ರಾಜ್ಯ ಸಚಿವ ಸಂಪುಟ ಸಭೆ | ಪೌರ ಕಾರ್ಮಿಕರಿಗೆ ಮಾಸಿಕ 2000 ರೂ. ಸಂಕಷ್ಟ ಭತ್ಯೆ: ಆಗಸ್ಟ್‌ನಲ್ಲಿ ಮಂಗಾರು ಅಧಿವೇಶನ

Vidhana soudha
  • ದತ್ತ ಪೀಠ ವಿವಾದ: ಉಪಸಮಿತಿಯ ವರದಿ ಮಂಡನೆ
  • ರಾಜ್ಯದಲ್ಲಿ 436 ‘ನಮ್ಮ ಕ್ಲಿನಿಕ್’ ಸ್ಥಾಪನೆಗೆ ಒಪ್ಪಿಗೆ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ  ಮಾಧುಸ್ವಾಮಿ ವಿವರಣೆ ನೀಡಿದ್ದಾರೆ.

ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, “ದತ್ತಪೀಠದ ವಿವಾದ ಪರಿಹಾರ ಮಾಡುವುದಕ್ಕಾಗಿ ರಾಜ್ಯ ಸಚಿವ ಸಂಪುಟ ಉಪಸಮಿತಿಯ ವರದಿ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸಮಸ್ಯೆ ಪರಿಹಾರಕ್ಕೆ ಶಿಫಾರಸು ಮಾಡಿರುವ ಸಂಪುಟ ಉಪಸಮಿತಿ ವರದಿಯನ್ನು ಸ್ವೀಕರಿಸಲಾಗಿದೆ. ಉಪಸಮಿತಿ ಕೊಟ್ಟಿರುವ ವರದಿಯ ಕುರಿತು ಹೈಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಲು ತಿರ್ಮಾನ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.

“ರಾಜ್ಯದ ಎಲ್ಲ ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ ಮಾಸಿಕ 2000 ರೂ. ನೀಡಲು ಅನುಮೋದನೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ಸರ್ಕಾರವೇ ಸಂಕಷ್ಟ ಪರಿಹಾರ ನಿಧಿ ನೀಡಲಿದೆ” ಎಂದು ವಿವರಿಸಿದರು.

“ಹಟ್ಟಿ ಗೋಲ್ಡ್ ಮೈನ್ಸ್ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮತ್ತೊಂದು ಕಡೆ ಡಿಗ್ಗಿಂಗ್ ಮಾಡಲು 307 ಕೋಟಿ ರೂ. ಹಣವನ್ನ ನೀಡಲಾಗಿದೆ. 436 ‘ನಮ್ಮ ಕ್ಲಿನಿಕ್’ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. 438 ವೈದ್ಯಾಧಿಕಾರಿ, 438 ನರ್ಸ್ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. 438 ದ್ವಿತೀಯ ದರ್ಜೆ ಸಹಾಯಕರ ನೇಮಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅನುಮತಿಸಲಾಗಿದೆ. ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲಿ ಈ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ 103 ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದು” ಎಂದರು.

“ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್‌ಗೆ ಭೋಗ್ಯಕ್ಕೆ ನೀಡಲಾಗಿತ್ತು. ಅವರು ಕಾರ್ಖಾನೆ ನಡೆಸಲು ಆಗಲ್ಲವೆಂದಿದ್ದರು. ಹೀಗಾಗಿ ಬಡ್ಡಿ ರಹಿತ ಸಾಲ ನೀಡಲು ಒಪ್ಪಿಗೆ ಸೂಚಿಸಲಾಗಿದೆ” ಎಂದು ಮಾಧುಸ್ವಾಮಿ ಹೇಳಿದರು.

“ಕೋಟೆಕಾರ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗಾಗಿ 224 ಕೋಟಿ ರೂ. ಹಣ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಯಾದಗಿರಿ ಜಿಲ್ಲೆ ಕುಡಿಯುವ ನೀರು ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. 2054 ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗ್ರಾಮಗಳಿಗೆ ಬೋರನಕಣಿವೆಯಿಂದ ಕುಡಿಯುವ ನೀರು ಪೂರೈಕೆಗಾಗಿ 435 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ದೇವೇಗೌಡರ ಬಳಿ ತೆರಳಿ ಕ್ಷಮೆ ಯಾಚಿಸುತ್ತೇನೆ : ಮಾಜಿ ಶಾಸಕ ಕೆ ಎನ್ ರಾಜಣ್ಣ

“ಮುದ್ದೆಬಿಹಾಳ, ಸಿಂದಗಿ ಕುಡಿಯುವ ನೀರು ಪೂರೈಕೆಗೆ ಅನುಮತಿ ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 1385 ಕೋಟಿ ರೂ. ಅನುದಾನ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೀರು ಸರಬರಾಜಿಗೆ 33 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಬಸವಕಲ್ಯಾಣ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗಾಗಿ 99.64 ಕೋಟಿ ರೂ. ಅನುದಾನ ಮಂಜೂರು ಮಾಡಲು ತೀರ್ಮಾನಿಸಲಾಗಿದೆ” ಎಂದು ಸಚಿವರು ಹೇಳಿದರು.

“ಸವಣೂರು, ಶಿಗ್ಗಾಂವಿ ಗ್ರಾಮಗಳಿಗೆ ನೀರು ಯೋಜನೆಗಾಗಿ 830 ಕೋಟಿ ರೂ. ಅನುದಾನ ನೀಡಲು ಅನುಮತಿ, ಹಾನಗಲ್ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆಗಾಗಿ 335 ಕೋಟಿ ರೂ. ಅನುದಾನ, ಹಾವೇರಿ 51 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗಾಗಿ 150 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.

“ಮುಂಗಾರು ಅಧಿವೇಶನ ಮುಂದಿನ ತಿಂಗಳು (ಆಗಸ್ಟ್) ನಡೆಯಲಿದೆ. ದಿನಾಂಕ ನಿಗದಿಯಾಗಿಲ್ಲ” ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್