ಮಂಗಳೂರು ಸರಣಿ ಹತ್ಯೆ: ಕಾನೂನಿಗೆ ಎಲ್ಲವೂ ಒಂದೇ; ಎಲ್ಲರಿಗೂ ಸಮಾನ ನ್ಯಾಯ ಸಿಗುತ್ತದೆ: ಸಿಎಂ ಬೊಮ್ಮಾಯಿ

  • ಕಾಂಗ್ರೆಸ್ ಅವಧಿಯಲ್ಲಿ 23 ಸರಣಿ ಕೊಲೆಗಳಾಗಿವೆ
  • ಅಗತ್ಯ ಬಿದ್ದರೆ ಯೋಗಿ ಮಾದರಿ ಅಳವಡಿಸಿಕೊಳ್ಳುತ್ತೇವೆ 

"ಎಲ್ಲ ನಾಗರಿಕರ ಜೀವವೂ ನಮಗೆ ಅಮೂಲ್ಯ. ಇದಕ್ಕೆ ಮಂಗಳೂರಿನ ಘಟನೆಗಳೂ ಹೊರತಲ್ಲ. ಎಲ್ಲ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ಮಾಡಿ ಸಮಾನ ನ್ಯಾಯ ಕೊಡಿಸುತ್ತದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಆರ್ ಟಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೊಲೆ ಪ್ರಕರಣದ ವಿಚಾರದಲ್ಲಿ ಪೊಲೀಸ್ ಇಲಾಖೆ ಕಾನೂನಾತ್ಮಕ ಕ್ರಮ ಜರುಗಿಸಿದೆ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಕೆಲವು ಸಾಮಾಜಿಕ ವಿದ್ರೋಹದ ಸಂಘಟನೆಗಳು ಇಂತಹ ಕೆಲಸ ಮಾಡುತ್ತಿವೆ. ಕೆಲವೇ ವ್ಯಕ್ತಿಗಳು ಇದನ್ನು ಮಾಡಿದ್ದಿದ್ದರೆ ಬೇರೆ ಮಾತು. ಆದರೆ, ಇದರ ಹಿಂದಿರುವ ಶಕ್ತಿ ಬೇರೆ. ಹೀಗಾಗಿ ಈ ವಿಚಾರದಲ್ಲಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ನ್ಯಾಯ ಸಿಗಬೇಕು ಎಂದರೆ ಹೇಗೆ ಸಾಧ್ಯ? ಕೆಲವು ದಿನ ಕಾದು ನೋಡಿದರೆ ಎಲ್ಲದಕ್ಕೂ ಉತ್ತರ ಸಿಗಲಿದೆ" ಎಂದು ಬೊಮ್ಮಾಯಿ ಹೇಳಿದರು.

Eedina App

"ನಿನ್ನೆ (ಗುರುವಾರ) ನಾನು ಮಂಗಳೂರಿನಿಂದ ಹೊರಡುವ ವೇಳೆ ಮತ್ತೊಂದು ಕೊಲೆ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಮಾತನಾಡಿದ್ದೇನೆ. ಎಡಿಜಿಪಿ ಅವರಿಗೆ ಸ್ಥಳದಲ್ಲೇ ಇದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಜರುಗಿಸಲು ಹೇಳಿದ್ದೇನೆ. ಇಂದು (ಶುಕ್ರವಾರ) ಮಧ್ಯಾಹ್ನ ಪೊಲೀಸ್ ಉನ್ನತಾಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇನೆ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ಯೋಗಿ ಮಾದರಿ ಜಾರಿ ವಿಚಾರದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಸಮಯ ಬಂದಾಗ ಅದಕ್ಕೆ ತಕ್ಕಂತೆ ನಾವೂ ಬದಲಾಗುತ್ತಾ ಹೊಸದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಗತ್ಯ ಬಿದ್ದರೆ ಯೋಗಿ ಮಾದರಿಯನ್ನೂ ಅಳವಡಿಸಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ? : ಪ್ರವೀಣ್ ನೆಟ್ಟಾರು ಹತ್ಯೆ | ಬಿಜೆಪಿಗೆ ಮುಳುವಾಗಲಿದೆಯಾ 'ಹಿಂದೂ' ಅಸ್ತ್ರ?

ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಇದೇ ವೇಳೆ ತಿರುಗೇಟು ನೀಡಿದ ಬೊಮ್ಮಾಯಿ, "ರಾಜಕೀಯ ಕಣ್ಣಿನಿಂದ ನೋಡಿದರೆ ಎಲ್ಲವೂ ವೈಫಲ್ಯದ ರೀತಿಯೇ ಕಾಣುವುದು. ಅವರ ಕಾಲದಲ್ಲಿ 23 ಸರಣಿ ಕೊಲೆಗಳಾಗಿದ್ದು ಮರೆತು ಹೋಯಿತೇ? ಮೈಸೂರಿನ ಅವರದ್ದೇ ಪಕ್ಷದ ಶಾಸಕನ ಮೇಲೆ ಎಸ್ ಡಿ ಪಿ ಐ ದಾಳಿ ನಡೆಸಿದ್ದು ಗೊತ್ತಿಲ್ಲವೇ" ಎಂದು ಪ್ರಶ್ನಿಸಿದರು.

"ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಈ ಸಂಘಟನೆಳ ಮೇಲಿದ್ದ ಮೊಕದ್ದಮೆ ಹಿಂಪಡೆದ ಕಾರಣ ಅಲ್ಲಿನ ಕೆಲವು ವಿದ್ರೋಹಿಗಳು ರಾಜಾರೋಷವಾಗಿ ಓಡಾಡಿಕೊಂಡು ಇಂತಹ ಘಟನೆ ನಡೆಯಲು ಕುಮ್ಮಕ್ಕು ಕೊಡುತ್ತಿದ್ದಾರೆ. ಅಂದೇ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಿದ್ದರೆ ಈಗ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ" ಎಂದು ಮುಖ್ಯಮಂತ್ರಿಗಳು ಹೇಳಿದರು. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app