ಈ ದಿನ ವಿಶೇ‍ಷ | ಕೊಡಗಿನಲ್ಲೊಂದು ಬುಲ್ಡೋಜರ್‌ ಪ್ರಕರಣ: ದಲಿತರ ಗೋರಿಯ ಮೇಲೆ ಕ್ರಿಕೆಟ್‌ ಕ್ರೀಡಾಂಗಣ ವಿರೋಧಿಸಿ ನಿರಂತರ ಸಂಘರ್ಷ

ದಲಿತರ ಭೂಮಿ ಕಿತ್ತುಕೊಳ್ಳುವುದರಲ್ಲಿ ಭೂಮಾಲೀಕರ ಹಣಬಲ, ತೋಳ್ಬಲಗಳ ಅಟ್ಟಹಾಸದ ಜೊತೆಗೆ, ‘ಕಾಂಗ್ರೆಸ್-ಮುಕ್ತ ಜಿಲ್ಲೆ’ಯ ಜನಪ್ರತಿನಿಧಿಗಳ ಒತ್ತಡ-ಪ್ರಭಾವಗಳೂ ಸತತವಾಗಿ ಕೆಲಸ ಮಾಡಿವೆ. ಏನೇ ಆದರೂ ತಮಗೆ ಮಂಜೂರಾದ ಜಾಗ ಬಿಟ್ಟುಕೊಡುವುದಿಲ್ಲ ಎನ್ನುತ್ತಾರೆ ಕಾನ್ಶೀರಾಂ ನಗರ ನಿವಾಸಿಗಳು.

ಕೊಡಗಿನಲ್ಲಿ ಮತ್ತೊಂದು ಭೂಸ್ವಾಧೀನ ವಿವಾದ. ದಲಿತ ಕೃಷಿ ಕಾರ್ಮಿಕರ ಸ್ಮಶಾನದಲ್ಲಿ ಕೆಎಸ್‌ಸಿಎ ಕ್ರಿಕೆಟ್‌ಕ್ರೀಡಾಂಗಣ ನಿರ್ಮಿಸಲು ಹೊರಟಿದೆ. ದಶಕಗಳಿಂದ ಸ್ಮಶಾನವಾಗಿ ಉಳಿದಿರುವ ಈ ಜಾಗದೊಂದಿಗೆ ಇರುವ ಭಾವನಾತ್ಮಕ ನಂಟನ್ನು ಸರ್ಕಾರ ನಿರ್ದಯವಾಗಿ ಉಪೇಕ್ಷಿಸಿದೆ. ಕಾನ್ಶಿರಾಮ್‌ನಗರ ನಿವಾಸಿಗಳು ಮತ್ತೆ ಹೋರಾಟಕ್ಕೆ ಇಳಿಯುವಂತೆ ಮಾಡಿದೆ 

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಕೊಡಗು ಮತ್ತು ಕೋಲಾರದಲ್ಲಿ ನಿರ್ಮಿಸಲಿರುವ ಕ್ರಿಕೆಟ್ ಮೈದಾನಕ್ಕಾಗಿ ಭೂ ಸ್ವಾಧೀನ ಕಾರ್ಯ ಮುಕ್ತಾಯವಾಗಿದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿರುವುದಾಗಿ ವರದಿಯಾಗಿದೆ.

ಆದರೆ ಕೊಡಗಿನಲ್ಲಿ ಭೂಸ್ವಾಧೀನ ಕಾರ್ಯ ವಿವಾದ ಹುಟ್ಟುಹಾಕಿದೆ. ಸ್ಥಳೀಯ ಪಾಲೆಮಾಡು ‘ಕಾನ್ಶೀರಾಂ ನಗರ’ದ ಸ್ಮಶಾನದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್‌ಸಿಎ ಮುಂದಾಗಿದ್ದು, ಅಲ್ಲಿನ ದಲಿತ ಕೃಷಿ ಕಾರ್ಮಿಕರು ಕೆಎಸ್‌ಸಿಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.  

Image

ಪ್ರತಿಭಟನಾನಿರತ ಮುಖಂಡ ಮಡಿಕೇರಿ ತಾಲೂಕು ಹೊದ್ದೂರು ಪಂಚಾಯ್ತಿ ಸದಸ್ಯ ಮೊಣ್ಣಪ್ಪ ಅವರು ಕೆಎಸ್‌ಸಿಎ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಭೂಮಿ ದಲಿತರಿಗೆ ಸೇರಿದ್ದು ಎಂದು ವಿವರಿಸುತ್ತಾರೆ: "ಈ ಪಂಚಾಯ್ತಿ ವ್ಯಾಪ್ತಿಯ ಪಾಲೆಮಾಡಿನಲ್ಲಿ 167/1ಎ ಸರ್ವೆ ನಂಬರಿನ ಸರ್ಕಾರಿ ಭೂಮಿಯಲ್ಲಿ ವಸತಿ ರಹಿತ ಕೃಷಿ ಕಾರ್ಮಿಕರು ನಿರ್ಮಿಸಿಕೊಂಡಿರುವ ಕಾನ್ಶೀರಾಂ ನಗರದ ಸುಮಾರು 165ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಸ್ಮಶಾನಕ್ಕಾಗಿ 2009-10ರಲ್ಲಿ ಸರ್ಕಾರದಿಂದ 2 ಎಕರೆ ಭೂಮಿ ಮಂಜೂರಾಗಿತ್ತು. ಅದನ್ನು ಜಿಲ್ಲಾಡಳಿತದ ನಡಾವಳಿಯಲ್ಲೂ ಸದರಿ ಉದ್ದೇಶಕ್ಕೆ ಮೀಸಲಿಟ್ಟು ಜಿಲ್ಲಾಧಿಕಾರಿಯ ಆದೇಶವೂ ಆಗಿದೆ, ಆ ವರ್ಷದಿಂದಲೇ ಅದು ಪಹಣಿ (ಆರ್‌ಟಿಸಿ)ಯಲ್ಲೂ ಬಂದಿದೆ. ಆದರೆ ಜಾಗದ ಸರ್ವೆ ಮಾಡಿಸಿ ಪಕ್ಕಾಪೋಡಿ ಮಾಡಿಕೊಡುವಂತೆ ವರ್ಷಗಟ್ಟಲೆ ಮನವಿ ಸಲ್ಲಿಸಿ ಹೋರಾಟಗಳನ್ನು ನಡೆಸಿದರೂ ಜಿಲ್ಲಾಡಳಿತ ಅದನ್ನು ಮಾಡಿರಲಿಲ್ಲ. ದಲಿತರು ತೀರಿಕೊಂಡ ತಮ್ಮ ಹಿರಿಯರನ್ನು ಅಲ್ಲಿ ಸಮಾಧಿ ಮಾಡುತ್ತ ಬಂದಿದ್ದು, ಕಳೆದ 10-12 ವರ್ಷಗಳಲ್ಲಿ ಸುಮಾರು 40-45 ಮಂದಿಯನ್ನು ಅಲ್ಲಿ ದಫನ್ ಮಾಡಲಾಗಿದೆ".

ಆದರೆ 2015ರಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಕೆಎಸ್‌ಸಿಎ ಹೆಸರಿನಲ್ಲಿ ಅದೇ ಸ್ಥಳದಲ್ಲಿ 12.70 ಎಕರೆ ಭೂಮಿಯನ್ನು ಕ್ಯಾಬಿನೆಟ್ ಮಟ್ಟದಲ್ಲೇ ಮಂಜೂರು ಮಾಡಿ, ಪಕ್ಕಾಪೋಡಿ ಕೂಡ ಮಾಡಿಕೊಡಲಾಯಿತು. ಇದರಲ್ಲಿ ದಲಿತರಿಗೆ ಈ ಮೊದಲೇ ಮಂಜೂರಾಗಿದ್ದ 2 ಎಕರೆ ಭೂಮಿಯೂ ಸೇರಿತ್ತು. ಯಾವುದೇ ಭೂಮಿಯನ್ನು ಯಾರಿಗಾದರೂ ಮಂಜೂರು ಮಾಡುವ ಮೊದಲು, ಅದರಲ್ಲಿ ಈಗಾಗಲೇ ಯಾರಿಗಾದರೂ ಜಾಗ ಮಂಜೂರಾಗಿದೆಯಾ, ಯಾರದಾದರೂ ಉಪಭೋಗದಲ್ಲಿದೆಯಾ ಎಂಬುದನ್ನೆಲ್ಲ ಪರಿಶೀಲನೆ ನಡೆಸಬೇಕು. ಇಂತಹ ನಿಯಮ, ರೀತಿನೀತಿಗಳನ್ನೆಲ್ಲ ಗಾಳಿಗೆ ತೂರಲಾಯಿತಾ ಎಂಬ ಪ್ರಶ್ನೆ ಏಳುತ್ತದೆ.

Image

ಆದರೆ, ಆ ನಂತರ ದಲಿತರು ತಮ್ಮ ಸ್ಮಶಾನದ ಹಕ್ಕನ್ನು ಉಳಿಸಿಕೊಳ್ಳಲು ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ʼಭೂಮಿ-ವಸತಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದರು. ಆಗ ಸದರಿ 2 ಎಕರೆ ಭೂಮಿಯನ್ನು ಹೊರತುಪಡಿಸಿ ಕ್ರೀಡಾಂಗಣಕ್ಕೆ ಜಾಗ ಮಂಜೂರು ಮಾಡುವಂತೆ ಅವರು ಆದೇಶಿಸಿದ್ದರು.  ಆದರೆ ಕೆಎಸ್‌ಸಿಎ ಪ್ರಭಾವಿಗಳು ಅದನ್ನು ಮತ್ತೆ ಮಾರ್ಪಡಿಸಿ, ಕೇವಲ ಅರ್ಧ ಎಕರೆ ಬಿಡಬೇಕೆಂದು ಆದೇಶ ಮಾಡಿಸಿಕೊಂಡು ಬಂದಿದ್ದಾರೆ ಎಂಬುದು ಹೋರಾಟ ನಿರತರ ಆರೋಪ.

ಹಲವು ಸುತ್ತು ಹೋರಾಟಗಳು, ಆಮರಣಾಂತ ಉಪವಾಸಗಳು, ಪೊಲೀಸ್ ದೌರ್ಜನ್ಯಗಳು, ಕೇಸುಗಳನ್ನು ಹೋರಾಟನಿರತ ದಲಿತ ಕೃಷಿ ಕಾರ್ಮಿಕರು ಎದುರಿಸಿದ್ದಾರೆ. ಅವೇ ಕೇಸುಗಳ ಲೆಕ್ಕ ಕೊಟ್ಟು ಈ ಹೋರಾಟದ ನೇತೃತ್ವವಹಿಸಿರುವ ಮೊಣ್ಣಪ್ಪನವರ ಮೇಲೆ ‘ರೌಡಿ ಶೀಟ್’ ಹಾಕಲಾಗಿದೆ.

ಈ ಸುದ್ದಿ ಓದಿದ್ದೀರಾ?: ಕೊಡಗು: ಪಾಲೇಮಾಡು ಸ್ಮಶಾನದಲ್ಲಿ ಕ್ರೀಡಾಂಗಣ-ಜಿಲ್ಲಾಡಳಿತದ ವಿರುದ್ಧ ಸ್ಥಳೀಯರ ಆಕ್ರೋಶ

"ಪೊಲೀಸ್ ಬಲ ಬಳಸಿ ಭೂಮಾಲೀಕರು ಜೆಸಿಬಿ ತಂದು ಎರಡು ಮೂರು ಸಮಾಧಿಗಳನ್ನು ಅಗೆದೊಗೆದು, ಸಮಾಧಿಗಳ ಮೇಲೆಲ್ಲಾ ಬೂಟುಕಾಲಿನಲ್ಲಿ ಓಡಾಡಿ ಅಮಾನವೀಯವಾಗಿ ನಡೆದುಕೊಂಡರು. ಸಮಾಧಿಯ ಜಾಗವನ್ನೂ ಸೇರಿಸಿ ತಂತಿಬೇಲಿ ಹಾಕಿ ಕಾಮಗಾರಿ ಆರಂಭಿಸುವ ಪ್ರಯತ್ನವನ್ನೂ ಮಾಡಿದರು. ಅದನ್ನು ಮತ್ತೆಮತ್ತೆ ಕಿತ್ತುಹಾಕಿದ ಕಾನ್ಶೀರಾಂ ನಿವಾಸಿಗಳು ಏನೇ ಆದರೂ ತಮಗೆ ಮಂಜೂರಾದ ಜಾಗ ಬಿಟ್ಟುಕೊಡಲಿಲ್ಲ. ಇದರಲ್ಲಿ ಭೂಮಾಲೀಕರ ಹಣಬಲ, ತೋಳ್ಬಲಗಳ ಅಟ್ಟಹಾಸದ ಜೊತೆಗೆ, ‘ಕಾಂಗ್ರೆಸ್-ಮುಕ್ತ ಜಿಲ್ಲೆ’ಯ ಜನಪ್ರತಿನಿಧಿಗಳ ಒತ್ತಡ-ಪ್ರಭಾವಗಳೂ ಸತತವಾಗಿ ಕೆಲಸ ಮಾಡಿವೆ” ಎನ್ನುತ್ತಾರೆ ಭೂಮಿ-ವಸತಿ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ.

Image

ಜಿಲ್ಲಾಡಳಿತಕ್ಕೆ ಇದನ್ನು ಹೇಗಾದರೂ ಬಗೆಹರಿಸಬೇಕಾದ ಅನಿವಾರ್ಯತೆ ಉಂಟಾಗಿದ್ದರಿಂದ ಕಳೆದ ಡಿಸೆಂಬರ್ 28ರಂದು ಪಂಚಾಯ್ತಿ ಅಧ್ಯಕ್ಷರು, ಭೂಮಿ-ವಸತಿ ಹೋರಾಟ ಸಮಿತಿ ಮತ್ತು ಕೆಎಸ್‌ಸಿಎ ಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳು ಎಲ್ಲರನ್ನೂ ಒಳಗೊಂಡ ಸಂಧಾನ ಸಭೆ ನಡೆಸಿತು. ಅಲ್ಲಿ, ತಮಗೆ ಮಂಜೂರಾಗಿರುವ 2 ಎಕರೆ ಪೈಕಿ 1 ಎಕರೆಯನ್ನು ಕ್ರೀಡಾಂಗಣಕ್ಕೆ ಬಿಟ್ಟುಕೊಡುವುದಕ್ಕೆ ಪ್ರತಿಯಾಗಿ ಕಾನ್ಶೀರಾಂ ನಿವಾಸಿಗಳು ಹೋರಾಟ ಸಮಿತಿ ಮೂಲಕ ಮುಂದಿಟ್ಟ ಎಲ್ಲ ಡಿಮ್ಯಾಂಡ್‌ಗಳನ್ನು ಜಿಲ್ಲಾಡಳಿತ ಮತ್ತು ಕೆಎಸ್‌ಸಿಎ ಪ್ರತಿನಿಧಿಗಳು ಒಪ್ಪಿಕೊಂಡಿತು. ಅದರಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ ಈಗ ಜಿಲ್ಲಾಡಳಿತ ಕೊಡಲು ಒಪ್ಪಿರುವ ಅರ್ಧ ಎಕರೆ ಜಾಗದ ಜೊತೆಗೆ ಇನ್ನೂ ಅರ್ಧ ಎಕರೆಯನ್ನು ಕ್ರೀಡಾಂಗಣದವರು ಸ್ಮಶಾನಕ್ಕೆ ಬಿಟ್ಟು ಕೊಡಬೇಕು, ಸಮಾಧಿಗಳ ಪಾವಿತ್ರ್ಯತೆಯನ್ನು ಕಾಪಾಡಬೇಕು, ಸ್ಥಳೀಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಬಾರದು, ಹಾಗೂ ಇನ್ನೊಂದು ಎಕರೆಯನ್ನು ಜಿಲ್ಲಾಡಳಿತವು ಲಗತ್ತಾಗಿ ಅಲ್ಲೇ ಅಕ್ಕಪಕ್ಕದಲ್ಲಿ ನೀಡಬೇಕು ಎಂಬುದಾಗಿತ್ತು.

ಈ ಸುದ್ದಿ ಓದಿದ್ದೀರಾ?: ಮಡಿಕೇರಿ | ಪಾಲೆಮಾಡು ಕ್ರಿಕೆಟ್ ಸ್ಟೇಡಿಯಂ ವಿವಾದ ; ಹೋರಾಟಗಾರ ಮೊಣ್ಣಪ್ಪ ಸೇರಿ ಐವರ ಬಂಧನ

‘ಲಗತ್ತಾಗಿ ಬೇರೆ 1 ಎಕರೆ ನೀಡಿದ ಮೇಲೆ ಮಾತ್ರವೇ ಈಗ ನಮ್ಮ ಸುಪರ್ದಿನಲ್ಲಿರುವ ಭೂಮಿಯಲ್ಲಿ 1 ಎಕರೆ ಬಿಟ್ಟುಕೊಡುತ್ತೇವೆ’ ಎಂದು ಸಭೆಯಲ್ಲಿ ಭೂಮಿ-ವಸತಿ ಹೋರಾಟ ಸಮಿತಿ ಸ್ಪಷ್ಟಪಡಿಸಿತ್ತು.

ಆದರೆ ಭೂಸ್ವಾಧೀನ ಪ್ರಯತ್ನಕ್ಕೆ ಸಂಬಂಧಿಸಿದಂತೆ, "ಕ್ರೀಡಾಂಗಣಕ್ಕೆ ನೀಡಿರುವ ಜಾಗಕ್ಕೆ ಹೊಂದಿಕೊಂಡಂತೆ ಉಳ್ಳವರು ಒತ್ತುವರಿ ಮಾಡಿ ಕಾಫಿ ಪ್ಲಾಂಟೇಶನ್ ಮಾಡಿದ್ದಾರೆ, ಅವರಲ್ಲೊಬ್ಬರು ಕೆಎಸ್‌ಸಿಎ ಜಿಲ್ಲಾ ಸಮನ್ವಯ ಸಮಿತಿ ಸದಸ್ಯರೇ ಆಗಿದ್ದಾರೆ, ಅದನ್ನೇ ತೆರವುಗೊಳಿಸಿ ಕ್ರೀಡಾಂಗಣಕ್ಕೆ ನೀಡಿ" ಎಂದು ಹೋರಾಟ ಸಮಿತಿ ಒತ್ತಾಯಿಸಿತ್ತು. 

Image

ಕಾನ್ಶೀರಾಂ ನಿವಾಸಿಗಳು ಒತ್ತಾಯದ ಹಿನ್ನೆಲೆಯಲ್ಲಿ ಸರ್ವೆ ಕೆಲಸವೂ ನಡೆಯಿತು. ಆದರೆ ಅಕ್ಕಪಕ್ಕದಲ್ಲೆಲ್ಲೂ 1 ಎಕರೆ ಭೂಮಿ ಲಭ್ಯವಿಲ್ಲ, ಹಾಗಾಗಿ ನಿಮಗೆ 3 ಕಿಲೋಮೀಟರ್ ದೂರದ ವಾಟೆಕಾಡು ಎಂಬಲ್ಲಿ 1 ಎಕರೆ ನೀಡಲಾಗುವುದು ಎಂದು ಜಿಲ್ಲಾಡಳಿತ ಮತ್ತೆ ಹೊಸ ಪ್ರಸ್ತಾವನೆ ಮುಂದಿರಿಸಿತು. ‘ಅದು ಮುಳುಗಡೆಯಾಗುವ ಜಾಗ, ಅಲ್ಲಿ ಬೇಡ’ ಎಂದು ನಿವಾಸಿಗಳು ನಿರಾಕರಿಸಿದರು. ಆಗ ಜಿಲ್ಲಾಡಳಿತವು ತಹಸೀಲ್ದಾರ್ ಮೂಲಕ ‘ಕಾನ್ಶೀರಾಂ ನಗರದ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನಕ್ಕೆ ಕೇವಲ ಅರ್ಧ ಎಕರೆ ಮಾತ್ರ ನೀಡಲು ಕಾನೂನಿನಲ್ಲಿ ಅವಕಾಶವಿದೆ, ಆದ್ದರಿಂದ ಮಿಕ್ಕ ಎಲ್ಲ ಜಾಗವನ್ನೂ ಕ್ರೀಡಾಂಗಣಕ್ಕೆ ವಶಪಡಿಸಿಕೊಳ್ಳಲಾಗುವುದು...’ ಎಂದು ‘ನೋಟೀಸು’ ಕೊಡಿಸಿತು. ಅದರಂತೆ ಈಗ್ಗೆ ಕೆಲ ದಿನಗಳ ಹಿಂದೆ ಬುಲ್ಡೋಜರ್ ಕಾರ್ಯಾಚರಣೆಗೂ ಮುಂದಾಯಿತು. ನಿವಾಸಿಗಳು ಪ್ರತಿಭಟಿಸಿ ಮತ್ತೆ ಅದನ್ನು ತಡೆದರು.

ಈ ಎಲ್ಲದರ ಹಿನ್ನೆಲೆಯಲ್ಲೇ ಮೇ 9ರ ಸೋಮವಾರ ಜಿಲ್ಲಾಡಳಿತ ದೊಡ್ಡ ಪೊಲೀಸ್ ಬಲದೊಂದಿಗೆ ಬಹುಶಃ ‘ನಿರ್ಣಾಯಕವಾದ’ ಬುಲ್ಡೋಜರ್ ಕಾರ್ಯಾಚರಣೆ ಯತ್ನ ನಡೆಯಿತು.  ಸ್ಮಶಾನದ ಒಂದು ಎಕರೆಯ ಸುತ್ತ ಜೆಸಿಬಿಯಿಂದ ಟ್ರೆಂಚ್ ಹೊಡೆದು ಆ ಮಣ್ಣನ್ನೆಲ್ಲ ಸಮಾಧಿಗಳ ಮೇಲೆ ಬೇಕಾಬಿಟ್ಟಿ ಚೆಲ್ಲಾಡಿ, ಆ ಜಾಗಕ್ಕೆ ತಂತಿಬೇಲಿ ಹಾಕಿದ್ದಾರೆ; ಕಾನ್ಶಿರಾಂ ನಿವಾಸಿಗಳು ಈ ಬೆಳವಣಿಗೆಯಿಂದ ಆಘಾತಗೊಂಡಿದ್ದು, "ಸ್ಮಶಾನದ ಪಾವಿತ್ರ್ಯತೆಯ ರಕ್ಷಣೆಗೆ ಒಪ್ಪಿ, ‘ಆ ಸ್ಥಳವನ್ನು ಹೂದೋಟ ಮಾಡಲಾಗುವುದು, ಅಲ್ಲಿ ಜನರಿಗೆ ತಮ್ಮ ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುವುದು ಮುಂತಾದವಕ್ಕೆ ಅವಕಾಶ ನೀಡಲಾಗುವುದು’ ಎಂದು ಸಂಧಾನ ಸಭೆಯಲ್ಲಿ ಮಾತು ಕೊಟ್ಟಿದ್ದ ಕೆಎಸ್‌ಸಿಎ ಅಧಿಕಾರಿಗಳೇ ನಿಂತು ಕಾರ್ಯಾಚರಣೆಯಲ್ಲಿ ದುಡಿಯುವ ಬಡಜನರ ಬದುಕಿಗಾಗಲಿ ಸಾವಿಗಾಗಲಿ ತಾವು ಯಾವುದೇ ಬೆಲೆ ಕೊಡುವುದಿಲ್ಲ ಎಂದು ಸಾರಿದ್ದಾರೆ!" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂತ್ರಸ್ತ ಕಾನ್ಶೀರಾಂನಗರ ನಿವಾಸಿಗಳು ಅದೇ ಸ್ಮಶಾನ ಭೂಮಿಯಲ್ಲಿ ಸುರಿವ ಮಳೆ, ಬುಲ್ಡೋಜರ್ ಕೆಸರಿನ ಮಧ್ಯೆ ಸೋಮವಾರದಿಂದಲೇ ಪುನಃ ಧರಣಿ ಸತ್ಯಾಗ್ರಹ ಶುರು ಮಾಡಿದ್ದಾರೆ. ‘ಭೂಮಿ-ವಸತಿ ಸಮಸ್ಯೆಗಳ ಮೇಲುಸ್ತುವಾರಿಗಾಗಿನ ಸರ್ಕಾರದ ಉನ್ನತ ಮಟ್ಟದ ಸಮಿತಿ’ ಸದಸ್ಯ ಕುಮಾರ್ ಸಮತಳ ಈ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಈದಿನ.ಕಾಂ’ ಜೊತೆ ಮಾತಾಡುತ್ತ "ಒಟ್ಟಿನಲ್ಲಿ, ದುಡಿದು ಬದುಕುವ ಕಷ್ಟಜೀವಿ ಜನತೆಗೆ, ಅದರಲ್ಲೂ ದಲಿತ ಸಮುದಾಯದವರಿಗೆ ಗೌರವದಿಂದ ಬದುಕಲು ಬೇಕಾದ ಏನನ್ನೂ ಕೊಡಬಾರದೆನ್ನುವ ಭೂಮಾಲೀಕ ವರ್ಗದ ಮನೋಭಾವದಲ್ಲಿ ಕೊಡಗಿನ ಪ್ಲಾಂಟರ್‌ಗಳು ಒಂದು ತೂಕ ಹೆಚ್ಚೇ ಇರುವುದು ಸರ್ವವಿದಿತ. ಇದು ದಿಡ್ಡಳ್ಳಿ ಹೋರಾಟದ ಕಾಲದಿಂದಲೂ ಸಾಬೀತಾಗುತ್ತ ಬಂದಿದೆ. ಈಗಲೂ ಕೊಡಗಿನ ಹಳ್ಳಿಗಟ್ಟು, ಬಾಳುಗೋಡು, ಕೊಡಂಗೆ ಮುಂತಾದ ಹತ್ತಾರು ಹಳ್ಳಿ-ಹಾಡಿಗಳಲ್ಲಿ ಸರ್ಕಾರಿ ಕಂದಾಯ ಭೂಮಿಯಲ್ಲಿ ಗುಡಿಸಲು ಕಟ್ಟಿಕೊಂಡವರಿಗೆ, ಸಾಗುವಳಿ ಮಾಡಿಕೊಂಡವರಿಗೆ ಹಕ್ಕುಪತ್ರ ಕೊಡಲು ಅಡ್ಡಗಾಲಾಗುತ್ತಿರುವುದು ಈ ಬಲಾಢ್ಯ ವರ್ಗವೇ. ಇವರೊಂದಿಗೆ ಈ ಸ್ಮಶಾನ ಭೂಮಿ-ಕ್ರೀಡಾಂಗಣ ಪ್ರಕರಣದಲ್ಲಿ ಜಿಲ್ಲೆಯ ಇಡೀ ಆಡಳಿತ ಯಂತ್ರ, ಕೆಎಸ್‌ಸಿಎ ಎಲ್ಲ ಒಂದು ‘ಟೀಂ’ ಆಗಿ ಕಾರ್ಯಾಚರಿಸುತ್ತಿರುವುದು ಸ್ಪಷ್ಟವಾಗಿದೆ. ಇದರಲ್ಲಿ ಕೊಡಗಿನ ಜನಪ್ರತಿನಿಧಿಗಳ ಪಾತ್ರವೂ ಬಹಳ ಪ್ರಮುಖವಾಗಿದೆ...” ಎಂದಿದ್ದಾರೆ.

‘ಈದಿನ.ಕಾಂ’ ಜೊತೆ ಮಾತಾಡಿದ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ಅಮೀನ್ ಮೊಹಿಸಿನ್  “ಜಿಲ್ಲಾಡಳಿತ ಮತ್ತು ಕೆಎಸ್‌ಸಿಎ ಡಿಸೆಂಬರ್ 28ರ ಸಭೆಯಲ್ಲಿ ಒಪ್ಪಿಕೊಂಡ ಒಡಂಬಡಿಕೆಯನ್ನು ಹುಸಿಯಾಗಿಸಿವೆ. ಇದು ಬಡಜನತೆಗೆ ಮಾಡಿದ ವಿಶ್ವಾಸ ದ್ರೋಹವಾಗಿದೆ. ಒಡಂಬಡಿಕೆಯ ನಂತರ ಜಿಲ್ಲಾಡಳಿತವು ತಹಸೀಲ್ದಾರ್ ಮೂಲಕ ‘ಅರ್ಧ ಎಕರೆ ಮಾತ್ರ ...’ ಎಂದು ನೋಟೀಸ್ ನೀಡಿಸಿರುವುದು ಮತ್ತೊಮ್ಮೆ ಎಲ್ಲಾ ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲಾಡಳಿತವು ಜನರ ವಿಶ್ವಾಸವನ್ನು ಪೂರ್ಣವಾಗಿ ಕಳೆದುಕೊಂಡಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ತಾವೇ ಏರ್ಪಡಿಸಿದ್ದ ಸಭೆಯಲ್ಲಿ ತಾವೇ ಅಂತಿಮಗೊಳಿಸಿದ್ದ ನಿರ್ಣಯಗಳನ್ನು ಉಳ್ಳವರು ಪಾಲಿಸುವಂತೆ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲಾಡಳಿತದ ಗೌರವವನ್ನು ಕಾಪಾಡಿಕೊಳ್ಳಲಿ ಎಂದು ಹೋರಾಟ ಸಮಿತಿ ಆಶಿಸುತ್ತದೆ. ಹತ್ತಿರದಲ್ಲೆಲ್ಲೂ 1 ಎಕರೆ ಸರ್ಕಾರಿ ಭೂಮಿ ಖುಲ್ಲಾ ಇಲ್ಲ ಎನ್ನುವುದೇ ನಿಜವಿದ್ದಲ್ಲಿ ಸರ್ಕಾರ 1 ಎಕರೆಯನ್ನು ಉಳ್ಳವರಿಂದ ಖರೀದಿಸಿಯಾದರೂ ಕೊಡಲಿ” ಎಂದರು.

ಮುಂದುವರಿದು, “ಭೂಮಿ-ವಸತಿ ಹೋರಾಟ ಸಮಿತಿಗಾಗಲಿ ಕಾನ್ಶೀರಾಂ ನಿವಾಸಿಗಳಿಗಾಗಲಿ ಸಂಘರ್ಷ ಬೇಕಾಗಿಲ್ಲ; ಆದರೆ ಅದು ಅನಿವಾರ್ಯ ಎಂದಾದಲ್ಲಿ ಅವರಿಗೆ ಹೋರಾಟ ಮತ್ತು ಅಧಿಕಾರಿಗಳ ದಬ್ಬಾಳಿಕೆ ಹೊಸದೇನಲ್ಲ. ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳಿಗೆ ಉತ್ತೇಜನ ದೊರೆತು ಹಳ್ಳಿಗಾಡಿನ ಮಕ್ಕಳೂ ಆಟೋಟಗಳಲ್ಲಿ ಮುಂದೆ ಬರುವುದು ನಮಗೂ ಬೇಕಾಗಿದೆ. ಆದರೆ ಅದು ಬಡಜನರಿಗೆ ವಂಚನೆ ಮಾಡುವ ಮೂಲಕ ಆಗಬಾರದು ಎಂಬುದನ್ನು ಕೊಡಗಿನ ಉಳ್ಳವರು ಇನ್ನಾದರೂ ಅರಿಯಬೇಕಿದೆ. ಕೆಎಸ್‌ಸಿಎ ಉನ್ನತಾಧಿಕಾರಿಗಳಾದರೂ ತಮ್ಮ ಕ್ರೀಡಾಂಗಣವು ಬಡಜನರ ಬದುಕು ಮತ್ತು ಗೋರಿಗಳ ಮೇಲೆ ನಿರ್ಮಾಣವಾಗುವ ಬದಲು ಅವರ ವಿಶ್ವಾಸ ಮತ್ತು ಪಾಲ್ಗೊಳ್ಳುವಿಕೆಯ ಭದ್ರ ಬುನಾದಿಯ ಮೇಲೆ ನೆಲೆಯೂರುವಂತೆ ಹೃದಯ ವೈಶಾಲ್ಯ ತೋರಬೇಕಾಗಿದೆ” ಎಂದರು.
 

ನಿಮಗೆ ಏನು ಅನ್ನಿಸ್ತು?
2 ವೋಟ್