ಚಿಲುಮೆ ವೋಟರ್‌ ಗೇಟ್‌ ಹಗರಣ| ಮುಖ್ಯಮಂತ್ರಿಯೇ ಕಿಂಗ್‌ ಪಿನ್: ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

KPCC Press meet
  • ಮುಖ್ಯಮಂತ್ರಿಗೆ ಸರಣಿ ಪ್ರಶ್ನೆಗಳ ಸವಾಲೊಡ್ಡಿದ ಮಾಜಿ ಸಿಎಂ ಸಿದ್ದರಾಮಯ್ಯ
  • ರಾಜ್ಯ ಚುನಾವಣಾ ಆಯೋಗ ಸ್ಪಂದಿಸದಿದ್ದರೆ ಕೇಂದ್ರ ಆಯೋಗಕ್ಕೆ ದೂರು

“ಅಮೇರಿಕಾದಲ್ಲಿ ವಾಟರ್ ಗೇಟ್ ಪ್ರಕರಣ ಎಂದು ಕರೆಯುತ್ತಿದ್ದೆವು. ಅದೇ ರೀತಿ ಇದು ವೋಟರ್ ಗೇಟ್ ಪ್ರಕರಣ. ಜಗತ್ತಿನಲ್ಲಿ ಇಂತಹ ಪ್ರಕರಣಗಳು ನಡೆಯುವುದು ಬಹಳ ಅಪರೂಪ. ನಮ್ಮ ರಾಜ್ಯದಲ್ಲಿ ನಡೆದಿದೆ. ಈ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ. ಅವರೇ ಪ್ರಮುಖ ಅಪರಾಧಿ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದರು. 

ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಅವರೊಂದಿಗೆ ಶನಿವಾರ ಮಧ್ಯಾಹ್ನ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Eedina App

“ಜನರ ಮತದಾನದ ಹಕ್ಕನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿರುವುದು ಒಂದು ಗಂಭೀರ ಅಪರಾಧ. ಚುನಾವಣಾ ಆಯೋಗ ಒಂದು ಸಂವಿಧಾನಬದ್ಧ ಸಂಸ್ಥೆ, ಇದು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು. ಚುನಾವಣೆಯಲ್ಲಿ ಅವ್ಯವಹಾರ ನಡೆದರೆ ಅದು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ” ಎಂದು ಸಿದ್ದರಾಮಯ್ಯ ಕಿಡಿಕಾರಿದರು.

“ಹಗರಣದಲ್ಲಿ ಅಬ್ಬೆಪಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಿದರೆ ಅದರಿಂದ ಉಪಯೋಗ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ನಗರದ ಉಸ್ತುವಾರಿ ಸಚಿವರು. ಅವರೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ಅವರು ನನಗೆ ಮತ್ತು ಈ ಹಗರಣಕ್ಕೆ ಸಂಬಂಧ ಇಲ್ಲ ಎಂದು ಹೇಳಲು ಬರಲ್ಲ” ಎಂದರು.

AV Eye Hospital ad

“ಬೊಮ್ಮಾಯಿ ಅವರು ನಮ್ಮ ಆರೋಪಕ್ಕೆ ಮತ್ತೆ ಸುಳ್ಳು ಉತ್ತರಗಳನ್ನು ನೀಡಿದ್ದಾರೆ. ಎಲ್ಲದಕ್ಕೂ ಹಿಂದಿನ ಸರ್ಕಾರ ಮಾಡಿಲ್ವಾ? ಎಂದು ಕೇಳುತ್ತಾರೆ. ಆಗ ಬೊಮ್ಮಾಯಿ ಅವರು ವಿರೋಧ ಪಕ್ಷದಲ್ಲಿದ್ದು ಮಾತನಾಡದೆ ಸುಮ್ಮನಿದ್ದಿದ್ದು ಏಕೆ? ನಮ್ಮ ಸರ್ಕಾರದ ವಿರುದ್ಧ ಬಂದ ಎಲ್ಲ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಿದ್ದೆ, ಆಗ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲೂ ಇರಲಿಲ್ಲ. 2008ರಿಂದ 2013ರ ವರೆಗೆ ಯಡಿಯೂರಪ್ಪ, ಸದಾನಂದ ಗೌಡರು ಮತ್ತು ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ನಾವು ವಿರೋಧ ಪಕ್ಷವಾಗಿ ಕೆಲವು ಪ್ರಕರಣಗಳನ್ನು ಸಿಬಿಐ ಗೆ ವಹಿಸುವಂತೆ ಒತ್ತಾಯ ಮಾಡಿದ್ದಕ್ಕೆ ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ ಎಂದು ಲೇವಡಿ ಮಾಡುತ್ತಿದ್ದರು. ಬಸವರಾಜ ಬೊಮ್ಮಾಯಿ ಅವರು ಒಂದು ತಪ್ಪನ್ನು ಮುಚ್ಚಿಕೊಳ್ಳಲು ನೂರು ಸುಳ್ಳುಗಳನ್ನು ಹೇಳುತ್ತಿದ್ದಾರೆ” ಎಂದು ಟೀಕಿಸಿದರು. 

“ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೂ ದೂರು ನೀಡಿದ್ದೇವೆ. ನಾನು ಅವರ ಬಳಿ ಹೀಗೆ ಲಕ್ಷಾಂತರ ಜನ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ, ಇದಕ್ಕೆ ಕಾರಣ ಯಾರು? ಎಂದು ಕೇಳಿದ್ದೇನೆ. ಬಿಬಿಎಂಪಿ ನೇಮಿಸಿರುವ ಬೂತ್ ಮಟ್ಟದ ಅಧಿಕಾರಿಗಳು ಯಾರೂ ಸರ್ಕಾರಿ ಅಧಿಕಾರಿಗಳಲ್ಲ. ಇವರು ಕಾನೂನಿಗೆ ವಿರುದ್ಧವಾಗಿ ಪರಿಷ್ಕರಣೆ ಮಾಡಿದ್ದಾರೆ” ಎಂದು ಹೇಳಿದರು.

“ಈ ವರೆಗೆ ಕೃಷ್ಣಪ್ಪ ರವಿಕುಮಾರ್ ಅವರ ಚಿಲುಮೆ ಸಂಸ್ಥೆಯ ಮೇಲೆ ಕೇಸ್ ದಾಖಲಿಸಿ, ಅವರ ಬಂಧನ ಮಾಡಿಲ್ಲ ಏಕೆ? ಕಚೇರಿ ಸಿಬ್ಬಂದಿಯನ್ನು ಬಂಧಿಸಿಲ್ಲ ಏಕೆ? ಬಿಬಿಎಂಪಿ ಕಮಿಷನರ್ ಅವರ ಬಂಧನವಾಗಿಲ್ಲ ಏಕೆ? ರಾಜ್ಯ ಮುಖ್ಯಚುನಾವಣಾಧಿಕಾರಿ ಅವರು ಪ್ರಾದೇಶಿಕ ಆಯುಕ್ತರ ಮೂಲಕ ತನಿಖೆ ಮಾಡಿಸುತ್ತೇನೆ ಎನ್ನುತ್ತಿದ್ದಾರೆ. ಓರ್ವ ಪ್ರಾದೇಶಿಕ ಆಯುಕ್ತ ತನಗಿಂತ ಮೇಲಿನ ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡಿ ಶಿಕ್ಷೆ ಕೊಡೋಕೆ ಆಗುತ್ತದಾ? ಇವರ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಅಲ್ಲವೇ? ಅದಕ್ಕೆ ನಾವು ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ಒಂದು ನ್ಯಾಯಾಂಗ ಸಮಿತಿ ರಚಿಸಿ, ಅದರ ಮೂಲಕ ತನಿಖೆ ನಡೆಸಿ ಎಂದು ಒತ್ತಾಯ ಮಾಡಿದ್ದೇವೆ” ಎಂದರು.

“ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂಬುದು ನಮ್ಮ ಒತ್ತಾಯ. ಈ ಹಗರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್ ಪಿನ್. ಮುಖ್ಯಮಂತ್ರಿ ಆದವರು ಯಾವ ಹಗರಣವನ್ನು ಬೇಕಾದರೂ ಮಾಡಬಹುದಾ? ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದುಕೊಂಡು ಇಂಥದ್ದೊಂದು ಅಕ್ರಮಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆ ಇರುತ್ತದಾ” ಎಂದು ಪ್ರಶ್ನಿಸಿದರು.

"ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ನೀವೆ ಒಪ್ಪಿಸಬಹುದು ಎಂದು ಅವರಿಗೆ ಒತ್ತಾಯ ಮಾಡಿದ್ದೇವೆ. ಅದಕ್ಕವರು ನಾನು ಕೇಂದ್ರ ಚುನಾವಣಾ ಆಯೋಗದವರ ಜೊತೆ ಮಾತನಾಡಿ ಮತ್ತೆ ನಿಮ್ಮನ್ನು ಸಂಪರ್ಕ ಮಾಡುತ್ತೇನೆ ಎಂದಿದ್ದಾರೆ. ರಾಜ್ಯ ಚುನಾವಣಾ ಆಯೋಗ ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಮುಂದೆ ಕೇಂದ್ರ ಚುನಾವಣಾ ಆಯೋಗದ ಬಳಿ ಹೋಗುತ್ತೇವೆ" ಎಂದರು.

ಸಿಎಂಬೊಮ್ಮಾಯಿಗೆ ಕಾಂಗ್ರೆಸ್‌ ಪ್ರಶ್ನೆಗಳು

1. ಬಿಬಿಎಂಪಿ ಉಸ್ತುವಾರಿಗಳಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ವಿರುದ್ಧ ಇನ್ನೂ ಏಕೆ ಎಫ್ಐಆರ್ ದಾಖಲಾಗಿಲ್ಲ? ಮತದಾರರ ದತ್ತಾಂಶವನ್ನು ಕದ್ದ ʼಚಿಲುಮೆʼ ಎಂಬ ಸಂಸ್ಥೆಯ ಜೊತೆಯಲ್ಲಿ ಇವರು ಕೂಡ ನೇರವಾಗಿ ತಪ್ಪಿತಸ್ಥರಾಗಿದ್ದಾರಲ್ಲವೇ?

ವಾಸ್ತವದಲ್ಲಿ ಇವರಿಬ್ಬರೂ ಅಪರಾಧ ಎಸಗಿರುವಾಗ, ಪ್ರಮುಖ ಆರೋಪಿ ಮುಖ್ಯಮಂತ್ರಿಯವರು, ಎರಡನೇ ಪ್ರಮುಖ ಆರೋಪಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡುತ್ತಿರುವುದು ಕ್ರೂರ ವ್ಯಂಗ್ಯವಲ್ಲವೇ?

2. ಮತದಾರರ ದತ್ತಾಂಶ ಕಳ್ಳತನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಅವರದ್ದೇ ಸುಳ್ಳುಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡಿಲ್ಲವೇ?

ಒಂದೆಡೆ ಸಿಎಂ ಬಸವರಾಜ್ ಬೊಮ್ಮಾಯಿ, ಮತದಾರರ ದತ್ತಾಂಶ ಕದಿಯುವುದು ಸಾಧ್ಯವೇ ಇಲ್ಲ ಅದೊಂದು ಆಧಾರ ರಹಿತ ಆರೋಪ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಮತ್ತೊಂದೆಡೆ ಅವರೇ ಎಫ್ಐಆರ್ ದಾಖಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ತನಿಖೆಗೆ ಆದೇಶಿಸಿದ್ದಾರೆ.

3. ಚಿಲುಮೆ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಚಿಲುಮೆ ಎಂಟರ್‌ಪ್ರೈಸಸ್‌ ಪ್ರೈವೇಟ್ ಲಿಮಿಟೆಡ್ ಮತ್ತು ಡಿಎಪಿ ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ವಿರುದ್ಧ ಏಕೆ ಎಫ್ಐಆರ್ ದಾಖಲಾಗಿಲ್ಲ?

4. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಸುಮಾರು ಒಂದು ಕೋಟಿ ಮತದಾರರ ವೈಯುಕ್ತಿಕ ದತ್ತಾಂಶಗಳು ಎಲ್ಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಮತ್ತು ಬಿಜೆಪಿ ಸರ್ಕಾರ ಏಕೆ ಉತ್ತರಿಸುತ್ತಿಲ್ಲ? ಡೇಟಾ ಎಲ್ಲಿ ಹೋಯಿತು? ಪ್ರತಿ ಮನೆ ಮತ್ತು ಆಯಾ ಪ್ರದೇಶಕ್ಕಾಗಿ ಸಿದ್ಧಪಡಿಸಲಾದ ʼವಿವರವಾದ ನಕ್ಷೆಗಳುʼ ಎಲ್ಲಿವೆ?

5. ಸಂಪೂರ್ಣ ಡೇಟಾವನ್ನು ಅಪ್ಲೋಡ್ ಮಾಡಲಾಗಿರುವ ಚಿಲುಮೆ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಒಡೆತನದ “ಡಿಜಿಟಲ್ ಸಮೀಕ್ಷಾ” ಎಂಬ ಖಾಸಗಿ ಆ್ಯಪ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರ ಇನ್ನೂ ಏಕೆ ವಶಪಡಿಸಿಕೊಂಡಿಲ್ಲ? ಬಿಜೆಪಿ ನಾಯಕರು ಮತ್ತು ಇತರರು ಸೇರಿದಂತೆ ಎಲ್ಲರಿಗೂ ಈ ಡೇಟಾದ ಮಾಹಿತಿ ಲಭ್ಯವಿದೆಯೇ? ಇದು ಒಂದು ರೀತಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸಿದಂತಾಗುವುದಿಲ್ಲವೇ?

6. ʼಚಿಲುಮೆʼಗೆ ಯಾರು ಹಣ ನೀಡುತ್ತಿದ್ದಾರೆ ಮತ್ತು ಆ ಸಂಸ್ಥೆ ಬಿಬಿಎಂಪಿಗೆ ʼಉಚಿತವಾಗಿʼ ಏಕೆ ಕೆಲಸ ಮಾಡುತ್ತಿತ್ತು ಎಂಬುದನ್ನು ಬಹಿರಂಗಪಡಿಸಲು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರ ಏಕೆ ನಿರಾಕರಿಸುತ್ತಿದೆ? ಗುತ್ತಿಗೆ ನೌಕರರಿಗೆ ಹಾಗೂ ಇತರೆ ಉಪಗುತ್ತಿಗೆ ಸಂಸ್ಥೆಗಳಿಗೆ ವೇತನ ನೀಡಲು ಈ ಕೋಟ್ಯಂತರ ರೂಪಾಯಿ ಹಣ ಎಲ್ಲಿಂದ ಬಂತು?

7. ವೋಟರ್ ಡಾಟಾ ಕಳ್ಳತನದ ಸಂಪೂರ್ಣ ಕಾರ್ಯಾಚರಣೆಗಾಗಿ ‘ಚಿಲುಮೆ’ ಸಂಸ್ಥೆಯು ಸುಮಾರು 15,000 ಉದ್ಯೋಗಿಗಳನ್ನು ನೇಮಿಸಿಕೊಂಡಿರುವುದು ಸತ್ಯವೇ? ರೂ 20,000– ರೂ 40,000 ಮಾಸಿಕ ವೇತನದಲ್ಲಿ ಡೇಟಾ ಸಂಗ್ರಹಿಸಲು ʼಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್‌ʼಗಳನ್ನು ನೇಮಿಸಿಕೊಳ್ಳಲು ʼಚಿಲುಮೆʼ ಜಾಹೀರಾತುಗಳನ್ನು ನೀಡಿಲ್ಲವೇ?

8. ಸಿಎಂ ಬಸವರಾಜ ಬೊಮ್ಮಾಯಿ (ಬಿಬಿಎಂಪಿ ಉಸ್ತುವಾರಿ ಸಚಿವರಾಗಿ), ಬಿಬಿಎಂಪಿ ಮತ್ತು ಬಿಜೆಪಿ ಸರ್ಕಾರವು 2018-2022 ರ ನಡುವೆ ಲಿಖಿತ ಆದೇಶದ ಮೂಲಕ ಚುನಾವಣೆ ಸಂಬಂಧಿತ ಚಟುವಟಿಕೆಗಳು ಮತ್ತು ವೈಯಕ್ತಿಕ ಮತದಾರರ ಡೇಟಾ ಸಂಗ್ರಹಣೆಯನ್ನು ವಹಿಸಿಕೊಟ್ಟಿಲ್ಲವೇ? ಇಂತಹ 22 ಆದೇಶಗಳನ್ನು ಹೊರಡಿಸಿಲ್ಲವೇ?

9. ಸಿಎಂ ಬಸವರಾಜ ಬೊಮ್ಮಾಯಿ ಅವರು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸಿದ್ದಾರೆ ಎಂಬುದಕ್ಕೆ ಮೇಲ್ನೋಟಕ್ಕೆ ಕಾಣುತ್ತಿರುವ ದೃಢವಾದ ಸಾಕ್ಷ್ಯವನ್ನು ಆಧಾರ ರಹಿತ ಎಂದು ಹೇಳಿದರೆ ಚಿಲುಮೆ ಸಂಸ್ಥೆಯಿಂದ ನೇಮಕಗೊಂಡ ಹಲವಾರು ವ್ಯಕ್ತಿಗಳು ಚಿಲುಮೆ ಸಂಸ್ಥೆಯ ಉದ್ಯೋಗಿಗಳಾಗಿ ವೈಯಕ್ತಿಕ ಮತದಾರರ ಡಾಟಾ ಸಂಗ್ರಹಿಸಿದ್ದಾರೆ. ಅವರಿಗೆ ಬಿಎಲ್‌ಒ ಕಾರ್ಟ್‌ಗಳನ್ನು ನೀಡಲಾಗಿತ್ತು ಎಂದು ವೀಡಿಯೊದಲ್ಲಿ ಹೇಳುತ್ತಿರುವುದು ಕಾಣುತ್ತಿಲ್ಲವೇ?

ಈ ಸುದ್ದಿ ಓದಿದ್ದೀರಾ? ʼಗಂಡುʼ ಸಚಿವರಿಗೂ ಚಿಲುಮೆ ಸಂಸ್ಥೆಗೂ ಏನು ವ್ಯವಹಾರ: ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

10. ಖಾಸಗಿ ಮತದಾರರ ಮಾಹಿತಿ ಪಡೆದಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮತದಾರರ ದತ್ತಾಂಶ ಕಳ್ಳತನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸುಳ್ಳುಗಳು ಕೆಆರ್ ಪುರದ ಮಾಜಿ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಅವರ ಚುನಾವಣಾ ಅಫಿಡವಿಟ್ ಮೂಲಕ ಬಯಲಾಗಿದೆ, ಇದೇ ನಂದೀಶ್ ರೆಡ್ಡಿ ಅವರು ಚಿಲುಮೆ ಟ್ರಸ್ಟ್‌ಗೆ 18 ಲಕ್ಷ ರೂ. ಪಾವತಿಸಿರುವುದು ಕಾಣುತ್ತಿಲ್ಲವೇ?

11. ಮತದಾರರ ದತ್ತಾಂಶ ಸಂಗ್ರಹಿಸಲು ಅಥವಾ ಖಾಸಗಿ ಆಪ್‌ಗೆ ಅಪ್‌ಲೋಡ್‌ ಮಾಡಲು ಬೊಮ್ಮಾಯಿ ಸರ್ಕಾರ ಅಥವಾ ಬಿಬಿಎಂಪಿಗೆ ಅಧಿಕಾರ ನೀಡಿಲ್ಲ ಎಂದು ಸ್ವತಃ ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರೇ ಹೇಳಲು ಮುಂದಾದಾಗ, ಈ ಕಾನೂನು ಉಲ್ಲಂಘನೆಯ ಹೊಣೆ ಬಿಬಿಎಂಪಿ ಉಸ್ತುವಾರಿ ಸಚಿವರಾದ ಸಿಎಂ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರ ಮೇಲೆ ಇದೆ ಅಲ್ಲವೇ? 

12. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಯುತ ತನಿಖೆ ನಡೆಸಿ ಸಿಎಂ ಬೊಮ್ಮಾಯಿ ಅವರ ರಾಜೀನಾಮೆ ಪಡೆಯಬೇಕು ಅಥವಾ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕಿತ್ತೊಗೆಯಬೇಕಲ್ಲವೇ? ಹಾಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನಿನ ಪ್ರಕಾರ ಬಂಧಿಸಬೇಕಲ್ಲವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app