ಪಿಎಫ್‌ಐ ನಿಷೇಧ | ಪಂಕ್ಚರ್ ಹಾಕೋರು ಬಾಂಬ್ ಇಡುತ್ತಾರಾ?: ಬಿಜೆಪಿ ವಿರುದ್ಧ ಸಿ ಎಂ ಇಬ್ರಾಹಿಂ ವಾಗ್ದಾಳಿ

  • ಮೋದಿ ಸೋಲುತ್ತಿದ್ದಾರೆ; ಇವಿಎಂ ಗೆಲ್ಲುತ್ತಿದೆ; ಪ್ರತಿಪಕ್ಷಗಳು ಎಚ್ಚೆತ್ತುಕೊಳ್ಳಬೇಕು
  • ಕಾನೂನು ಎಲ್ಲರಿಗೂ ಒಂದೇ; ಚಾಟಿ ಬೀಸಿದರೆ ಎರಡು ಎತ್ತುಗಳಿಗೂ ಬೀಸಬೇಕು

‘ಕಡ್ಲೆಕಾಯಿ, ಸೌತೆಕಾಯಿ ಮಾರಿಕೊಂಡು ಜೀವನ ನಡೆಸುವವರ ವಿರುದ್ಧ ದೌರ್ಜನ್ಯ ಯಾಕೆ..? ನೀವೇ ಹೇಳ್ತೀರಾ ಪಂಕ್ಚರ್ ಹಾಕೋರು ಅಂತ… ಪಂಕ್ಚರ್ ಹಾಕೋರು ಬಾಂಬ್ ಇಡುತ್ತಾರಾ..?' ಎಂದು ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ನಿಷೇಧದ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಪಿಎಫ್ಐ ಸಂಘಟನೆಯನ್ನು ಕೇವಲ ಐದು ವರ್ಷ ಮಾತ್ರ ನಿಷೇಧ ಮಾಡಿರುವುದು ಯಾಕೆ? ಪಿಎಫ್ಐಗೆ ಇನ್ನೂ ಬಾಲ್ಯವಿದೆಯಾ? ಐದು ವರ್ಷದ ನಂತರ ಅವರು ಪ್ರೌಢರಾಗ್ತಾರಾ? ಸರ್ಕಾರ ನಡೆಸುತ್ತಿರುವವರಿಗೆ ಏನಾದರೂ ಬುದ್ಧಿ ಇದೆಯಾ? ಒಂದು ಸಂಘಟನೆಯನ್ನು ನಿಷೇಧ ಮಾಡುವುದಕ್ಕೆ ಆಧಾರ ಆದರೂ ಅವರ ಬಳಿ ಏನಿದೆ? ಸಂಘಟನೆ ಮೇಲೆ ಎಷ್ಟು ಪ್ರಕರಣ ದಾಖಲಾಗಿದೆ?” ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದರು. 

“ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟವನ ಜತೆಗೆ ಭಜರಂಗದಳದವರು ಇದ್ದಾರೆ. ಕೇಂದ್ರ ಮಂತ್ರಿಗಳಿಂದ ಹಿಡಿದು ಎಲ್ಲರೂ ಅವನ ಜತೆಗೆ ಫೋಟೋ ತೆಗಸಿಕೊಂಡಿದ್ದಾರೆ. ನಿಮ್ಮ ಚಡ್ಡಿ ಮತ್ತು ಆತನ ಚಡ್ಡಿ ಅಳತೆ ಮಾಡಿದರೇ ಒಂದೇ 'ಸೈಜ್‌'ನದ್ದಾಗಿದೆ. ಅವನೂ ಚಡ್ಡಿ, ನೀವೂ ಚಡ್ಡಿ. ಚಡ್ಡಿ ಹಾಕಿದ್ದಕ್ಕೆ ಆತನ ಸಂಘಟನೆ ನಿಷೇಧ ಮಾಡಿಲ್ಲವಾ? ಇವರು ಪ್ಯಾಂಟ್ ಮತ್ತು ಲುಂಗಿ ಧರಿಸಿದ್ದರು ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೀರಾ?” ಎಂದು ಇಬ್ರಾಹಿಂ ಲೇವಡಿ ಮಾಡಿದರು.

“ಹಲವು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಡಾಲರ್ ಬೆಲೆ 81 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದೆ. ಜನ ಕಂಗಾಲಾಗಿ ಜೀವನ ಮಾಡುವುದಕ್ಕೆ ಆಗ್ತಿಲ್ಲ. ಜನರ ಗಮನ ಬೇರೆಡೆ ತಿರುಗಿಸಲು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಹೊಡೆದಾಡಿಕೊಳ್ಳುತ್ತಿವೆ. ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿ, ಹೆಚ್ಚುತ್ತಿರುವ ನಿರೋದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಅವರು ಚರ್ಚಿಸುತ್ತಿಲ್ಲ. ರೈತರಿಗೆ ಆಗಿರುವ ನಷ್ಟದ ಪರಿಹಾರದ ಬಗ್ಗೆ ಚರ್ಚೆ ನಡೆಸುತ್ತಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದರು.

“ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಬಿಜೆಪಿಯ ಈ ನಡೆ ಭಾರತಕ್ಕೆ ಶೋಭೆ ತರುವಂಥದ್ದಲ್ಲ. ಒಂದು ಕಡೆ ಆರ್‌ಎಸ್‌ಎಸ್‌ನ ಮೋಹನ ಭಾಗ್ವತ್ ಮುಸ್ಲಿಂ ಮುಖಂಡರ ಜತೆಗೆ ಸಭೆ ನಡೆಸುತ್ತಾರೆ. ಮತ್ತೊಂದು ಕಡೆ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ನಿಮ್ಮ ಸ್ಪಷ್ಟ ನಿಲುವೇನು ಎಂಬುದರ ಬಗ್ಗೆ ಬಹಿರಂಗವಾಗಿ ಹೇಳಿ” ಎಂದು ಒತ್ತಾಯಿಸಿದರು.

“ಈ ದೇಶದ ಸಂವಿಧಾನವನ್ನು ತೆಗೆದು, ಸುಪ್ರೀಂಕೋರ್ಟ್ ತೆಗೆದು ಆರ್‌ಎಸ್‌ಎಸ್‌ನ ಗೋಳ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಜಾರಿಗೆ ತರಲು ಮುಂದಾಗಿದ್ದರೆ ಅದು ಸಾಧ್ಯವಿಲ್ಲ. ಈ ದೇಶದ ಬಹುಸಂಖ್ಯಾತರನ್ನು ಕಡೆಗಣಿಸಿ, ಶೇ.3ರಷ್ಟಿರುವ ಜನರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಿದರೆ ಇಡೀ ದೇಶವೇ ನಿಮ್ಮ ವಿರುದ್ಧ ತಿರುಗಿ ಬೀಳುತ್ತಿದೆ” ಎಂದು ಎಚ್ಚರಿಕೆ ನೀಡಿದರು.

ಚಾಟಿ ಬೀಸಿದರೆ ಎರಡು ಎತ್ತುಗಳಿಗೂ ಬೀಸಬೇಕು

“ಪಿಎಫ್‌ಐ ಮಾತ್ರ ಮತೀಯ ಸಂಘಟನೆನಾ? ಶ್ರೀರಾಮ ಸೇನೆ, ಆರ್ ಎಸ್ ಎಸ್ ಅಲ್ವಾ? ಎಲ್ಲರಿಗೂ ಒಂದೇ ಕಾನೂನು ಇರಬೇಕು. ಚಾಟಿ ಬೀಸಿದರೆ ಎರಡು ಎತ್ತುಗಳಿಗೂ ಬೀಸಬೇಕು” ಎಂದು ವಾಗ್ದಾಳಿ ನಡೆಸಿದರು. 

“ಯಾವ ಆಧಾರದ ಮೇಲೆ ಪಿಎಫ್‌ಐ ನಿಷೇಧ ಮಾಡಿದ್ದೀರಿ..? ಎಲೆಕ್ಷನ್‌ಗಾಗಿ ನಿಷೇಧ ಮಾಡಿದ್ದಾರೆ. ಭಜರಂಗ ದಳದ ವಿರುದ್ಧ ಆರೋಪ ಸಾಬೀತಾದರೂ ನಿಷೇಧ ಮಾಡುವುದಿಲ್ಲ. ಮಳೆಯಿಂದ ರೈತರ ಬೆಳೆ ನಾಶವಾಗಿದೆ. ರೈತರ ಬಗ್ಗೆ ಗಮನ ಕೊಡಿ ಎಂದರೆ ನೀವು ಏನು ಮಾಡುತ್ತಿದ್ದೀರಿ..? ಇಡೀ ದೇಶ ನಿಮ್ಮ ಮೇಲೆ ತಿರುಗಿ ಬೀಳುತ್ತದೆ” ಎಂದು ಅವರು ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಪಿಎಫ್ಐ ನಿಷೇಧ | ಸಾಮರಸ್ಯ ಕದಡುವ ಸಂಘಟನೆ ನಿಷೇಧ ಸ್ವಾಗತಾರ್ಹ: ಕಾಂಗ್ರೆಸ್

ಮೋದಿ ಸೋಲ್ತಾ ಇದಾರೆ; ಇವಿಎಂ ಗೆಲ್ಲುತ್ತಿದೆ 

“ದೇಶದಲ್ಲಿ ಇವಿಎಂ ನಿಷೇಧಕ್ಕೆ ದೇಶದ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ಇವಿಎಂ ಇರುವವರೆಗೂ ಬಿಜೆಪಿ ಇರುತ್ತದೆ. ಮೋದಿ ಸೋಲ್ತಾ ಇದಾರೆ; ಆದರೆ, ಇವಿಎಂ ಗೆಲ್ಲುತ್ತಿದೆ. ಇಂಥ ಹೊತ್ತಿನಲ್ಲಿ ವಿರೋಧ ಪಕ್ಷಗಳು ಕಣ್ಣಲ್ಲಿ ಮಣ್ಣಾಕಿಕೊಂಡು ಕುಳಿತಿರುವುದು ಸರಿಯಲ್ಲ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್