'ಹರ್ ಘರ್ ತಿರಂಗಾ' ಅಭಿಯಾನ ಯಶಸ್ವಿಗೊಳಿಸಿ :ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಕರೆ

  • ಮನೆ ಮನೆ ಮೇಲೆ ತಿರಂಗಾ ಹಾರಿಸಿ ದೇಶಪ್ರೇಮ ಮೆರೆಯಿರಿ
  • ರಾಷ್ಟ್ರಧ್ವಜದ ಮುಂದೆ ನಿಂತು ಸೆಲ್ಫೀ ತೆಗೆದು ಸಂಭ್ರಮಿಸಿ

ತಮ್ಮ ತಮ್ಮ  ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ 'ಹರ್ ಘರ್ ತಿರಂಗಾ' ಅಭಿಯಾನವನ್ನು ಯಶಸ್ವಿಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ.

ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ನಿಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಸದಾವಕಾಶ" ಎಂದು ಬಣ್ಣಿಸಿದರು.

ರಾಷ್ಟ್ರದೆಲ್ಲೆಡೆಯಂತೆ, ರಾಜ್ಯದಲ್ಲಿಯೂ ಆಗಸ್ಟ್ 13 ರಿಂದ 15ರವರೆಗೆ 'ಹರ್ ಘರ್ ತಿರಂಗಾ' ಅಂದರೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತ ಸ್ವಾತ್ರಂತ್ರ್ಯ ಅಮೃತ ಮಹೋತ್ಸವದ ಸಂಸ್ಮರಣೆಯ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೇ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ  'ಹರ್ ಘರ್ ತಿರಂಗಾ' ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ ಎಂದು ವಂದಿತಾ ಶರ್ಮ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದ ಡಿ ಕೆ ಶಿವಕುಮಾರ್‌

ಸಾರ್ವಜನಿಕರಲ್ಲಿ ಮನವಿ 
ಭಾರತದ ಎಲ್ಲ ಪ್ರಜೆಗಳಲ್ಲೂ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸುವ ಈ ಅಭಿಯಾನದಲ್ಲಿ ಸಾರ್ವಜನಿಕರೂ ಕೂಡಾ ಕೈಮಗ್ಗ ಅಥವಾ ವಿದ್ಯುತ್ ಮಗ್ಗದಿಂದ ನೇಯ್ದ, ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಅಥವಾ ಖಾದಿಯಲ್ಲಿ ತಯಾರಿಸಿರುವ ರಾಷ್ಟ್ರಧ್ವಜವನ್ನು ರಾಜ್ಯದಾದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶಪ್ರೇಮ ಮೆರೆಯಬೇಕೆಂಬುದು ರಾಜ್ಯ ಸರ್ಕಾರದ ಇಚ್ಛೆಯಾಗಿದೆ. ಆದಕಾರಣ, ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮುಖ್ಯ ಕಾರ್ಯದರ್ಶಿ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದರು.

ಅಲ್ಲದೆ, ರಾಷ್ಟ್ರಧ್ವಜದ ಮುಂದೆ ನಿಂತು ಸೆಲ್ಫೀ ತೆಗೆದು 'ಹರ್ ಘರ್ ತಿರಂಗಾ' ಅಂತರ್ಜಾಲ ತಾಣ https://harghartiranga.com ರಲ್ಲಿ ಅಪ್ ಲೋಡ್ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕರೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್