ಅಮಿತ್ ಶಾ ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ: ಮಗನ ಟಿಕೆಟ್ ಬಗ್ಗೆ ಬಿಎಸ್‌ವೈ ಪ್ರಸ್ತಾಪ

Amit Sha-yediyurappa
  • ಬುಧವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ
  • ಕುತೂಹಲ ಮೂಡಿಸಿದ ಯಡಿಯೂರಪ್ಪ ಮತ್ತು ಅಮಿತ್ ಶಾ ಭೇಟಿ

ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬುಧವಾರ ತಡರಾತ್ರಿ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸ್ವಾಗತಿಸಿದ್ದರು. 

ನಿಗದಿತ ಕಾರ್ಯಕ್ರಮಗಳ ನಡುವೆಯೂ ಅಮಿತ್ ಶಾ ರಾಜ್ಯ ಬಿಜೆಪಿ ಪ್ರಮುಖರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. 

ಕಮಿಷನ್ ವಿವಾದ, ಹಿಂದುತ್ವ ಕಾರ್ಯಕರ್ತರ ಹತ್ಯೆ ವಿಚಾರ ಹಾಗೂ ಮುಂದಿನ ಚುನಾವಣಾ ಪ್ರಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಆಕ್ರೋಶಗೊಂಡ ಯುವ ಮೋರ್ಚಾ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಕೊಟ್ಟಿದ್ದಾರೆ. ಸ್ವಪಕ್ಷೀಯ ಕಾರ್ಯಕರ್ತರ, ಅದರಲ್ಲೂ ಬೂತ್ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಪದಾಧಿಕಾರಿಗಳ ರಾಜೀನಾಮೆ ಬಿಜೆಪಿಗೆ ಆಘಾತ ನೀಡಿದೆ. ಇಂತಹ ಹೊತ್ತಿನಲ್ಲಿ ಅಮಿತ್ ಶಾ ಮತ್ತು ಯಡಿಯೂರಪ್ಪ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ಸುದ್ದಿ ಓದಿದ್ದೀರಾ?: ವಿವಾದಗಳ ಬಾಣಲೆಯಲ್ಲಿ ಕುದಿಯುತ್ತಿರುವ ರಾಜ್ಯ ಬಿಜೆಪಿ| ಮಹತ್ವ ಪಡೆದುಕೊಂಡ ಅಮಿತ್ ಶಾ ಬೆಂಗಳೂರು ಭೇಟಿ

ಮಗನ ಟಿಕೆಟ್ ವಿಚಾರ ಪ್ರಸ್ತಾಪ

ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಯಡಿಯೂರಪ್ಪ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಶಿಕಾರಿಪುರ ಕ್ಷೇತ್ರವನ್ನು ತಮ್ಮ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. 

ರಾಜ್ಯಕ್ಕೆ ಅಮಿತ್ ಶಾ ಭೇಟಿ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು ನಗರ ಪೊಲೀಸರು ಅಮಿತ್ ಶಾಗೆ ಭಾರೀ ಭದ್ರತೆ ಕಲ್ಪಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಯಾವುದೇ ಪ್ರತಿಭಟನೆ, ಧರಣಿ ಬಿಸಿ ತಟ್ಟದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್