮಿಲಾಯಿಸಿದ್ದರು.

ಕುಮಾರಸ್ವಾಮಿ ಮೇಲೆ ಯೋಗೇಶ್ವರ್ ಗಂಭೀರ ಆರೋಪ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯೋಗೇಶ್ವರ್, “ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರ ಮೂಲಕ ದೊಂಬಿ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಜನ ಸಾಮಾನ್ಯರ ಕೋರಿಕೆ ಮೇರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೆ. ನನ್ನ ಮನವಿ ಮೇರೆಗೆ ₹50 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಅನುದಾನ ತಡೆಯಲು ಸತತ ಪ್ರಯತ್ನ ನಡೆಸಿದ್ದರು” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ‘ಭಾರತ್ ಜೋಡೋ’ ಯಾತ್ರೆ | ಪೇಸಿಎಂ ‘ಟಿ ಶರ್ಟ್’ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಥಳಿತ: ಡಿಕೆಶಿ ಆಕ್ರೋಶ

“ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕುಮಾರಸ್ವಾಮಿಗೆ ನಾನು ಬಹಿರಂಗ ಆಹ್ವಾನ ಕೊಟ್ಟಿದ್ದೆ. ಜೊತೆಯಲ್ಲೇ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡೋಣ ಎಂದಿದ್ದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ಹೀಗೆಲ್ಲಾ ಗಲಾಟೆ ಮಾಡಿಸುತ್ತಿದ್ದಾರೆ” ಎಂದು ಯೋಗೇಶ್ವರ್ ಹೇಳಿದರು.

'40% ಸರ್ಕಾರ, ಯಾರಪ್ಪ ಗಂಡಸು' ಎಂದು ಘೋಷಣೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ದೂರವಿಟ್ಟು ಶಂಕುಸ್ಥಾಪನೆ ನೆರವೇರಿಸಿದ್ದಕ್ಕೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಇದೇ ಕೋಪಕ್ಕೆ ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವ ಕಾರ್ಯಕರ್ತರು ‘40% ಸರ್ಕಾರ, ಯಾರಪ್ಪ ಗಂಡಸು’ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಸಿ ಪಿ ಯೋಗೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಅಶ್ವತ್ಥ್ ನಾರಾಯಣ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಕೆಲ ಜೆಡಿಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ಬಗ್ಗೆ ಬೆಂಗಳೂರಿನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿ ಪಿ ಯೋಗೇಶ್ವರ್, ಅಶ್ವತ್ಥ ನಾರಾಯಣ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್