ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿರುವುದು ಭ್ರಷ್ಟಾಚಾರಿಗಳಲ್ಲಿ ನಡುಕ ಹುಟ್ಟಿಸಿದೆ: ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ

  • ಲೋಕಾಯುಕ್ತಕ್ಕೆ ಮರುಜೀವ ನೀಡಿರುವುದು ರಾಜಕಾರಣಿಗಳ ನಿದ್ದೆಗೆಡಿಸಿದೆ
  • ಜನರಿಗೊಂದು, ಅಧಿಕಾರಿಗಳಿಗೊಂದು ನ್ಯಾಯ ಎನ್ನುವಂತಾಗಬಾರದು

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪುನರ್ ಸ್ಥಾಪನೆಗೆ ಆದೇಶಿಸಿರುವ ಹೈಕೋರ್ಟ್ ತೀರ್ಪನ್ನು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸ್ವಾಗತಿಸಿದ್ದಾರೆ. ಜೊತೆಗೆ ಈ ಬಗ್ಗೆ ತಮ್ಮ ಅಭಿಪ್ರಾಯವನ್ನೂ ಮಾಧ್ಯಮಗಳೊಂದಿಗೆ ಹಂಚಿಕೊಂಡು ವ್ಯವಸ್ಥೆ ಬಗೆಗಿನ ಕೆಲವು ಆತಂಕಗಳನ್ನು ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ. ಸಂತೋಷ್ ಹೆಗ್ಡೆ, "ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ. ಎಲ್ಲರೂ ಭ್ರಷ್ಟರಿಗೆ ಮಣೆ ಹಾಕ್ತಾರೆ. ಈ ವಿಚಾರದಲ್ಲಿ ಯಾವುದೇ ಪಕ್ಷಭೇದವಿಲ್ಲ. ಈ ಕಾರಣಕ್ಕಾಗಿಯೇ ಹಿಂದೆ ಲೋಕಾಯುಕ್ತವನ್ನು ಇವರೆಲ್ಲರೂ ವಿರೋಧಿಸಿದ್ದರು" ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

"ರಾಜಕೀಯ ಹಾಗೂ ರಾಜಕಾರಣದ ವ್ಯವಸ್ಥೆಯನ್ನು ಭ್ರಷ್ಟಾಚಾರಿಗಳು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತಾರೆ. ಭ್ರಷ್ಟಾಚಾರಿಗೆ ಜೈಕಾರ ಹಾಕ್ತಾರೆ. ಜನರನ್ನು ಹಣ ಮತ್ತು ಅಧಿಕಾರದ ಆಸೆಯಲ್ಲಿ ಮಂತ್ರಮುಗ್ಧರನ್ನಾಗಿಸಿ ತಮಗೆ ಬೇಕಾದಂತೆ ನಡೆಸಿಕೊಳ್ಳುತ್ತಾರೆ" ಎಂದು ಸಂತೋಷ್‌ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಲೋಕಾಯುಕ್ತ ಸಂಸ್ಥೆ ಬಗ್ಗೆ ಮಾತನಾಡಿದ ಅವರು, "ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಇದು ಭ್ರಷ್ಟಾಚಾರಿಗಳಲ್ಲಿ ನಡುಕ ಹುಟ್ಟಿಸಿದೆ" ಎಂದು ಹೇಳಿದರು. "ಕೋರ್ಟ್‌ನ ಈ ತೀರ್ಪಿನ ಬಗ್ಗೆ ಮೂರು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಬಹುದು. ಏಕೆಂದರೆ, ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಆದರೆ, ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ, ಸರ್ಕಾರಿ ಅಧಿಕಾರಿಯ ಮೇಲೂ ಕ್ರಮ ಜರುಗಿಸಿರಲಿಲ್ಲ" ಎಂದು ನ್ಯಾ. ಸಂತೋಷ್‌ ಹೆಗ್ಡೆ ಹೇಳಿದರು.

ಈ ಸುದ್ದಿ ಓದಿದ್ದೀರಾ? : ಈದಿನ ಸಂದರ್ಶನ| ಎಸಿಬಿ ರದ್ದು: ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕ ನ್ಯಾಯ: ಎಸ್‌ ಆರ್‌ ಹಿರೇಮಠ್‌

ಲೋಕಾಯುಕ್ತ ಬಲಪಡಿಸುವ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಂತೋಷ್ ಹೆಗ್ಡೆ, "ಲೋಕಾಯುಕ್ತಕ್ಕೆ ಸ್ವತಂತ್ರ ಅಧಿಕಾರ ಹಾಗೂ ಸವಲತ್ತುಗಳನ್ನ ನೀಡಬೇಕು. ಆ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು" ಎಂದರು. 

ಎಸಿಬಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂತೋಷ್‌ ಹೆಗ್ಡೆ, "ಎಸಿಬಿಯಲ್ಲಿ ಈವರೆಗೆ ಸಾವಿರಾರು ಕೇಸುಗಳು ದಾಖಲಾಗಿವೆ. ಆದರೆ, ಯಾರಿಗೂ ಶಿಕ್ಷೆ ಆಗಿಲ್ಲ ಎಂಬುವುದೇ ಬೇಸರ. ದುರಂತದ ವಿಚಾರ ಎಂದರೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಇಲ್ಲಿಯವರೆಗೂ ಶಿಕ್ಷೆಯೇ ಆಗಿಲ್ಲ. ಮಂತ್ರಿ ಇರಲಿ, ಒಬ್ಬ ಶಾಸಕನನ್ನೂ ಕೂಡ ಎಸಿಬಿ ವಿಚಾರಣೆ ಮಾಡಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ನಮ್ಮ ನಿಮ್ಮಂಥವರು ತಪ್ಪು ಮಾಡಿದರೆ ಸರ್ಕಾರದವರು ಹೀಗೆ ನಡೆದುಕೊಳ್ಳುತ್ತಿದ್ದರೇ? ಜನಸಾಮಾನ್ಯರಿಗೊಂದು ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯ ಎನ್ನುವಂತೆ ಇವರು ವರ್ತಿಸುತ್ತಾರೆ. ಸರ್ಕಾರಿ ಅಧಿಕಾರಿಗಳ ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಕೇಳುತ್ತಾರೆ. ಹಿಂದಿದ್ದ ಬ್ರಿಟಿಷರ ಕಾನೂನಿನಂತೆ ಈಗಲೂ ಅದನ್ನೇ ಇವರು ಪಾಲನೆ ಮಾಡುತ್ತಿದ್ದಾರೆ" ಎಂದು ನ್ಯಾ. ಸಂತೋಷ್‌ ಹೆಗ್ಡೆ ಕಿಡಿಕಾರಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್