
- ಎರಡೂ ರಾಜ್ಯಗಳ ಮಧ್ಯೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಕ್ರಮ ಕೈಗೊಳ್ಳಬೇಕು
- ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುತ್ತೇವೆ
ಮಹಾರಾಷ್ಟ್ರ ಎತ್ತಿರುವ ಗಡಿ ವಿವಾದ ಹಾಗೂ ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ನೆಲ, ನಮ್ಮ ಗಡಿಯನ್ನು ನಾವು ಉಳಿಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಯಾವುದೇ ಅನುಮಾನ, ಇಲ್ಲ, ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, "ಯಾರು ಏನೇ ಹೇಳಿದರೂ ಕಾನೂನು ಹೋರಾಟವೇ ನಮ್ಮ ಮೊದಲ ಆದ್ಯತೆ. ಏಕೆಂದರೆ ಈಗಾಗಲೇ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆ ನಂತರ ಮಾತುಕತೆ ಮತ್ತಿತರ ವಿಚಾರ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ನ್ಯಾಯ ನಮ್ಮ ಕಡೆಯಿದೆ. ಎರಡೂ ರಾಜ್ಯಗಳ ಮಧ್ಯೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು.
ಹೊಂದಾಣಿಕೆ ಸರಿಪಡಿಸಲು ಮಹಾರಾಷ್ಟ್ರ ಕ್ರಮ ವಹಿಸಬೇಕು
ಭಾರತ ರಾಜ್ಯಗಳ ಒಕ್ಕೂಟ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕುಗಳಿವೆ. ರಾಜ್ಯಗಳನ್ನು ರಾಜ್ಯ ಮರುವಿಂಗಡಣಾ ಕಾಯ್ದೆಯಡಿ ರಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕರ್ತವ್ಯವಾಗಿದ್ದು, ರಾಜ್ಯಗಳ ನಡುವೆ ಶಾಂತಿ ಕಾಯ್ದುಕೊಳ್ಳಬೇಕಿದೆ. ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಕ್ರಮಕೈಗೊಂಡು ರಾಜ್ಯಗಳ ನಡುವಿನ ಹೊಂದಾಣಿಕೆಯ ಕಂದಕವನ್ನು ಕಡಿಮೆಮಾಡಬೇಕು. ನಾವು ಕಾನೂನು ಪಾಲಿಸುವವರಾಗಿದ್ದು, ನಮ್ಮ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಮಹಾರಾಷ್ಟ್ರ 2004ರಲ್ಲಿ ಪ್ರಕರಣ ದಾಖಲಿಸಿತ್ತು. ನಾವು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ ಎಂದರು.
ಈ ಸುದ್ದಿ ಓದಿದ್ದೀರಾ? : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ ಎಂದ ಏಕನಾಥ್ ಶಿಂಧೆ
ಕಾನೂನು ಹೋರಾಟಕ್ಕೆ ಆದ್ಯತೆ
ನಮ್ಮ ಮೊದಲ ಆದ್ಯತೆ ಕಾನೂನಾತ್ಮಕ ಹೋರಾಟ ಮಾಡುವುದಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದ್ದಾಗ ಅದರ ತೀರ್ಪಿಗಾಗಿ ಕಾಯಬೇಕು. ಪ್ರಕರಣವು ಅದರ ಅರ್ಜಿಯ ಅರ್ಹತೆಯ ಮೇಲೆ ನಿಂತಿಲ್ಲ, ಬದಲಾಗಿ ಮೆಂಟೇನಬಿಲಿಟಿ ಆಧಾರದ ಮೇಲೆ ನಿಂತಿದೆ. ಕಲಂ 3 ಕೂಡ ಬಹಳ ಸ್ಪಷ್ಟವಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಒಂದು ನಿರ್ಣಯಕ್ಕೆ ಬರಬೇಕಿದೆ ಎಂದರು.
ಮುಂದಿನ ವಾರದಲ್ಲಿ ಸರ್ವ ಪಕ್ಷ ಸಭೆ ಕರೆದು ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.