ಈ ದಿನ ವಿಶೇಷ | ನಡೆದದ್ದು ರಾಜ್ಯ ಬಿಜೆಪಿ ನಾಯಕರ ಸಭೆ, ಚರ್ಚೆಯಾಗಿದ್ದು ಸಿದ್ದರಾಮೋತ್ಸವ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಸಲುವಾಗಿ ದಾವಣಗೆರೆಯಲ್ಲಿ ಆಯೋಜನೆಗೊಂಡಿದ್ದ ಸಿದ್ದರಾಮೋತ್ಸವ ನಡೆದು ತಿಂಗಳುಗಳು ಉರುಳಿದ್ದರೂ, ಅದರ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಅದರಲ್ಲೂ ರಾಜ್ಯ ಬಿಜೆಪಿಗೆ ಅಲ್ಲಿನ ಯಶಸ್ಸನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಭಾನುವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆ ಇದಕ್ಕೆ ಸಾಕ್ಷಿ.

ಮುಂಬರುವ ಚುನಾವಣೆಯಲ್ಲಿ ಪಕ್ಷ ಮುನ್ನಡೆಸುವ ಹಾಗೂ ಮರಳಿ ಅಧಿಕಾರಕ್ಕೆ ತರುವ ಸಲುವಾಗಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲು ಸೆಪ್ಟೆಂಬರ್ 4ರಂದು ರಾಜ್ಯ ಬಿಜೆಪಿ ನಾಯಕರು ಸಭೆ ಹಮ್ಮಿಕೊಂಡಿದ್ದರು.

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಈ ಸಭೆ ಆಯೋಜನೆಗೊಂಡಿತ್ತು. ಸಭೆಯಲ್ಲಿ  ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ ಎಸ್ ಯಡಿಯೂರಪ್ಪ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ರಾಜೇಶ್ , ಜತೆಗೆ ಕೆ ಎಸ್ ಈಶ್ವರಪ್ಪ,ಗೋವಿಂದ್ ಕಾರಜೋಳ, ಆರ್ ಅಶೋಕ್ ಅವರಂತಹ ಪ್ರಮುಖ ನಾಯಕರು ಭಾಗವಹಿಸಿದ್ದರು.

ಚುನಾವಣೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಜಿಲ್ಲಾವಾರು, ಘಟಕವಾರು ಸಮಾವೇಶಗಳನ್ನು ಮಾಡುವುದು, ಎಲ್ಲ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡುವುದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಬಳಿಗೆ ತೆರಳಲು ನಿರ್ಧರಿಸಲಾಯಿತು.

ಹಾಗೆಯೇ ಜನೋತ್ಸವವನ್ನು ಜನರ ಉತ್ಸವವನ್ನಾಗಿಸಲು ಮುಂದಾಗಬೇಕು. ಸರ್ಕಾರದ ಸಾಧನೆಯನ್ನು ಜನರಿಗೆ ನೇರವಾಗಿ ತಲುಪುವಂತೆ ಮಾಡುವುದು, ಅದಕ್ಕೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮುಂದಿನ ಮೂರು ತಿಂಗಳ ಕಾಲ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ತೀರ್ಮಾನಕ್ಕೆ ಬರಲಾಯಿತು.

ಈ ಸುದ್ದಿ ಓದಿದ್ದೀರಾ?: ಸಮಾವೇಶಗಳ ಮೂಲಕ ಟಾರ್ಗೆಟ್ 140 ರೀಚ್‌ ಮಾಡಲು ರೆಡಿಯಾದ ಬಿಎಸ್‌ ವೈ

ಆದರೆ, ಬಿಜೆಪಿ ನಾಯಕರು ತಮ್ಮ ಪಕ್ಷ ಸಂಘಟನೆ ಸಭೆಯಲ್ಲಿ ತಮ್ಮ ಕಾರ್ಯಕ್ರಮಕ್ಕಿಂತ ಜಾಸ್ತಿ ಚರ್ಚಿಸಿದ್ದು ಸಿದ್ದರಾಮೋತ್ಸವದ ವಿಚಾರವಾಗಿ ಎನ್ನುವುದು ಮೂಲಗಳ ಮಾಹಿತಿ.

ಬಿಜೆಪಿ ಧುರೀಣರು ತಮ್ಮೆಲ್ಲ ಮಾತುಕತೆ ಬಳಿಕ ಜನೋತ್ಸವವನ್ನು ನಿಜವಾದ ಜನ ಉತ್ಸವನ್ನಾಗಿ ಮಾಡಲೇ ಬೇಕೆಂದು ಪಣತೊಟ್ಟರು. ಆದರೆ, ಅದನ್ನು ಸಿದ್ದರಾಮೋತ್ಸವವನ್ನು ಮೀರಿಸುವಂತೆ ಮಾಡುವುದು ಹೇಗೆ? ದೊಡ್ಡ ಪ್ರಮಾಣದ ಜನ ಕರೆ ತರುವುದು ಹೇಗೆ? ಅಲ್ಲಿನ ಕಾರ್ಯಕ್ರಮದಂತೆ  ಜನ ಬರದಿದ್ದರೆ ಏನು ಮಾಡುವುದು? ಜನೋತ್ಸವನ್ನು ಅದರ ಪರ್ಯಾಯ ಉತ್ಸವವನ್ನಾಗಿ ಘೋಷಿಸುವುದೊ ಬೇಡವೋ?, ಬರೀ ಸರ್ಕಾರಿ ಸಾಧನಾ ಕಾರ್ಯಕ್ರಮ ಎಂದು ಹೇಳುವುದೋ? ಎನ್ನುವ ವಿಚಾರವಾಗಿ ಗಹನವಾದ ಚರ್ಚೆ ನಡೆಸಿದರು ಎನ್ನಲಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್