ಒಮ್ಮತಕ್ಕೆ ಬಾರದ ಹಾಲಿನ ದರ ಏರಿಕೆ ಸಭೆ : ಕೆಎಂಎಫ್‌ ಹೆಗಲಿಗೆ ಹೊಣೆ

CM KMF MEETING
  • ಇನ್ನೆರಡು ದಿನದಲ್ಲಿ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಪ್ರಕಟಿಸಲು ಸೂಚನೆ
  • ಕೆಎಂಎಫ್‌ ಆಡಳಿತ ಮಂಡಳಿ ಸಭೆ ಬಳಿಕ ಹಾಲಿನ ದರ ಏರಿಕೆ ನಿರ್ಧಾರ ಪ್ರಕಟ

ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೆ ಅನ್ಯಾಯವಾಗದ ಸೂತ್ರ ರೂಪಿಸಿ ಹಾಲಿನ ದರ ಏರಿಕೆ ಮಾಡಲು ಕೆಎಂಎಫ್‌ಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೋಮವಾರ ಸಂಜೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಹಾಲುದರ ಏರಿಕೆ ವಿಚಾರದ ಹಿನ್ನೆಲೆಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೂ, ಗ್ರಾಹಕರಿಗೂ ಆರ್ಥಿಕ ಹೊಡೆತವಾಗದಂತೆ ಬೆಲೆ ಏರಿಕೆ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.

ಈಗಾಗಲೇ ವಿವಿಧ ರಾಜ್ಯಗಳಲ್ಲಿರುವ ಹಾಲಿನ ದರ ಹಾಗೂ ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ, ಕೆಎಂಎಫ್ ಸಂಸ್ಥೆಗೆ ತಗಲುತ್ತಿರುವ ವೆಚ್ಚ, ಹಾಲಿನ ದರ ಏರಿಕೆಗೆ  ಕಾರಣಗಳು, ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಗಳು, ನಷ್ಟಗಳನ್ನು ತಡೆಗಟ್ಟಲು ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಲ್ಲಿನ ಲೆಕ್ಕಾಚಾರಗಳನ್ನು ಪರಿಶೀಲಿಸಿ, ಗ್ರಾಹಕ ಹಾಗೂ ರೈತನಿಗೆ ಅನುಕೂಲವಾಗುವ ಸೂತ್ರವನ್ನು ಎರಡು ದಿನಗಳಲ್ಲಿ  ರೂಪಿಸಿಕೊಂಡು, ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

AV Eye Hospital ad

"ಏಕಾಏಕಿ ₹3 ದರ ಹೆಚ್ಚಳ ಮಾಡುವುದು ಬೇಡ ಎನ್ನುವುದು ನನ್ನ ಸಲಹೆ" ಎಂದ ಮುಖ್ಯಮಂತ್ರಿಗಳು, 'ರೈತರು ಹಾಗೂ ಗ್ರಾಹಕರ  ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಏಕೆಂದರೆ ಕೆಎಂಎಫ್ ಕೂಡ ಸರ್ಕಾರದ ಒಂದು ಅಂಗ' ಎಂದರು.

ಈ ಸುದ್ದಿ ಓದಿದ್ದೀರಾ? : ಹಾಲಿನ ದರ ಪರಿಷ್ಕರಣೆ | ನ. 20 ರ ನಂತರ ಅಂತಿಮ ತೀರ್ಮಾನ; ಸಿಎಂ ಬೊಮ್ಮಾಯಿ

ರೈತರಿಗೆ ಪ್ರೋತ್ಸಾಹ ಧನ, ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಗ್ರಾಹಕರ ಹಾಗೂ ರೈತರ ಹಿತಚಿಂತನೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದೆ. ಹೀಗಾಗಿ ಕೆಎಂಎಫ್‌ಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ, ತೀರ್ಮಾನ ಕೈಗೊಳ್ಳಬೇಕೆಂದು ಕೆಎಂಎಫ್‌ಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app