ಅಧಿಕಾರ ನೀಡದೇ ಇರಲು ಇಬ್ರಾಹಿಂ ಏನು ಅಸ್ಪೃಶ್ಯರೇ?: ಎಚ್‌ ಡಿಕೆ ವಿವಾದಾತ್ಮಕ ಹೇಳಿಕೆ

hdk
  • ಅಧಿಕಾರ ನೀಡದಿರಲು ಇಬ್ರಾಹಿಂ ಅವರೇನು ಅಸ್ಪೃಶ್ಯರಾ? ಎಂದ ಎಚ್ಡಿಕೆ
  • ಎಚ್ಡಿಕೆಯವರೇ ನಿಮ್ಮ ಮಾತಿನ ಅರ್ಥವೇನು? ನಿಮ್ಮ ದಲಿತ ಪ್ರೇಮ ನಿಜವೇ? 

ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌ ಡಿ ಕುಮಾರಸ್ವಾಮಿ ಅವರು ಸಿ ಎಂ ಇಬ್ರಾಹಿಂ ಅವರನ್ನು ಮುಖ್ಯಮಂತ್ರಿ ಮಾಡುವ ಕುರಿತ ಹೇಳಿಕೆಯೊಂದು ಹೊಸ ವಿವಾದಕ್ಕೆ ಆಸ್ಪದ ನೀಡಿದೆ.

ಮಾಧ್ಯಮಕ್ಕೆ ಹೇಳಿಕೆ ನೀಡುವಾಗ ಕುಮಾರಸ್ವಾಮಿ ಅವರು ಆಡಿರುವ ಮಾತು, ಅಸ್ಪೃಶ್ಯತಾ ಆಚರಣೆಯನ್ನು ಸಮರ್ಥಿಸುವ ದಾಟಿಯಲ್ಲಿದ್ದು, ಸಂವಿಧಾನ ದಿನದಂದೇ ಆ ಹೇಳಿಕೆ ಹೊರಬಿದ್ದಿರುವುದು ಸಾಕಷ್ಟು ವಿವಾದಕ್ಕೀಡಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಸಾಗುತ್ತಿರುವ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಸಿಎಂ ಸ್ಥಾನ ನೀಡುವ ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿ ಆ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದರು.

ಆ ವೇಳೆ ಇನ್ನೊಂದೆರಡು ವರ್ಷದಲ್ಲಿ ಕುಮಾರಸ್ವಾಮಿ ಕೇಂದ್ರದ ರಾಜಕೀಯಕ್ಕೆ ತೆರಳಿದರೆ ನಾನು ಇಲ್ಲಿ ಮುಖ್ಯಮಂತ್ರಿ ಆಗಬಹುದು ಎಂಬ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿಕೆಯನ್ನು ಉಲ್ಲೇಖಿಸಿದರು. "ನಮ್ಮ ಪಕ್ಷದಲ್ಲಿ ಅಷ್ಟರಮಟ್ಟಿಗೆ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ, ಸ್ವಾತಂತ್ರ್ಯ ನೀಡಲಾಗಿದೆ. ಇದನ್ನು ಮುಂದಿಟ್ಟುಕೊಂಡೇ ನಾನು ಹೇಳಿದ್ದು; ಇಬ್ರಾಹಿಂ ಯಾಕೆ ಮುಖ್ಯಮಂತ್ರಿಯಾಗಬಾರದು? ಎಂದು. ಪರಿಸ್ಥಿತಿ ಎದುರಾದರೆ ಅವರನ್ನೂ ಸಿಎಂ ಮಾಡುತ್ತೇವೆ. ಅವರಿಗೆ ಅಧಿಕಾರ ಕೊಡದಿರಲು ಅವರೇನು ಅಸ್ಪೃಶ್ಯರೇ(‌he is not an untouchable man)?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 

AV Eye Hospital ad

ಮುಖ್ಯಮಂತ್ರಿ ಮಾಡದೇ ಇರಲು ಇಬ್ರಾಹಿಂ ಅವರೇನು ಅಸ್ಪೃಶ್ಯರಲ್ಲ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಅಸ್ಪೃಶ್ಯತಾ ಆಚರಣೆಯನ್ನು ಸಮರ್ಥಿಸಿದ್ದಾರೆ. ಅಲ್ಲದೆ, ಅಸ್ಪೃಶ್ಯರಿಗೆ ಅಧಿಕಾರ ನೀಡುವ ಅಗತ್ಯವಿಲ್ಲ ಎಂಬ ಧೋರಣೆಯನ್ನು ಪ್ರದರ್ಶಿಸಿದ್ದಾರೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ. 

ಅಲ್ಲದೆ, ಎಚ್‌ ಡಿ ಕುಮಾರಸ್ವಾಮಿ ಮತ್ತು ಅವರ ಪಕ್ಷ ದಲಿತರ ವಿಚಾರದಲ್ಲಿ ತೋರಿಸುವ ಕಾಳಜಿ ಮತ್ತು ಅವರ ವಿಚಾರದಲ್ಲಿ ನೀಡುವ ಹೇಳಿಕೆಗಳ ನೈಜತೆಯನ್ನು ಕೂಡ ಪ್ರಶ್ನಿಸುವಂತೆ ಮಾಡಿದೆ. 

"ಇಬ್ರಾಹಿಂ ಅವರೇನು ಅಸ್ಪೃಶ್ಯರೇ ಎನ್ನುವ ಮೂಲಕ ಕುಮಾರಸ್ವಾಮಿ, ಪರೋಕ್ಷವಾಗಿ ದಲಿತರು, ಅಸ್ಪೃಶ್ಯರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಾರದೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ಇತ್ತ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಲಿತ ಮುಖಂಡರು, ಈ ಹೇಳಿಕೆ ನೀಡುವ ಮೂಲಕ ಅವರು ತಮ್ಮ ಒಳಮನಸ್ಸಿನ ನಿಜ ಮಾತನ್ನು ಹೇಳಿಕೊಂಡಿದ್ದಾರೆ" ಎಂದು ಕಿಡಿಕಾರಿದ್ದಾರೆ. 

 ಈ ಸುದ್ದಿ ಓದಿದ್ದೀರಾ? : ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮುಸಲ್ಮಾನ ಸಿಎಂ, ದಲಿತ, ಮಹಿಳಾ ಡಿಸಿಎಂ; ಎಚ್‌ಡಿಕೆ ಘೋಷಣೆ

ಪಂಚರತ್ನ ಯಾತ್ರೆ ಆರಂಭದ ದಿನಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನೀರು ಕುಡಿಯಲು ಹೋಗಿದ್ದ ಮಹಿಳೆ ನಿಂದಿಸಿದ ವಿಚಾರ ಪ್ರಸ್ತಾಪಿಸಿ, "ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ ಮಹಿಳೆಯನ್ನು ಡಿಸಿಎಂ ಮಾಡುತ್ತೇನೆ. ದಲಿತರ ಸಮಗ್ರ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮ ರೂಪಿಸುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಈ ಮಾತುಗಳು, ಅವರ ಅಂತಹ ಕಾಳಜಿಯನ್ನೇ ಅನುಮಾನಿಸುವಂತೆ ಮಾಡಿವೆ.

"ಕೇವಲ ರಾಜಕೀಯ ಲಾಭಕ್ಕಾಗಿ ದಲಿತರನ್ನು ಓಲೈಸುವ ಹೇಳಿಕೆ ನೀಡುವ ಅವರು, ವಾಸ್ತವವಾಗಿ ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಯಾವ ಧೋರಣೆ ಹೊಂದಿದ್ದಾರೆ ಎಂಬುದನ್ನು ಅವರ ಈ ಮಾತು ಬಯಲುಮಾಡಿದೆ" ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app