
- ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ "ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮ
- ಸರ್ಕಾರದಿಂದ ಕನ್ನಡ ನಿರ್ಲಕ್ಷ್ಯಕ್ಕೆ ಕನ್ನಡಿಗರ ವಿರೋಧ; ಸಿಎಂಗೆ ನೆಟ್ಟಿಗರಿಂದ ತರಾಟೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಬದಲಿಗೆ ಹಿಂದಿ ಬಾಷೆಯನ್ನು ಬಳಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯ ಬೆಂಗಳೂರಿನಲ್ಲಿ ಆಯೋಜಿಸಿದ್ದ "ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು. ಕನ್ನಡ ನೆಲದಲ್ಲೇ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಬಳಸದಿರುವುದಕ್ಕೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸಚಿವರು ಭಾಗವಹಿಸುವ, ಅದರಲ್ಲೂ ಅಮಿತ್ ಶಾ ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲೇ ಪದೇ ಪದೆ ಕನ್ನಡಕ್ಕೆ ಅಪಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಟ್ವೀಟ್ ಮಾಡಿ “ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸಬೇಕಿದೆ. 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ನೆಲದ ಭಾಷೆಯನ್ನೇ ಭಾರತ ಸರ್ಕಾರ ಕಡೆಗಣಿಸುತ್ತಿರುವುದು ನಿಜಕ್ಕೂ ಖಂಡನಾರ್ಹ. ಇದನ್ನು ಕರವೇ ಕಟುವಾಗಿ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.
“ಒಕ್ಕೂಟ ಸರ್ಕಾರ ಪದೇ ಪದೆ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡಕ್ಕೆ ಧಕ್ಕೆಯಾದರೆ ಕರವೇ ಸಹಿಸುವುದಿಲ್ಲ” ಎಂದು ನಾರಾಣಗೌಡ ಆಕ್ರೋಶ ಹೊರಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ?: ವಿವಾದಗಳ ಬಾಣಲೆಯಲ್ಲಿ ಕುದಿಯುತ್ತಿರುವ ರಾಜ್ಯ ಬಿಜೆಪಿ| ಮಹತ್ವ ಪಡೆದುಕೊಂಡ ಅಮಿತ್ ಶಾ ಬೆಂಗಳೂರು ಭೇಟಿ
ಮುಖ್ಯಮಂತ್ರಿಗಳಿಗೆ ನೆಟ್ಟಿಗರ ತರಾಟೆ!
"ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಫೋಟೋಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕನ್ನಡ ಕಡೆಗಣನೆಗೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂತೋಷ್ಕುಮಾರ್ ಆರ್ ಎಂಬುವವರು, “ಮಾನ, ಮರ್ಯಾದೆ, ಸ್ವಾಭಿಮಾನ ಅಂತ ಏನಾದ್ರೂ ಇದೆಯಾ? ಕನ್ನಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡವೇ ಇಲ್ಲ ಎಂದರೆ ಏನರ್ಥ? ರಾಜ್ಯದ ಮುಖ್ಯಮಂತ್ರಿಯಾಗಿ ಅದನ್ನೇ ಸರಿಪಡಿಸದ ನೀವು ಇನ್ನು ರಾಜ್ಯದ ಹಿತ ಹೇಗೆ ಕಾಪಾಡುವಿರಿ? ನಾಚಿಕೆಯಾಗಬೇಕು..” ಎಂದು ಕಮೆಂಟ್ ಮಾಡಿದ್ದಾರೆ.

“ಬೇರೆ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಆಯಾ ರಾಜ್ಯಗಳ ಭಾಷೆಗೆ ಆದ್ಯತೆ ಇರುತ್ತೆ. ಇಲ್ಲಿ ಅಧಿಕಾರ ಇದ್ದರೂ ಯಾಕೆ ಪದೇ ಪದೆ ಕನ್ನಡವನ್ನು ಕಡೆಗಣಿಸಲಾಗುತ್ತದೆ” ಎಂದು ಕಾರ್ತಿಕ್ ವೈದ್ಯ ಎಂಬುವವರು ಪ್ರಶ್ನಿಸಿದ್ದಾರೆ.
ಪವನ್ಕುಮಾರ್ ಎಂಬುವವರು, ‘ಹಿಂದಿ ಹಿಂದಿ ಹಿಂದಿ. ನಮ್ಮನ್ನು ಆಯ್ಕೆ ಮಾಡಿದರೆ ಕನ್ನಡದ ನೆಲದಲ್ಲಿ ಕನ್ನಡವನ್ನು ತೊಡೆದು ಹಾಕಿ ಹಿಂದಿ ಭಾಷೆಯ ಅಭಿವೃದ್ಧಿ ಮಾಡುತ್ತೇವೆ. ನಾವು ಇರುವುದೇ ಉತ್ತರ ಭಾರತ ಮತ್ತು ಉತ್ತರ ಭಾರತದ ಭಾಷೆ ಹಿಂದಿಯ ಅಭಿವೃದ್ಧಿಗಾಗಿ ಎಂದು ಮತ್ತೆ ಮತ್ತೆ ಕನ್ನಡ ನಾಡಿನ ಜನತೆಗೆ ತಿಳಿಸುತ್ತಿದ್ದಾರೆ” ಎಂದು ವ್ಯಂಗ್ಯ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ @AmitShah ಅವರೊಂದಿಗೆ ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ "ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
— CM of Karnataka (@CMofKarnataka) August 4, 2022
1/2 pic.twitter.com/wHaDOQqaFJ
ಕನ್ನಡ ಕಡೆಗಣನೆ ಇದೇ ಮೊದಲಲ್ಲ
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಬಾರಿ ರಾಜ್ಯಕ್ಕೆ ಬಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಲೂ ಇದೇ ರೀತಿ ಹಿಂದಿ ಭಾಷೆಯನ್ನು ಬಳಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದರು. ಕನ್ನಡಿಗರು ಪದೇ ಪದೆ ಹೀಗೆ ವಿರೋಧ ಮಾಡುತ್ತಿದ್ದಾಗಲೂ ಸಹ ತಪ್ಪು ಮರುಕಳಿಸುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
“ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಬಳಸಬೇಕು” ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಭಾರತದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ನಾಗರಿಕರು ಒಕ್ಕೊರಲಿನಿಂದ ಅಮಿತ್ ಶಾ ಹೇಳಿಕೆ ‘ಹಿಂದಿ ಹೇರಿಕೆ’ ಎಂದು ವಿರೋಧಿಸಿದ್ದರು.