
- ಹೊಸರೂಪದಲ್ಲಿ ಕೆಲಸಕ್ಕಿಳಿದ ಲೋಕಾಯುಕ್ತಕ್ಕೆ ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲ
- ಸರ್ಕಾರದ ಗಮನ ಇತ್ತ ಹರಿಯುವವರೆಗೂ ದೂರುಗಳ ಸಕಾಲಿಕ ವಿಲೇವಾರಿ ಕಷ್ಟ
ಕರ್ನಾಟಕ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮರುಜೀವ ಪಡೆದುಕೊಂಡ ಲೋಕಾಯುಕ್ತವೀಗ ಹೊಸ ಹುಮ್ಮಸ್ಸಿನೊಂದಿಗೆ ಕರ್ತವ್ಯ ನಿರ್ವಹಿಸಲು ಸಜ್ಜಾಗುತ್ತಿದೆ. ಆರು ವರ್ಷಗಳ ಹಿಂದೆ ಕಳೆದುಹೋಗಿದ್ದ ಸಂಸ್ಥೆಯ ಗೌರವವನ್ನು ಮರುಪ್ರತಿಷ್ಠಾಪಿಸಲು ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಸಿದ್ಧತೆ ನಡೆಸುತ್ತಿದ್ದಾರೆ.
ಆದರೆ, ಇದರಲ್ಲಿನ ದುರಂತ ವಿಚಾರ ಏನೆಂದರೆ, ಹೊಸ ರೂಪದಲ್ಲಿ ಕೆಲಸ ಮಾಡಲು ನಿಂತಿರುವ ಲೋಕಾಯುಕ್ತ ಪೊಲೀಸ್, ಅದರ ಆಶಯ ಈಡೇರಿಸಲು ಅವಶ್ಯವಾದ ಸಿಬ್ಬಂದಿ ಬಲ ಇಲ್ಲದೆ ಕಂಗಾಲಾಗಿ ನಿಂತಿದೆ.
ಕಳೆದ ಆರು ವರ್ಷಗಳಿಂದ ಬಲಹೀನವಾಗಿದ್ದ ಲೋಕಾಯುಕ್ತ ಪೊಲೀಸ್ ವಿಭಾಗ ಈಗ ದೂರು ದಾಖಲಿಸಿಕೊಳ್ಳುವ ಅಧಿಕಾರ ಪಡೆದುಕೊಂಡಿದೆ. ಭ್ರಷ್ಟಾಚಾರದ ವಿರುದ್ದ ದೂರುಗಳು ಬಂದರೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಸುತ್ತೋಲೆ ಹೊರಡಿಸಿದ್ದಾರೆ. ಈ ಬೆಳವಣಿಗೆ ಬಳಿಕ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ವಿಚಾರ ಹೊರಬಿದ್ದಿದೆ.
ಇಲಾಖೆ ಮಾಹಿತಿಯ ಪ್ರಕಾರ ಲೋಕಾಯುಕ್ತ ಪೊಲೀಸ್ ಆಡಳಿತದ ತಾಂತ್ರಿಕ, ಕಾನೂನು ವಿಭಾಗ, 'ಡಿ' ದರ್ಜೆ ಸೇರಿದಂತೆ 1403 ಹುದ್ದೆಗಳ ಪೈಕಿ 414 ಹುದ್ದೆ ಗಳು ಖಾಲಿ ಉಳಿದುಕೊಂಡಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಪೊಲೀಸ್ ವಿಭಾಗದ ಐಜಿಪಿ ಹುದ್ದೆಯೇ ಕಳೆದ ಐದು ವರ್ಷದಿಂದ ಭರ್ತಿಯಾಗದೆ ಉಳಿದಿದೆ.
ಒಟ್ಟಾರೆ ಇಲಾಖೆಗೆ ನಿಗದಿಯಾಗಿದ್ದ 22 ಎಸ್ಪಿಗಳ ಪೈಕಿ 5 ಎಸ್ಪಿ ಹುದ್ದೆ, 3 ಡಿವೈಎಸ್ಪಿ, 18 ಪೊಲೀಸ್ ಇನ್ಸ್ಪೆಕ್ಟರ್, 10 ಪೊಲೀಸ್ ಸಬ್ ಇನ್ಸ್ಪೆಕ್ಟರ್, 5 ಹೆಡ್ ಕಾನ್ಸ್ಟೆಬಲ್, 90 ಕಾನ್ಸ್ಟೆಬಲ್, 80ಕ್ಕೂ ಅಧಿಕ ಡ್ರೈವರ್ ಹುದ್ದೆಗಳು ಸದ್ಯಕ್ಕೆ ಖಾಲಿ ಇವೆ.
ಹುದ್ದೆ ಭರ್ತಿಯಾಗದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಜುಲೈ ತಿಂಗಳ ಅಂತ್ಯಕ್ಕೆ ಲೋಕಾಯುಕ್ತದಲ್ಲಿ ದಾಖಲಾದ ದೂರುಗಳ ಪೈಕಿ 8989 ದೂರುಗಳ ವಿಚಾರಣೆ ಬಾಕಿ ಉಳಿದಿವೆ. ಹಾಗೆಯೇ ಈ ಮಾನ್ಯತೆ ಕಳೆದುಕೊಂಡಿರುವ ಎಸಿಬಿಯಲ್ಲಿದ್ದ ತನಿಖಾ ಹಂತದಲ್ಲಿನ 70ಕ್ಕೂ ಅಧಿಕ ಪ್ರಕರಣಗಳು, ಇತರೆ ದೂರು ಅರ್ಜಿಗಳು ಈಗ ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. ಹೀಗಾದಲ್ಲಿ ಲೋಕಾಯುಕ್ತಕ್ಕೆ ಹಾಲಿ ಮಂಜೂರಾಗಿರುವ ಹುದ್ದೆಗಳಿಗಿಂತ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಕೆಲಸಕ್ಕೆ ನಿಯೋಜನೆಯಾಗಬೇಕಿದೆ.
ಖಾಲಿ ಇರುವ ಲೋಕಾ ಹುದ್ದೆಗಳು
ವೃಂದ ಮಂಜೂರು ಹುದ್ದೆ, ಹಾಲಿ ಖಾಲಿ
ಗ್ರೂಪ್ ಎ - 147 - 112 - 35
ಗ್ರೂಪ್ ಬಿ -118 - 83 - 35
ಗ್ರೂಪ್ ಸಿ -971 - 657 - 314
ಗ್ರೂಪ್ ಡಿ -167 - 117 - 50
ಒಟ್ಟು - 1403 - 969 - 434
ಒಟ್ಟಾರೆ, ಲೋಕಾಯುಕ್ತದಲ್ಲಿ ಕೆಲಸಕ್ಕೆ ಅಗತ್ಯವಿರುವ ಸಿಬ್ಬಂದಿ ಪಾಲಿನಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇರುವುದರಿಂದ ತನಿಖಾ ಹಂತದಲ್ಲಿರುವ ಪ್ರಕರಣಗಳೂ ಸೇರಿದಂತೆ ನೂತನವಾಗಿ ದಾಖಲಾಗಲಿರುವ ಪ್ರಕರಣಗಳ ತನಿಖೆಗೂ ಈ ಬೆಳವಣಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಈ ಸುದ್ದಿ ಓದಿದ್ದೀರಾ? : ಒಂದು ನಿಮಿಷದ ಓದು | ಕರ್ನಾಟಕ ಲೋಕಾಯುಕ್ತ ಅಧಿಕೃತ ಆರಂಭ; ದೂರು ದಾಖಲಿಸಿಕೊಳ್ಳುವಂತೆ ಎಡಿಜಿಪಿ ಆದೇಶ
ಲೋಕಾಯುಕ್ತ ಸುಗಮವಾಗಿ ಕೆಲಸ ಮಾಡುವಂತಾಗಬೇಕಾದರೆ ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ವಹಿಸುವ ಅನಿವಾರ್ಯತೆಯೂ ಈಗ ಸೃಷ್ಟಿಯಾಗಿದೆ. ಇದರ ಜೊತೆಗೆ ಇತ್ತೀಚೆಗೆ ಬರಖಾಸ್ತುಗೊಂಡಿರುವ ಎಸಿಬಿ ಸಿಬ್ಬಂದಿಯನ್ನು ಇಲ್ಲಿಗೆ ವರ್ಗಾಯಿಸಿದರೂ ಲೋಕಾಯುಕ್ತಕ್ಕೆ ಅವಶ್ಯವಿರುವ ಸಿಬ್ಬಂದಿ ದೊರಕದಿರುವ ಕಾರಣ, ಹೊಸಬರನ್ನು ತುರ್ತಾಗಿ ಇಲಾಖೆ ಕಾರ್ಯಕ್ಕೆ ನಿಯೋಜಿಸುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.
ಹೈಕೋರ್ಟ್ ನಿರ್ದೇಶನದಂತೆ ಸರ್ಕಾರವು ಲೋಕಾಯುಕ್ತಕ್ಕೆ ಅಗತ್ಯ ಸಿಬ್ಬಂದಿ ಒದಗಿಸಿ ನಿಜಕ್ಕೂ ಬಲ ತುಂಬುವುದೇ ಇಲ್ಲವೇ ಎನ್ನುವುದು ಈಗ ಜನರೆದುರು ಇರುವ ಮುಖ್ಯ ಪ್ರಶ್ನೆಯಾಗಿದೆ.