75 ವರ್ಷವಾಗಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿ; ಸಚಿವ ಅಶ್ವತ್ಥನಾರಾಯಣ

  • ಬಿಜೆಪಿಯಂತೆ ಕಾಂಗ್ರೆಸ್ಸಿಗರೂ 75 ವರ್ಷ ಮೀರಿದ ನಾಯಕರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ
  • ಸೈಲೆಂಟ್ ಸುನೀಲನ ಬಗ್ಗೆ ನಿಮಗೆ ಅಗತ್ಯ ಮಾಹಿತಿ ಬೇಕಿದ್ದರೆ ಪೊಲೀಸರ ಬಳಿ ಕೇಳಿಕೊಳ್ಳಿ 

"ಸಿದ್ದರಾಮಯ್ಯನವರಿಗೆ 75 ವರ್ಷ ಆಗಿದೆ. ಈ ವಯಸ್ಸಿನಲ್ಲಿ ಸಕ್ರಿಯ ರಾಜಕಾರಣ ಮಾಡುವುದು ಸೂಕ್ತ ಅಲ್ಲ. ಹೀಗಾಗಿ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದು ಸೂಕ್ತ" ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, "ಭಂಡತನ ಅಂದರೆ ಸಿದ್ದರಾಮಯ್ಯ, ನಿದ್ದೆ ರಾಮಯ್ಯ ಅಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯನವರಿಗೆ ಮತ ಬ್ಯಾಂಕ್ ರಾಜಕಾರಣ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ" ಎಂದು ಲೇವಡಿ ಮಾಡಿದರು.

Eedina App

"ಹೋದಲ್ಲೆಲ್ಲ ಮುಂದೆ ನಾನೇ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಅವರಿಗೆ ಸಕ್ರಿಯ ರಾಜಕಾರಣ ಕಷ್ಟ ಸಾಧ್ಯ. ಹೀಗಾಗಿ ಅವರು ನಿವೃತ್ತಿ ತಗೊಂಡು, ಬೇರೆಯವರಿಗೆ ಅವಕಾಶ ಮಾಡಿಕೊಡಲಿ" ಎಂದ ಅಶ್ವತ್ಥನಾರಾಯಣ, "ಕಾಂಗ್ರೆಸ್‌ಗೆ ನಾಯಕತ್ವವೇ ಇಲ್ಲ. ಭವಿಷ್ಯವೂ ಇಲ್ಲ, ಆ ಪಕ್ಷ ಪಕ್ಷ ದಿವಾಳಿಯಾಗಿದೆ" ಎಂದರು.

ಸಿದ್ದರಾಮಯ್ಯ ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಟೀಕಿಸಿದ ಅಶ್ವತ್ಥನಾರಾಯಣ, "ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೂ ವಯಸ್ಸಾಗಿದೆ. ಅವರೂ ಕೂಡ ಭವಿಷ್ಯದ ಯುವಕರ ಬಗ್ಗೆ ಯೋಚನೆ ಮಾಡುವುದು ಒಳಿತು" ಎಂದು ಮಾರ್ಮಿಕವಾಗಿ ನುಡಿದರು.

AV Eye Hospital ad

ಇದೇ ವೇಳೆ ರೌಡಿ ಶೀಟರ್ ಸೈಲೆಂಟ್ ಸುನೀಲನ ವಿಚಾರವಾಗಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, "ನಮ್ಮ ಪಕ್ಷಕ್ಕೆ ಸೇರ್ಪಡೆಯಾದವರ ಬಗ್ಗೆ ನಾನು ಮಾತನಾಡಬಹುದು. ನಮ್ಮ ಪಕ್ಷಕ್ಕೆ ಸಂಬಂಧಿಸದೇ ಇರುವವರ ಬಗ್ಗೆ ನಾನೇನು ಹೇಳಲಿ. ಅವರ ಬಗ್ಗೆ ಮಾತನಾಡಲು ನಾನು ವಕ್ತಾರನಲ್ಲ" ಎಂದು ಸಿಡುಕಿದರು.

"ಸೈಲೆಂಟ್ ಸುನೀಲನಿಗೂ ನಮ್ಮ ಪಾರ್ಟಿಗೂ ಯಾವುದೇ ಸಂಬಂಧ ಇಲ್ಲ. ಅವನ ವಿಚಾರದಲ್ಲಿ ಸಮರ್ಥನೆ ಮಾಡಿಕೊಳ್ಳಲು ನಾನೇನು ವಕ್ತಾರನೂ ಅಲ್ಲ" ಎಂದು ಸಚಿವ ಅಶ್ವತ್ಥನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

"ಚಾಮರಾಜಪೇಟೆಯಲ್ಲಿ ನಡೆದ ಸೈಲೆಂಟ್ ಸುನೀಲನ ಕಾರ್ಯಕ್ರಮಕ್ಕೂ ಪಾರ್ಟಿಗೂ ಸಂಬಂಧ ಇಲ್ಲ, ಸುನೀಲ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ ಭಾಗವಾಗಿ ನಮ್ಮ ಸಂಸದರು ಹೋಗಿದ್ದರು ಅಷ್ಟೆ" ಎಂದ ಅಶ್ವತ್ಥನಾರಾಯಣ, "ನಾವು ಕಾನೂನಿಗೆ ಬೆಲೆ ಕೊಡ್ತೇವೆ, ಪಕ್ಷದ ಅಧ್ಯಕ್ಷರೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಚರ್ಚೆ ಅನಗತ್ಯ" ಎಂದರು.

ಈ ಸುದ್ದಿ ಓದಿದ್ದೀರಾ? : ಭೂಗತ ಪಾತಕಿ ದಾವೂದ್ ಕೂಡ ಬಿಜೆಪಿ ಸೇರಬಹುದು : ಕಾಂಗ್ರೆಸ್‌ ವ್ಯಂಗ್ಯ 

"ಪದೇ ಪದೇ ಈ ವಿಚಾರವನ್ನು ನನ್ನ ಬಳಿ ಕೇಳುವ ಬದಲು ನಿಮಗೆ ಅಗತ್ಯ ಮಾಹಿತಿ ಪೊಲೀಸ್ ಬಳಿ ಕೇಳಿ. ಕಾನೂನು ಚೌಕಟ್ಟನ್ನು ನಾವು ಪರಿಪಾಲನೆ ಮಾಡ್ತೇವೆ" ಎಂದು ಮಾದ್ಯಮಗಳ ಪ್ರಶ್ನೆಗೆ ಖಾರವಾಗಿಯೇ ಸಚಿವ ಅಶ್ವತ್ಥನಾರಾಯಣ ಉತ್ತರ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app