ಮಳೆಗಾಲ ಅಧಿವೇಶನ | ಭ್ರೂಣ ಹತ್ಯೆ ನಡೆಸಿ ಆನೆಗಳ ಸಂಖ್ಯೆ ಕಡಿಮೆ ಮಾಡಿ; ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ

Mansoon Session
  • ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ ಸ್ಪೀಕರ್ ಕಾಗೇರಿ
  • ಆನೆಗಳಿಗೆ ಆಹಾರ ಸಿಗುವಂತೆ ಮರಗಳನ್ನು ನೆಡಬೇಕು: ಅಪ್ಪಚ್ಚು

'ಭ್ರೂಣ ಹತ್ಯೆ ನಡೆಸಿ ಆನೆಗಳ ಸಂಖ್ಯೆ ಕಡಿಮೆ ಮಾಡಿ ಅಥವಾ ಸ್ಥಳಾಂತರ ಮಾಡಿ; ಏನಾದರೂ ಮಾಡಿ ನಮಗೆ ಆನೆಗಳಿಂದ ಮುಕ್ತಿ ಕೊಡಿಸಿ' ಎಂದು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದ ಮಲೆನಾಡು ಪ್ರದೇಶದಲ್ಲಿ ರೈತರ ಬೆಳೆ ಮತ್ತು ಪ್ರಾಣಕ್ಕೆ ಹಾನಿಯುಂಟು ಮಾಡುತ್ತಿರುವ ಆನೆ ಮತ್ತು ಇತರೆ ಕಾಡು ಪ್ರಾಣಿಗಳನ್ನು ನಿಯಂತ್ರಿಸುವಂತೆ ಮಲೆನಾಡು ಭಾಗದ ಹಲವು ಶಾಸಕರು ವಿಧಾನಸಭೆಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು. 

ಕಾಡಾನೆಗಳ ನಿಯಂತ್ರಣ ಮತ್ತು ಬೆಳೆ ಪರಿಹಾರದ ಬಗ್ಗೆ ಬುಧವಾರ (ಸೆ.21) ಸದನದಲ್ಲಿ ಚರ್ಚೆಯಾಗಿತ್ತು. ಇಂದು ಕೂಡ ಚುಕ್ಕೆ ಗುರುತಿನ ಪ್ರಶ್ನೋತ್ತರ ವೇಳೆಯಲ್ಲಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು. ಸಕಲೇಶಪುರ ಶಾಸಕ ಎಚ್ ಕೆ ಕುಮಾರಸ್ವಾಮಿ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಧ್ಯಪ್ರವೇಶಿಸಿ ಕಾಡಾನೆಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಸದನಕ್ಕೆ ತಿಳಿಸಿದರು.

"ನಾವು ಪರಿಹಾರ ಕೊಡ್ತೀವಿ; ನೀವು ಸಾಯುವುದಕ್ಕೆ ತಯಾರಿಗಿರಿ ಎಂಬಂತಿದೆ ಸರ್ಕಾರದ ಉತ್ತರ. ನನ್ನ ಕ್ಷೇತ್ರದಲ್ಲೇ ಇತ್ತೀಚೆಗ ಆರು ಜನ ಕಾಡಾನೆ ದಾಳಿಯಿಂದ ಸತ್ತಿದ್ದಾರೆ. ಆನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅವುಗಳಿಗೆ ಭ್ರೂಣ ಹತ್ಯೆ ಅಥವಾ ಸ್ಥಳಾಂತರ ಮಾಡುವ ಬಗ್ಗೆ ಯೋಚಿಸಬೇಕು. ಆದರೆ, ಯಾವುದೂ ಆಗುತ್ತಿಲ್ಲ" ಎಂದು ಬಿಜೆಪಿ ಶಾಸಕ ಎಚ್‌ ಕೆ ಕುಮಾರಸ್ವಾಮಿ ಹೇಳಿದರು. 

"ಭ್ರೂಣ ಹತ್ಯೆ ಮಾಡಿ ಆನೆಗಳ ಸಂಖ್ಯೆ ಕಡಿಮೆ ಮಾಡಿ, ಸ್ಥಳಾಂತರ ಅಥವಾ ಪ್ರತ್ಯೇಕ ಕಾರಿಡಾರ್ ರಚಿಸಿ. ನಮಗ್ಯಾಕೆ ತೊಂದರೆ ಕೊಡ್ತೀರಾ? ಚುನಾವಣೆ ಹತ್ತಿರ ಬರುತ್ತಿದೆ; ಜನ ನಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಾಡು ಪ್ರಾಣಿ ಬೇಕೋ, ನಾವು ಬೇಕೋ ಎಂದು ಜನ ಕೇಳುತ್ತಿದ್ದಾರೆ. ನಮಗೆ ಪರಿಹಾರ ಬೇಕು. ಆನೆಗಳನ್ನು ಖಾಲಿ ಮಾಡಿಸಬೇಕು. ಶವ ಇಟ್ಟುಕೊಂಡು ಬಂದು ನೋಡುವಂತೆ ನಮ್ಮನ್ನು ಒತ್ತಾಯಿಸುತ್ತಾರೆ. ಜನ ನಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪರಿಹಾರ ಬೇಕು" ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.

"74 ಆನೆಗಳನ್ನು ಮೂಡಿಗೆರೆಯಿಂದ ಸ್ಥಳಾಂತರ ಮಾಡಲಾಗಿದೆ. ಸತ್ತವರಿಗೆ ಪರಿಹಾರವನ್ನು ₹7.5 ಲಕ್ಷದಿಂದ ₹14 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಬೆಳೆ ಪರಿಹಾರವನ್ನೂ ದುಪ್ಪಟ್ಟು ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಆನೆ ತಡೆಬೇಲಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಬೇಕಿದ್ದರೆ ಇನ್ನೂ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ, ಆನೆಗಳ ನಿಯಂತ್ರಣಕ್ಕೆ ಭ್ರೂಣ ಹತ್ಯೆ ಸಾಧ್ಯವಿಲ್ಲ" ಎಂದು ಮುಖ್ಯಮಂತ್ರಿಗಳ ಪರವಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸದನಕ್ಕೆ ತಿಳಿಸಿದರು.  

“ತೊಂದರೆ ಕೊಡುವ ಆನೆಗಳನ್ನು ಹಿಡಿದು ಮತ್ತೊಂದು ಕಾಡಿಗೆ ಬಿಡಲಾಗುತ್ತಿದೆ. ಇದರಿಂದ ಪ್ರಯೋಜನವಿಲ್ಲ. ಆನೆಗಳಿಗೆ ಆಹಾರ ಸಿಗುತ್ತಿಲ್ಲ. ಟೀಕ್ ಮರಗಳನ್ನು ತೆಗೆದು ಅಲ್ಲಿ ಆನೆಗಳಿಗೆ ಆಹಾರ ಸಿಗುವಂತೆ ಗಿಡಗಳನ್ನು ನೆಡಬೇಕು” ಎಂದು ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ?: ಪಂಚಮಸಾಲಿ ಮೀಸಲಾತಿ ವಿಚಾರ | ಜಯ ಮೃತ್ಯುಂಜಯ ಸ್ವಾಮಿ ವಿರುದ್ಧ ನಿರಾಣಿ ಅಸಮಾಧಾನ

ತಜ್ಞರ ಸಮಿತಿ ರಚಿಸುವಂತೆ ಸಲಹೆ ನೀಡಿದ ಸ್ಪೀಕರ್

ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಮತ್ತು ಪ್ರಾಣ ಹಾನಿ ಆಗುತ್ತಿದೆ. ಕಾಡುಕೋಣ, ಹಂದಿ, ನವಿಲು ಮತ್ತು ಕಾಡಾನೆಗಳು ಹಾನಿ ಮಾಡುತ್ತಿವೆ. ಅವುಗಳನ್ನು ಒಂದು ಕಡೆ ಹಿಡಿದು ಮತ್ತೊಂದು ಕಡೆಗೆ ಬಿಟ್ಟರೆ ಪರಿಹಾರ ಸಿಗಲ್ಲ” ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

“ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ತಜ್ಞರ ಉನ್ನತ ಸಮಿತಿ ರಚಿಸಿ ವರದಿ ತರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಪರಿಹಾರ ಹಣ ದುಪ್ಪಟ್ಟು ನೀಡುವುದಕ್ಕಿಂತಲೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು” ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್